ಮೈಸೂರು: ಈಜಲು ಹೋದ ಮೂವರು ಯುವಕರು ನೀರು ಪಾಲಾಗಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಗೊದ್ದನಪುರ ಗ್ರಾಮದ ಕಪಿಲಾ ನದಿಯ ಸೇತುವೆಯಲ್ಲಿ ಇಂದು ನಡೆದಿದೆ. ಬಿಹಾರ ಮೂಲದ 22 ವರ್ಷದ ಮಿಲನ್, 25 ವರ್ಷದ ಮೋಹನ್, 19 ವರ್ಷದ ತರುಣ್ ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ.
ಮಿಲನ್ ಎಂಬಾತನ ಮೃತದೇಹ ಪತ್ತೆಯಾಗಿದ್ದು ಇನ್ನುಳಿದ ಇಬ್ಬರು ಯುವಕರ ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಮೃತರು ಗುತ್ತಿಗೆ ಆಧಾರದ ಮೇಲೆ ಇಲ್ಲಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಈಜಲು ಹೋದ ಮೂವರು ಸುಳಿಗೆ ಸಿಲುಕಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಇವರನ್ನು ಗಮನಿಸಿದ ಸ್ಥಳೀಯರು ನಂಜನಗೂಡು ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕಪಿಲಾ ನದಿಯಲ್ಲಿ ಶವಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾದಗಿರಿ ತಾಲೂಕಿನ ಯರಗೋಳ ಗ್ರಾಮದ ವ್ಯಾಪ್ತಿಯ ಅರಿಕೇರಾ ಬಿ. ಗ್ರಾಮದಲ್ಲಿಯೂ ಓರ್ವ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಬಸವಲಿಂಗಪ್ಪ (18) ನೀರು ಪಾಲಾದ ಯುವಕ. ಮಂಗಳವಾರ ಹೋಳಿ ಹಬ್ಬದ ಅಂಗವಾಗಿ ಬಣ್ಣದಾಟವಾಡಿ ನಂತರ ಕೆರೆಯಲ್ಲಿ ಈಜಲು ತೆರಳಿದ್ದಾಗ ಈ ಘಟನೆ ನಡೆದಿದೆ. ಬೆಳಿಗ್ಗೆ ಸ್ನೇಹಿತರ ಜೊತೆ ಬಣ್ಣದೋಕುಳಿ ಆಡಿ ನಂತರ ತಮ್ಮನ ಜೊತೆ ಕೆರೆಗೆ ಈಜಲು ತೆರಳಿದ್ದನು. ಈ ವೇಳೆ ಈಜು ಬರದೇ ನೀರಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಮೃತ ದೇಹವನ್ನು ಸ್ಥಳೀಯರು ಹೊರತೆಗೆದಿದ್ದಾರೆ. ಈ ಪ್ರಕರಣ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.