ಬೆಂಗಳೂರು: ಗಾಂಜಾ ಚಟ ತೀರಿಸಿಕೊಳ್ಳಲು ನಿರ್ಮಾಣ ಹಂತದ ಕಟ್ಟಡಗಳು ಹಾಗೂ ಶೆಡ್ಗಳಲ್ಲಿ ರಾತ್ರಿ ವೇಳೆ ತೆರಳಿ ಕಾರ್ಮಿಕರ ಮೊಬೈಲ್ಗಳನ್ನು ಕಳ್ಳತನ ಮಾಡುತ್ತಿದ್ದ ಖದೀಮನನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.
ಬಿಹಾರದ ಅಬ್ದುಲ್ ರಜಾಕ್ (22) ಬಂಧಿತ ಆರೋಪಿ. ಈತನಿಂದ 4.5 ಲಕ್ಷ ರೂ ಮೌಲ್ಯದ 32 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾಡುಗೋಡಿಯಲ್ಲಿ ನೆಲೆಸಿದ್ದ ಈತ, ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದಾನೆ. ತಂದೆ ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಗಾಂಜಾ ಚಟ ಬೆಳೆಸಿಕೊಂಡಿದ್ದ ಆರೋಪಿ, ಹಣ ಹೊಂದಿಸಲು ಮೊಬೈಲ್ ಕಳ್ಳತನ ಮಾಡುತ್ತಿದ್ದ. ಕದ್ದ ಮೊಬೈಲ್ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ, ಬಂದ ಹಣದಲ್ಲಿ ಗಾಂಜಾ ಖರೀದಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ವೈಟ್‌ಫೀಲ್ಡ್ ಠಾಣೆಯ ವಿಜಯನಗರ ಮುಖ್ಯರಸ್ತೆಯಲ್ಲಿರುವ ಕಾರ್ ವಾಷ್ ಅಂಗಡಿಯೊಂದರಲ್ಲಿ ಮೊಬೈಲ್ ಕಳ್ಳತನ ಮಾಡಿದ್ದಾನೆ. ಈ ಸಂಬಂಧ ಬಂದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಬುಲೆಟ್, ಪಲ್ಸರ್ ಕಳ್ಳತನ: ಇಬ್ಬರ ಬಂಧನ, ₹30 ಲಕ್ಷ ಮೌಲ್ಯದ 16 ಬೈಕ್ ಜಪ್ತಿ