ಬೆಂಗಳೂರು: ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್ಗೆ ಟಚ್ ಆಗಿದೆ ಎಂದು, ಪುಂಡರ ಗುಂಪೊಂದು ಮುಂದೆ ಹೋಗುತ್ತಿದ್ದ ಎರಡು ಕಾರುಗಳನ್ನು ಚೇಸ್ ಮಾಡಿ ಚಾಕು ತೋರಿಸಿ ಹಲ್ಲೆಗೆ ಯತ್ನಿಸಿರುವ ಘಟನೆ ವಿಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮತ್ತೊಂದು ಘಟನೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಯುವಕರು ಮುಂದೆ ಹೋಗುತ್ತಿದ್ದ ಕಾರನ್ನು ಅಡ್ಡಗಟ್ಟಿ ಚಾಕು ತೋರಿಸಿದ್ದು, ಈ ಸಂಬಂಧ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Action has been taken in Sadguntapalya police station regarding this incident https://t.co/AqVSlI4TDP
— DCP SOUTH TRAFFIC (@DCPSouthTrBCP) July 25, 2024
ಗುರುವಾರ ರಾತ್ರಿ ಎರಡು ಕಾರುಗಳನ್ನು ಫಾಲೋ ಮಾಡಿಕೊಂಡು ಅಡ್ಡಗಟ್ಟಿದ ಪುಂಡರು ಕಾರಿನ ಗಾಜು ಒಡೆದು ಪುಡಿ - ಪುಡಿ ಮಾಡಿದ್ದಾರೆ. ಆರೋಪಿಗಳು ಹಲ್ಲೆ ಮಾಡಿರುವ ದೃಶ್ಯ ಕಾರಿನ ಡ್ಯಾಷ್ ಕ್ಯಾಮರಾದಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ಇಬ್ಬರು ದ್ವಿಚಕ್ರವಾಹನ ಸವಾರರು ಹಾಗೂ ಎರಡು ಕಾರುಗಳನ್ನು ಚೇಸ್ ಮಾಡುತ್ತಿದ್ದಾರೆ. ಎರಡು ಬಾರಿ ಕಾರುಗಳ ಮುಂದೆ ತಮ್ಮ ದ್ವಿಚಕ್ರ ವಾಹನ ಅಡ್ಡಗಟ್ಟಿ ಕಾರಿನ ಗ್ಲಾಸಿಗೆ ಒಡೆಯಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ಕಾರು ಚಾಲಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ಚೇಸಿಂಗ್ ಸುಮಾರು ಒಂದೂವರೆ ಕಿಮೀ ವರೆಗೂ ನಡೆದಿದ್ದು, ಈ ಸಂಬಂಧ ವಿಜಯನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಹೀಲಿಂಗ್ ಮಾಡುತ್ತಿದ್ದ ಪುಂಡರಿಂದ ಚಾಕು ತೋರಿಸಿ ಧಮ್ಕಿ: ಇತ್ತೀಚೆಗೆ ಉದ್ಘಾಟನೆಯಾದ ಡಬ್ಬಲ್ ಡೆಕ್ಕರ್ ಬ್ರಿಡ್ಜ್ ಈಗ ವ್ಹೀಲಿಂಗ್ ಮಾಡುವವರಿಗೆ ಹಾಟ್ ಫೇವರಿಟ್ ಆಗಿದೆ. ಎರಡು ಬೈಕ್ಗಳಲ್ಲಿ ಬಂದಿದ್ದ ಒಟ್ಟು ಆರು ಜನ ಪುಂಡರು ಪಕ್ಕದಲ್ಲಿ ಚಲಿಸುತ್ತಿದ್ದ ಕಾರು ಚಾಲಕನಿಗೆ ಚಾಕು ತೋರಿಸಿ ಧಮ್ಕಿ ಹಾಕಿದ್ದಾರೆ. ಈ ಬಗ್ಗೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಲರ್ಟ್ ಆದ ಸುದ್ದುಗುಂಟೆ ಠಾಣೆ ಪೊಲೀಸರು ಸುಮೋಟೋ ಕೇಸ್ ದಾಖಲು ಮಾಡಿ ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದು ಯುವಕ ಸಂಜಯ್ ಎಂಬಾತನನ್ನು ಬಂಧಿಸಿದ್ದಾರೆ.
"ಈ ಬಗ್ಗೆ ವಿಚಾರಣೆ ನಡೆಸಿದಾಗ ವ್ಹೀಲಿಂಗ್ ಮಾಡುತ್ತಿದ್ದ ಯುವಕರನ್ನು ಕಾರು ಚಾಲಕ ಪ್ರಶ್ನೆ ಮಾಡಿದ್ದ. ಪ್ರಶ್ನೆ ಮಾಡಿದ್ದೇ ತಪ್ಪು ಎಂಬಂತೆ ಕಾರು ಚಾಲಕನ ಪಕ್ಕವೇ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾರೆ." ಎಂದು ಪೊಲೀಸರು ತಿಳಿಸಿದ್ದಾರೆ.