ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕಿನ ಬುಳ್ಳಸಂದ್ರ ಗ್ರಾಮದ ಹಲವರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಓರ್ವ ಮಹಿಳೆ ಚಿಕಿತ್ಸೆ ಫಲಿಸದೇ ಮೃತಪಟ್ಟರೆ, ಇನ್ನಿಬ್ಬರು ವಯೋಸಹಜ ಕಾಯಿಲೆಯಿಂದ ಅಸುನೀಗಿದ್ದಾರೆ ಎಂದು ಡಿಹೆಚ್ಒ ಡಾ. ಮಂಜುನಾಥ್ ಹೇಳಿದ್ದಾರೆ. ಕಾಟಮ್ಮ, ತಿಮ್ಮಕ್ಕ ಮತ್ತು ಗಿರಿಯಮ್ಮ ಮೃತ ದುರ್ದೈವಿಗಳು. ಒಂದೇ ದಿನ ಮೂವರು ಮೃತಟ್ಟಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಜಾತ್ರೆಯ ನಿಮಿತ್ತ ಗ್ರಾಮದಲ್ಲಿ ಅಡುಗೆ ವ್ಯವಸ್ಥೆ ಮಾಡಲಾಗಿತ್ತು. ಮನೆಯಲ್ಲೇ ಅಡುಗೆ ಮಾಡಿ ಜನರಿಗೆ ಬಡಿಸಲಾಗಿತ್ತು. ಈ ಆಹಾರ ಸೇವಿಸಿದ ಗ್ರಾಮದ 18 ಮಹಿಳೆಯರು, 12 ಪುರುಷರು ಸೇರಿದಂತೆ ಹಲವರು ಅಸ್ವಸ್ಥರಾಗಿದ್ದು, ಅವರಿಗೆ ಗ್ರಾಮದ ಶಾಲಾ ಆವರಣದಲ್ಲಿ ತೆರಯಲಾಗಿರುವ ತಾತ್ಕಾಲಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಷ ಮಿಶ್ರಿತ ಆಹಾರ ಸೇವಿಸಿ ಮೃತಪಟ್ಟ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ''ಮೃತಪಟ್ಟವರೆಲ್ಲರೂ ಬೇರೆ ಕಾಯಿಲೆಗೆ ಒಳಗಾಗಿದ್ದರಲ್ಲದೇ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು'' ಎಂದು ತಿಳಿಸಿದ್ದಾರೆ.
ಘಟನೆ ಬಗ್ಗೆ ಡಿಹೆಚ್ಒ ಹೇಳಿದ್ದಿಷ್ಟು: ಈ ಬಗ್ಗೆ ಮಾಹಿತಿ ನೀಡಿರುವ ಡಿಹೆಚ್ಒ ಡಾ. ಮಂಜುನಾಥ್, ''24ರಂದು ಸಂಜೆ ಮೂರ್ನಾಲ್ಕು ಜನರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿತ್ತು. 25ರಂದು ಆ ಸಂಖ್ಯೆ 8ಕ್ಕೆ ಏರಿತು. ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿತ್ತು. ಹಾಗಾಗಿ ಅವರನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಡಿಹೈಡ್ರೇಷನ್(ನೀರಿನ ಅಂಶ) ಹಾಗೂ ಬಿಪಿ ಕಡಿಮೆಯಾಗಿದ್ದರಿಂದ 40 ವರ್ಷದ ಮಡಕಶಿರಾ ಮೂಲದ ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಈ ಮಹಿಳೆ ಜಾತ್ರೆ ನೋಡಲು ಬುಳ್ಳಸಂದ್ರ ಗ್ರಾಮಕ್ಕೆ ಬಂದಿದ್ದರು. ಅದೇ ದಿನ 80 ವರ್ಷದ ಓರ್ವ ಮಹಿಳೆ ಹಾಗೂ 78 ವರ್ಷದ ಇನ್ನೊಬ್ಬ ಮಹಿಳೆ ಇಬ್ಬರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಇದುವರೆಗೆ ಗ್ರಾಮದಲ್ಲಿ ಒಟ್ಟು 27 ವಾಂತಿ ಭೇದಿ ಪ್ರಕರಣಗಳು ಕಂಡು ಬಂದಿವೆ. ಗ್ರಾಮದ ಸರ್ಕಾರಿ ಶಾಲೆಯಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆಯಲಾಗಿದ್ದು, ಎಲ್ಲಾ ಕೇಸ್ಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯ ಸಿಬ್ಬಂದಿ ಕೇಂದ್ರದಲ್ಲಿ 24 ಗಂಟೆ ಚಿಕಿತ್ಸೆ ನೀಡುತ್ತಿದೆ. ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಸದ್ಯ ಅವರು ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ಇಬ್ಬರು ಐಸಿಯುವಿನಲ್ಲಿದ್ದು, ಅವರ ಆರೋಗ್ಯ ಸುಧಾರಿಸುತ್ತಿದೆ'' ಎಂದರು.
