ಮಂಗಳೂರು: ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮೂವರು ರೌಡಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಿ ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಹೊರವಲಯದ ಶಕ್ತಿನಗರ ಪದವು ಗ್ರಾಮ ನಿವಾಸಿ ಜಯಪ್ರಶಾಂತ್, ಮಂಗಳೂರಿನ ಮೂಳೂರು ಗ್ರಾಮದ ಗುರುಪುರ ಪೋಸ್ಟ್ ನಿವಾಸಿ ನವಾಜ್, ಉಳ್ಳಾಲ, ಕೋಟೆಪುರ ನಿವಾಸಿ ಮೊಹಮ್ಮದ್ ಕಬೀರ್ ಬಂಧಿತರು.
ಜಯಪ್ರಶಾಂತ್ ವಿರುದ್ಧ ಒಟ್ಟು 8 ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 3 ಕೋಮುಗಲಭೆ, ಕೊಲೆ ಯತ್ನ 4 ನೈತಿಕ ಪೊಲೀಸ್‌ಗಿರಿ ಪ್ರಕರಣಗಳಿವೆ. ನವಾಜ್ ವಿರುದ್ಧ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧೆಡೆ ಒಟ್ಟು 8 ಪ್ರಕರಣಗಳಿವೆ. ಇವುಗಳಲ್ಲಿ 1 ಕೊಲೆ, 1 ಕೊಲೆ ಯತ್ನ, 1 ಕ್ರಿಮಿನಲ್ ಬೆದರಿಕೆ, 2 ಗಾಂಜಾ ಸೇವನೆ ಮತ್ತು 3 ಮಾದಕವಸ್ತು ಕಳ್ಳಸಾಗಣೆ ಪ್ರಕರಣಗಳಿವೆ. ಮುಹಮ್ಮದ್ ಕಬೀರ್ ಒಟ್ಟು 14 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಇವುಗಳಲ್ಲಿ 1 ಕೊಲೆ, 3 ಕೊಲೆ ಯತ್ನ, 6 ಗಲಭೆ, 3 ಗಾಯದ ಪ್ರಕರಣಗಳು ಮತ್ತು 1 ಕಿರುಕುಳ ಪ್ರಕರಣಗಳು ಸೇರಿವೆ.
ಲೋಕಸಭಾ ಚುನಾವಣೆಯನ್ನು ಶಾಂತಿ ಹಾಗೂ ನ್ಯಾಯಯುತವಾಗಿ ನಡೆಸಲು ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ನಗರ ಪೊಲೀಸರು, ಡ್ರಗ್ ಪೆಡ್ಲರ್ಗಳು, ಅಪರಾಧಿಗಳು, ಜೂಜುಕೋರರು, ಗೂಂಡಾಗಳು, ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರನ್ನು ಬಂಧಿಸುತ್ತಿದ್ದಾರೆ.
"ಈ ಮೂವರು ಹಲವಾರು ಅಪರಾಧಗಳಲ್ಲಿ ಭಾಗಿಯಾಗಿ ಬಂಧನಕ್ಕೊಳಗಾಗಿದ್ದರು. ಜಾಮೀನಿನ ಮೇಲೆ ಹೊರಬಂದ ಬಳಿಕವೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಅಪರಾಧ ಮತ್ತು ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಆದ್ದರಿಂದ ಬಂಧಿಸಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಪರವಾನಗಿ ಶಸ್ತ್ರಾಸ್ತ್ರ ಹೊಂದಿರುವ ನಾಗರಿಕರಿಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಠೇವಣಿ ಇರಿಸಲು ಕಮೀಷನರ್ ಆದೇಶ