ಬೆಂಗಳೂರು: ಕಳೆದ ಏಳು ವರ್ಷಗಳಿಂದ ನಗರದಲ್ಲಿ ಅಪಾರ್ಟ್‌ಮೆಂಟ್, ಮನೆಗಳು ಮತ್ತಿತರ ಕಡೆಗಳಲ್ಲಿ ಬ್ರ್ಯಾಂಡೆಡ್ ಫುಟ್‌ವೇರ್ಸ್ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ವಿದ್ಯಾರಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಗಂಗಾಧರ್ ಹಾಗೂ ಯಲ್ಲಪ್ಪ ಬಂಧಿತರು. ಆರೋಪಿಗಳಿಂದ ಚಪ್ಪಲಿ, ಶೂ ಸೇರಿದಂತೆ ₹10.72 ಲಕ್ಷ ಮೌಲ್ಯದ 715 ಜೊತೆ ಫುಟ್‌ವೇರ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಸಾಮಾನ್ಯವಾಗಿ, ಪಾದರಕ್ಷೆಗಳು ಕಳುವಾದರೆ ಬಹುತೇಕರು ದೂರು ಕೊಡಲು ಮುಂದಾಗುವುದಿಲ್ಲ. ದೂರು ದಾಖಲಾದರೂ ಪೊಲೀಸರು ಹೆಚ್ಚು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಭಾವಿಸಿದ್ದ ಆರೋಪಿಗಳು ಕಳೆದ 7 ವರ್ಷಗಳಿಂದ ನಗರದಲ್ಲಿ ಕಳ್ಳತನ ಮಾಡುತ್ತಿದ್ದರು. ಹಗಲು ಹಾಗೂ ರಾತ್ರಿ ಆಟೋದಲ್ಲಿ ಸಂಚರಿಸುತ್ತಿದ್ದ ಆರೋಪಿತರು, ವಸತಿ ಸಮುಚ್ಚಯ, ಮನೆಗಳಲ್ಲಿ ಹೊರಗಡೆ ಇರಿಸಿರುತ್ತಿದ್ದ ಚಪ್ಪಲಿ, ಶೂ, ಸಿಲಿಂಡರ್ ಮಾತ್ರವಲ್ಲದೆ ವಾಹನಗಳ ಬ್ಯಾಟರಿಗಳನ್ನು ಸಹ ಕಳ್ಳತನ ಮಾಡುತ್ತಿದ್ದರು. ಕದ್ದ ಫುಟ್ವೇರ್ಸ್ನ್ನ ಶುಚಿಗೊಳಿಸಿ, ಪಾಲೀಶ್ ಮಾಡುತ್ತಿದ್ದ ಆರೋಪಿಗಳು ಬಳಿಕ ಅವುಗಳನ್ನ ಚೆನ್ನೈ, ಊಟಿ, ಹಾಗೂ ಬೆಂಗಳೂರಿನ ಚೋರ್ ಬಜಾರ್‌ಗಳಲ್ಲಿ ಮಾರಾಟ ಮಾಡುತ್ತಿದ್ದರು. ಇದೇ ರೀತಿ ಜುಲೈ 15 ರಂದು ಬಿಇಎಲ್ ಲೇಔಟ್‌ನ ಮನೆಯೊಂದರ ಬಳಿ ಕಳ್ಳತನ ಎಸಗಿದ್ದ ಆರೋಪಿಗಳ ವಿರುದ್ಧ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ವಿದ್ಯಾರಣ್ಯಪುರ ಠಾಣಾ ಪೊಲೀಸರು ಬಿಇಎಲ್ ಲೇಔಟ್‌ನ 5ನೇ ಬ್ಲಾಕ್‌ನಲ್ಲಿದ್ದ ಆರೋಪಿಗಳ ಮನೆಗೆ ತೆರಳಿದಾಗ 715 ಜೊತೆ ಫುಟ್‌ವೇರ್ಸ್ ಪತ್ತೆಯಾಗಿವೆ.
ಇದನ್ನೂ ಓದಿ: ಹಾವೇರಿ: ಮಳೆಗೆ ಮನೆ ಮೇಲ್ಚಾವಣಿ ಕುಸಿದು ಮೂವರು ಸಾವು, ಮೃತರ ಕುಟುಂಬಸ್ಥರಿಗೆ ತಲಾ ₹5 ಲಕ್ಷ ಪರಿಹಾರ - Haveri House Collapse