ಬೆಂಗಳೂರು: ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ನಾಳೆ (ಜೂನ್ 3) ಮತದಾನ ನಡೆಯಲಿದೆ. ಈ ಸಂಬಂಧ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸರ್ಕಾರಿ ಕಲಾ ಕಾಲೇಜಿನಲ್ಲಿನ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಮಯದಲ್ಲಿ ಮತಗಟ್ಟೆ ಅಧಿಕಾರಿ, ಸಿಬ್ಬಂದಿ ಮಸ್ಟರಿಂಗ್ ಕೇಂದ್ರದಿಂದ ಬ್ಯಾಲೆಟ್ ಬಾಕ್ಸ್, ಬ್ಯಾಲೆಟ್ ಪೇಪರ್ ಸೇರಿದಂತೆ ಮತಗಟ್ಟೆ ಸಾಮಗ್ರಿಗಳನ್ನು ತೆಗೆದುಕೊಂಡು ನಿಯೋಜಿಸಲ್ಪಟ್ಟ ವಾಹನಗಳ ಮೂಲಕ ಪೊಲೀಸ್ ಬಂದೋಬಸ್ತ್ನಲ್ಲಿ ಮತಗಟ್ಟೆಗಳಿಗೆ ತೆರಳಿದರು.
ಪರಿಶೀಲನೆಯ ವೇಳೆ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ, ಅಪರ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಹರೀಶ್ ಕುಮಾರ್, ಸ್ನೇಹಲ್, ವಿನೋತ್ ಪ್ರಿಯಾ, ಚುನಾವಣಾ ವಿಭಾಗದ ಸಹಾಯಕ ಆಯುಕ್ತ ರವಿ ಚಂದ್ರ ನಾಯ್ಕ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
106 ಮಾತಕಟ್ಟೆಗಳು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲಿ 106 ಮತಗಟ್ಟೆಗಳು ಬರಲಿದ್ದು, ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಅದಕ್ಕಿಂತ ಮುಂಚಿತವಾಗಿ ಬೆಳಗ್ಗೆ 7ಕ್ಕೆ ಅಣುಕು ಮತದಾನವಿರಲಿದೆ.
ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: ರಾಯಚೂರಿಗೆ 3 ಸ್ಥಾನ, ಯತೀಂದ್ರ ಸೇರಿ 8 'ಕೈ' ಅಭ್ಯರ್ಥಿಗಳ ಹೆಸರು ಪ್ರಕಟ - Council Election