ವಿಜಯಪುರ: ಜಿಲ್ಲೆಯಲ್ಲಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿ, ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ ಮಾಡಿರುವ ಪ್ರಕರಣ ನಡೆದಿದೆ. ವಿಜಯಪುರ ನಗರದ ಎಪಿಎಂಸಿ ಮೇಕೆ ಹಾಗೂ ಕುರಿ ಮಾರುಕಟ್ಟೆ ಬಳಿ ಘಟನೆ ನಡೆದಿದೆ. ರೋಹಿತ್ ವಸಂತ ಪವಾರ (23) ಕೊಲೆಯಾದ ಯುವಕ.
ವಿಜಯಪುರ ನಗರದ ಕಂಬಾರ ಓಣಿ ನಿವಾಸಿ ರೋಹಿತ್ನನ್ನು ದುಷ್ಕರ್ಮಿಗಳು ಕೊಲೆಗೈದು ಮುಳ್ಳುಕಂಟಿಯಲ್ಲಿ ಶವ ಬಿಸಾಡಿದ್ದಾರೆ. ಘಟನಾ ಸ್ಥಳದಲ್ಲಿ ಬಿಯರ್ ಬಾಟಲ್ ಹಾಗೂ ಚಿಪ್ಸ್ ಪ್ಯಾಕೆಟ್ ಪತ್ತೆಯಾಗಿದೆ. ಮೃತನ ಪರಿಚಯಸ್ಥರಿಂದಲೇ ಕೊಲೆ ನಡೆದಿರುವ ಶಂಕೆಯನ್ನು ಮೃತನ ಕುಟುಂಬ ಆರೋಪಿಸಿದೆ.
ಮೃತ ರೋಹಿತ್ ಸ್ನೇಹಿತ ಖಾಲಿದ್ ಇನಾಂದಾರ್ ರೋಹಿತ್ ಪೋಷಕರಿಗೆ ನಿನ್ನೆ ತಡರಾತ್ರಿ 2.21ಕ್ಕೆ ಕರೆ ಮಾಡಿ ರೋಹಿತ್ ಕೊಲೆಯಾಗಿದೆ ಎಂದು ಮಾಹಿತಿ ನೀಡಿದ್ದನು. ಕರೆ ಅನ್ವಯ ರೋಹಿತ್ ಮನೆಯವರು ಆತನಿಗಾಗಿ ಹುಡುಕಾಡಿದ್ದರು. ಜತೆಗೆ ಕರೆ ಮಾಡಿದ ಖಾಲೀದ್ ಮನೆಗೆ ಹೋದರೂ ಖಾಲೀದ್ ಆಗಲಿ ರೋಹಿತ್ ಅಲ್ಲಿರಲಿಲ್ಲ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ನಂತರ ರೋಹಿತ್ಗಾಗಿ ಹುಡುಕಾಡಿದಾಗ ಆತನ ಶವ ಎಪಿಎಂಸಿ ಆವರಣದಲ್ಲಿ ಕಂಡು ಬಂದಿದೆ. ತಕ್ಷಣ ಎಪಿಎಂಸಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿದ ವಿಜಯಪುರ ಡಿವೈಎಸ್ಪಿ ಬಸವರಾಜ ಯಲಿಗಾರ ಹಾಗೂ ಇತರೆ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಸ್ಪಿ ರಿಷಿಕೇಶ ಸೋನವಾಣೆ ಹೇಳಿಕೆ: "ಎಪ್ರಿಲ್ 19ರ ಮಧ್ಯರಾತ್ರಿ ಹತ್ಯೆ ಪ್ರಕರಣ ವರದಿಯಾಗಿದೆ. 23 ವರ್ಷದ ರೋಹಿತ್ ವಸಂತ ಪವಾರ್ ಎಂಬಾತನ ಕೊಲೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲಾಗಿದೆ. ಮೃತನ ಮನೆಯವರಿಂದ ಹೇಳಿಕೆ ತೆಗೆದುಕೊಂಡಿದ್ದೇವೆ. ರೋಹಿತ್ನ ಸ್ನೇಹಿತ ಆತನ ಮನೆಯವರಿಗೆ ಕರೆ ಮಾಡಿ ತಿಳಿಸಿರುತ್ತಾನೆ. ಘಟನೆ ಬಗ್ಗೆ ತನಿಖೆ ಮಾಡಲಾಗಿದೆ. ವಿಚಾರಣೆ ನಡೆಸಬೇಕಾಗಿದೆ. ಮೇಲ್ನೋಟಕ್ಕೆ ಹಣದ ವಿಚಾರವಾಗಿ ಕೊಲೆ ನಡೆದಿರುವುದು ಕಂಡು ಬಂದಿರುತ್ತದೆ. ಯುವಕನ್ನು ಮಾರಕಾಸ್ತ್ರಗಳಿಂದ ಚುಚ್ಚಿದ್ದಲ್ಲದೇ, ಕಲ್ಲನ್ನು ಎತ್ತಿ ಹಾಕಲಾಗಿದೆ. ಘಟನಾ ಸ್ಥಳದಿಂದ ಹತ್ಯೆಗೆ ಉಪಯೋಗಿಸಿರುವ ವೆಪನ್ಗಳನ್ನು ವಶಕ್ಕೆ ಪಡೆಯಲಾಗಿದೆ. ಕೊಲೆ ಮಾಡಿ ದೇಹವನ್ನು ಸ್ವಲ್ಪ ದೂರ ಎಳೆದುಕೊಂಡು ಹೋಗಿದ್ದಾರೆ. ಎಲ್ಲಾ ಸಾಕ್ಷಿಗಳನ್ನು ಕಲೆ ಹಾಕಲಾಗಿದ್ದು, ಮುಂದಿನ ತನಿಖೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ದಕ್ಷಿಣ ಕನ್ನಡ: ಖೋಟಾ ನೋಟು ಪ್ರಕರಣದ ಆರೋಪಿಗಳಿಂದ ಮತ್ತಷ್ಟು ಮಾಹಿತಿ, ಲಕ್ಷಾಂತರ ರೂ. ಮೌಲ್ಯದ ಹಣ ಜಪ್ತಿ - Fake Note