ಆನೇಕಲ್: ಗ್ಯಾಂಗ್ ಕಟ್ಟಿಕೊಂಡು ಮನೆಯಲ್ಲಿ ಯಾರೂ ಇಲ್ಲದ ವೇಳೆ ಕನ್ನ ಹಾಕಿ ಪರಾರಿಯಾಗುತ್ತಿದ್ದ ಕತರ್ನಾಕ್ ಕಳ್ಳರು ಇವರು. ಪೊಲೀಸರ ಗುಂಡೇಟು ತಿಂದರೂ ಕೂಡ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗುವುದನ್ನು ಈ ಖದೀಮರು ಬಿಟ್ಟಿರಲಿಲ್ಲ. ಭಾರಿ ತಲೆ ನೋವಾಗಿದ್ದ ಖದೀಮರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಈ ಆಸಾಮಿಗಳು ಹಿಂದೆ ಮನೆ ಕಳ್ಳತನ ಮಾಡಿ ಪರಾರಿ ಆಗುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಗೆ ಹಲ್ಲೆ ಮಾಡಲು ಮುಂದಾಗಿದ್ದರು. ಈ ವೇಳೆ ಗುಂಡೇಟು ತಿಂದು ಜೈಲು ಸೇರಿ ಹೊರ ಬಂದ ಖತರ್ನಾಕ್ ಆರೋಪಿ ನವೀನ್ ಈ ತಂಡದಲ್ಲಿದ್ದನು. ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚಿಗೆ ಮನೆ ಕಳ್ಳತನ ಹಾಗೂ ಬೈಕ್ಗಳ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದರು. ಈ ಪ್ರಕರಣವನ್ನು ಭೇದಿಸಲು ಹೆಬ್ಬಗೋಡಿ ಪೊಲೀಸ್ ಠಾಣೆಯ ಕ್ರೈಂ ತಂಡವನ್ನು ರಚನೆ ಮಾಡಿ ಆನೇಕಲ್ ಬೊಮ್ಮಸಂದ್ರದಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣದಲ್ಲಿ ಚಿನ್ನ ದೋಚಿದ್ದ ಮಂಜುನಾಥ್ ಅಲಿಯಾಸ್ ಮಂಜ, ಎಭಿನೈಜರ್ ಅಲಿಯಾಸ್ ಮದನ್, ಅಜಿತ್ ಅಲಿಯಾಸ್ ಮುರುಗನ್ ಹಾಗೂ ನವೀನ್ ಎಂಬುವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಬೆಂಗಳೂರು ಗ್ರಾಮಾಂತರ ಎಸ್ಪಿ ಮಾಹಿತಿ: ಆರೋಪಿಗಳ ಗ್ಯಾಂಗ್ನಲ್ಲಿರುವ ನವೀನ್ ಮನೆ ಹಾಗೂ ಬೈಕ್ ಕಳ್ಳತನವೇ ಕಾಯಕ ಮಾಡಿಕೊಂಡಿದ್ದನು. ತಮಿಳುನಾಡು ಪೊಲೀಸರು ಕೂಡ ಹಲವು ದಿನಗಳಿಂದ ಈ ತಂಡವನ್ನು ಹುಡುಕಾಟ ಮಾಡುತ್ತಿದ್ದರು. ಖದೀಮರು ತಮಿಳುನಾಡಿನ ವಿವಿಧೆಡೆ ತಲೆಮರೆಸಿಕೊಂಡಿದ್ದರು. ಕಳ್ಳತನ ಮಾಡಿ ಯುವತಿಯರ ಜೊತೆ ಕಾಲ ಕಳೆಯುತ್ತಿದ್ದಾಗ ಪೊಲೀಸರು ಚಾಣಾಕ್ಷತನದಿಂದ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 15 ಲಕ್ಷ ರೂ ಮೌಲ್ಯದ 138 ಗ್ರಾಂ ಚಿನ್ನ, 284 ಗ್ರಾಂ ಬೆಳ್ಳಿ ಹಾಗೂ ಕಳ್ಳತನ ಮಾಡಿದ್ದ 11 ದ್ವಿಚಕ್ರ ವಾಹನಗಳ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಹೆಬ್ಬಗೋಡಿ, ಅತ್ತಿಬೆಲೆ, ಸೂರ್ಯ ನಗರ, ಪರಪ್ಪನ ಅಗ್ರಹಾರ ಮತ್ತು ವರ್ತೂರು ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಹಾಗೂ ದರೋಡೆ ಪ್ರಕರಣಗಳು ದಾಖಲಾಗಿದ್ದು, ತಮಿಳುನಾಡು ಪೊಲೀಸರು ಕೂಡ ಇವರ ಮೇಲೆ ನಿಗಾ ಇಟ್ಟಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ತಿಳಿಸಿದ್ದಾರೆ.
ಇದನ್ನೂ ಓದಿ: ಸಿಂಧನೂರು: ಹಾಸ್ಟೆಲ್ ಬಾತ್ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪಿಯುಸಿ ವಿದ್ಯಾರ್ಥಿ ಶವ ಪತ್ತೆ