''ಈ ಸಾವು ಪ್ರಸಾದ ಸೇವನೆ ಅಥವಾ ನೀರಿನಿಂದ ಆಗಿದೆಯೋ ಅಂತ ತಿಳಿಯಲು ಮಲ ಮತ್ತು ನೀರಿನ ಮಾದರಿ ಪರೀಕ್ಷೆ ಮಾಡಬೇಕಿದೆ. ಆ ಬಳಿಕ ವಾಂತಿ ಕಾರಣ ಏನಿರಬಹುದೆಂದು ಗೊತ್ತಾಗಲಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಒಬ್ಬರು ಮಾತ್ರ ವಾಂತಿ ಬೇಧಿಯಿಂದ ಮೃತಪಟ್ಟಿದ್ದು, ಇಬ್ಬರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿರುವುದಾಗಿ'' ಅವರು ತಿಳಿಸಿದರು.
ಮರಣೋತ್ತರ ಪರೀಕ್ಷೆ ಮಾಡಿಲ್ಲ; ''ಜಾತ್ರೆ ದಿನ 500 ಜನರಿಗೆ ಟೊಮೋಟೊ ಬಾತ್ ಹಂಚಿದ್ದರು. ಭಾನುವಾರ ಬೆಳಗ್ಗೆ ಸಾಮೂಹಿಕ ಭೋಜನ ಕೂಡ ನಡೆದಿತ್ತು. ಮಧ್ಯಾಹ್ನವೇ ಕೆಲವರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿತು. ಊಟ ಮಾಡಿದ ಎಲ್ಲರಲ್ಲೂ ವಾಂತಿ ಭೇದಿ ಕಾಣಿಸಿಕೊಂಡಿಲ್ಲ. ಮಳೆ ಬಂದ ಸಂದರ್ಭದಲ್ಲಿ ಕಲುಷಿತ ನೀರು ಮಿಶ್ರಣದಿಂದ ಈ ರೀತಿ ಆಗಿರಬಹುದು. ನಾಳೆ ವರದಿ ಬರಲಿದೆ. ನಿನ್ನೆ ಸಂಜೆ ಗ್ರಾಮಕ್ಕೆ ಭೇಟಿ ನೀಡಿದ್ದೆ. ವಾಂತಿ-ಭೇದಿ ಕಾಣಿಸಿಕೊಂಡ ಎಲ್ಲರ ಮಾದರಿಗಳನ್ನ ಪರೀಕ್ಷೆಗೆ ಕಳುಹಿಸಲಾಗಿದೆ. ಸದ್ಯ ಡೆತ್ ಆದವರದ್ದು, ಮರಣೋತ್ತರ ಪರೀಕ್ಷೆ ಮಾಡಿಲ್ಲ'' ಎಂದಿದ್ದಾರೆ.
ಮಧುಗಿರಿ ಉಪವಿಭಾಗಾಧಿಕಾರಿ ಶಿವಪ್ಪ ಮಾತನಾಡಿ, ''ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಉಪ ಕೇಂದ್ರ ಸ್ಥಾಪನೆ ಮಾಡಿ ಸ್ಥಳದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಕೆಲವರನ್ನು ಕಳುಹಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ವಿಷ ಆಹಾರ ಸೇವನೆ ಗ್ರಾಮಸ್ಥರಿಗೆ ಅನಾರೋಗ್ಯ: ಹೆಚ್ಚು ಮಕ್ಕಳು ಅಸ್ವಸ್ಥ