ಚಾಮರಾಜನಗರ: ಮಹಾಲಯ ಅಮಾವಾಸ್ಯೆ ಹಿನ್ನೆಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತಸಾಗರವೇ ಹರಿದು ಬಂದಿದೆ. ಬೆಳಗ್ಗೆಯಿಂದಲೇ ಮಾದಪ್ಪನಿಗೆ ವಿಶೇಷ ಪೂಜಾ ಕೈಂಕರ್ಯ ಜರುಗುತ್ತಿದ್ದು, ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ.
ಭಕ್ತಾದಿಗಳಿಗೆ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅನ್ನ ದಾಸೋಹ, ಗಣ್ಯರಿಗೆ ನೇರದರ್ಶನ ಸೇವೆ, ನೆರಳಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಹಿರಿಯ ನಾಗರಿಕರಿಗೆ ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು, ರಾಮನಗರ, ಕನಕಪುರ, ಮಂಡ್ಯ, ಚಾಮರಾಜನಗರ, ಮೈಸೂರು, ತುಮಕೂರು, ಕೋಲಾರ, ಶಿವಮೊಗ್ಗ ಹಾಗೂ ತಮಿಳುನಾಡು ಭಾಗಗಳಿಂದ ಲಕ್ಷಾಂತರ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಯಾವುದೇ ಅನಾನುಕೂಲವಾಗದಂತೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ.
60 ವರ್ಷ ಮೇಲ್ಪಟ್ಟವರಿಗೆ ನೇರ ದರ್ಶನ: ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಾಲಯಗಳಿಗೆ ಬರುವ 60 ವರ್ಷ ಮೇಲ್ಪಟ್ಟವರಿಗೆ ನೇರದರ್ಶನಕ್ಕೆ ಅವಕಾಶ ಮಾಡಿಕೊಡುವಂತೆ ಇಲಾಖೆಯ ಆಯುಕ್ತರು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟದ ಆಲಂಬಾಡಿ ಬಸವ ದ್ವಾರದಿಂದ 60 ವರ್ಷ ಮೇಲ್ಪಟ್ಟ ಹಿರಿಯ ಭಕ್ತಾದಿಗಳು ಆಧಾರ್ ಕಾರ್ಡ್ ತೋರಿಸಿ ನೇರ ದರ್ಶನ ಪಡೆಯುತ್ತಿದ್ದಾರೆ. ಗಣ್ಯರು, ವಿಶೇಷ ಚೇತರಿಗೆ ಗೇಟ್ ನಂಬರ್ ನಾಲ್ಕರಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
2 ಲಕ್ಷ ಲಡ್ಡು ತಯಾರಿ: ಭಕ್ತಾದಿಗಳಿಗೆ ಪ್ರಸಾದವಾಗಿ ನೀಡಲು ಪ್ರಾಧಿಕಾರದ ವತಿಯಿಂದ ಎರಡು ಲಕ್ಷ ಲಡ್ಡು ತಯಾರಿಸಲಾಗಿದೆ. ಕಳೆದ ಮೂರು ದಿನಗಳಿಂದಲೂ ಬೆಟ್ಟಕ್ಕೆ ಹೆಚ್ಚಿನ ಭಕ್ತಾದಿಗಳು ಆಗಮಿಸುತ್ತಿರುವುದರಿಂದ ಬೆಂಗಳೂರು, ಮೈಸೂರು, ಕೊಳ್ಳೇಗಾಲ, ಮಂಡ್ಯ ಮತ್ತು ನಂಜನಗೂಡು ಸೇರಿದಂತೆ ಇನ್ನಿತರ ಡಿಪೋಗಳಿಂದ 300ಕ್ಕೂ ಅಧಿಕ ಬಸ್ಗಳು ಪ್ರಯಾಣಿಕರಿಗೆ ಸೇವೆ ನೀಡುತ್ತಿವೆ.
ಇದನ್ನೂ ಓದಿ: ಗಾಳಿ ಆಂಜನೇಯ ದೇವಸ್ಥಾನದ ಹುಂಡಿ ಹಣ ಕಳವು; ಅರ್ಚಕ, ಟ್ರಸ್ಟಿಗಳ ವಿರುದ್ಧ ಎಫ್‌ಐಆರ್ - Gali Anjaneya Temple