ಧಾರವಾಡ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಏಳನೇ ಹಂತದ ಹೋರಾಟ ಶುರುವಾಗಿದೆ. ಇಂದು (ಬುಧವಾರ) ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಅವರು, ಶಾಸಕ ವಿನಯ್ ಕುಲಕರ್ಣಿ ಮನೆವರೆಗೆ ಪಾದಯಾತ್ರೆ ನಡೆಸುವ ಮೂಲಕ ಹಕ್ಕೋತ್ತಾಯದ ಪತ್ರ ಚಳವಳಿ ಮಾಡಲಾಯಿತು.
ಧಾರವಾಡದ ಉಳವಿ ಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಉದ್ದಕ್ಕೂ ಪಂಚಮಸಾಲಿ ಸಮಾಜದ ಪರ ಘೋಷಣೆ ಕೂಗಲಾಯಿತು. ವಿವಿಧ ಮಾರ್ಗಗಳ ಮೂಲಕ ಶಾಸಕ ವಿನಯ್ ಮನೆಗೆ ಹೋಗಿ ಹಕ್ಕೋತ್ತಾಯದ ಪತ್ರ ಚಳವಳಿಯ ಮನವಿ ಪತ್ರ ಸಲ್ಲಿಸಲಾಯಿತು. ಅವರ ಗೈರು ಹಾಜರಿಯಲ್ಲಿ ವಿನಯ್ ಮಗಳಾದ ವೈಶಾಲಿಗೆ ಮನವಿ ಸಲ್ಲಿಕೆ ಮಾಡಿದರು.
ಬಳಿಕ ವಿಡಿಯೋ ಕಾನ್ಫರೆನ್ಸ್ ಮೂಲಕ ಜಯಮೃತ್ಯುಂಜಯ ಸ್ವಾಮೀಜಿ ಅವರು, ವಿನಯ್ ಕುಲಕರ್ಣಿ ಅವರಿಗೆ ಮುಂಬರುವ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು. ಅಧಿವೇಶನದಲ್ಲಿ ಮೀಸಲಾತಿ ವಿಚಾರ ಪ್ರಸ್ತಾಪಿಸುವಂತೆ ಆಗ್ರಹಿಸುವ ಪತ್ರ ಬರೆಯಲಾಗಿದೆ. ಇಂದಿನಿಂದ ಸಮಾಜದ ಶಾಸಕರಿಗೆ ಮನವಿ ಪತ್ರ ಸಲ್ಲಿಸುವ ಚಳವಳಿ ಆರಂಭ ಮಾಡಲಾಗಿದೆ ಎಂದು ಗಮನಕ್ಕೆ ತಂದರು. ಈ ವೇಳೆ ಶಾಸಕ ವಿನಯ ಕುಲಕರ್ಣಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ಅಧಿವೇಶನದಲ್ಲಿ ಈ ಬಗ್ಗೆ ಪಂಚಮಸಾಲಿ ಶಾಸಕರ ಜೊತೆ ಧ್ವನಿ ಎತ್ತುವುದಾಗಿ ಭರವಸೆ ಕೊಟ್ಟರು. ಅಲ್ಲದೇ ಸಿಎಂ ಸಿದ್ಧರಾಮಯ್ಯಗೆ 2ಎ ಮೀಸಲಾತಿ ಬಗ್ಗೆ ಮನವಿ ಮಾಡುವುದಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭರವಸೆ ನೀಡಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ ಅವರು, ''ಈ ಚಳವಳಿಯಿಂದ 20 ಶಾಸಕರು ಆಯ್ಕೆಯಾದರು. ಹಿಂದೆ ಅಧಿವೇಶನದಲ್ಲಿ ಹಲವು ಶಾಸಕರು ಮಾತನಾಡಿಲ್ಲ. ಈ ಹಿನ್ನೆಲೆಯಲ್ಲಿ ಬರುವ ಅಧಿವೇಶನದಲ್ಲಿ ಮಾತನಾಡಲಿ. ಶಾಸಕರ ಮತ ಕ್ಷೇತ್ರದಲ್ಲಿ ಮೀಸಲಾತಿ ವಂಚಿತರಿಗಾಗಿ ಧ್ವನಿ ಎತ್ತಲಾಗಿದೆ. ಸದ್ಯ ಎಲ್ಲ ಪಂಚಮಸಾಲಿ ಶಾಸಕರ ಮನೆಗೆ ಒಂದೊಂದು ದಿನ ಭೇಟಿ ಮಾಡಿ ಪತ್ರ ಚಳವಳಿ ಮಾಡಲಿದ್ದೇವೆ'' ಎಂದರು.
ಶಾಸಕರು ಭರವಸೆ ಕೊಡುವವರೆಗೆ ಅವರ ಮನೆ ಬಾಗಿಲಿಗೆ ಹೋಗಿ ಪತ್ರ ಕೊಡಲಿದ್ದೇವೆ. ವಿನಯ ಕುಲಕರ್ಣಿ 2ಎ ಹೋರಾಟಕ್ಕೆ ಮುಂಚೂಣಿ ನಾಯಕರಾಗಿದ್ದು, ಅವರೇ ಈ ಹೋರಾಟ ಮಾಡಲು ನಮಗೆ ಮೊದಲು ಬೆಂಬಲ ನೀಡಿದ್ದು, ಅವರಿಗೆ ಜಿಲ್ಲೆಗೆ ಬರಲು ಕಾನೂನು ತೊಡಕಿನ ಕಾರಣ ವಿಡಿಯೋ ಕಾನ್ಫರೆನ್ಸ್ ಮೂಲಕ ಇವತ್ತು ಮಾತಾಡಿದ್ದಾರೆ. ನಾಳೆ ಬೆಳಗಾವಿ, ನಾಡಿದ್ದು ಹುಬ್ಬಳ್ಳಿಯಲ್ಲಿ ಚಳವಳಿ ಮಾಡಲಿದ್ದೇವೆ'' ಎಂದು ತಿಳಿಸಿದರು. ''ಸಿಎಂ ಅವರು ಮಾತಿನಂತೆ ನಡೆಯಲಿ ಈಗಲೂ ಕಾಲ ಮಿಂಚಿಲ್ಲ. ಚುನಾವಣಾ ನೀತಿ ಸಂಹಿತೆ ಮುಗಿದಿದೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಲಿ'' ಎಂದು ಒತ್ತಾಯಿಸಿದರು.