ಚಿಕ್ಕಮಗಳೂರು : ತಾಲೂಕಿನ ಕವಿಕಲ್ ಗಂಡಿ ಪಕ್ಕದಲ್ಲಿರುವ ಝರಿ ಫಾಲ್ಸ್ ನೂರಾರು ಅಡಿ ಮೇಲಿಂದ ಧುಮ್ಮಿಕ್ಕಿ ಹರಿಯಲು ಪ್ರಾರಂಭಿಸಿದೆ. ಭಾರಿ ಮಳೆ ಬೆನ್ನಲ್ಲೇ ಈ ಫಾಲ್ಸ್ ಭೋರ್ಗರೆಯುತ್ತಿರುವ ಹಿನ್ನೆಲೆ ಇಲ್ಲಿನ ಪ್ರವಾಸಕ್ಕೆ ಜಿಲ್ಲಾಡಳಿತ ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ನಿಷೇಧ ಹೇರಿದೆ.
ಚಿಕ್ಕಮಗಳೂರು ತಾಲೂಕಿನ ದತ್ತಪೀಠ ತಪ್ಪಲಿನಲ್ಲಿರುವ ಫಾಲ್ಸ್ ಸೌಂದರ್ಯ ಸವಿಯಲು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡಿ, ತಮ್ಮ ಕ್ಷಣಗಳನ್ನು ಕಳೆಯುತ್ತಿದ್ದರು. ಫಾಲ್ಸ್ನಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆ ಫಾಲ್ಸ್ಗೆ ಹೋಗುವ ರಸ್ತೆಯನ್ನು ಪೊಲೀಸರು ಬಂದ್ ಮಾಡಿಸಿದ್ದು, ಮಳೆ ಕಡಿಮೆ ಆಗುವವರೆಗೂ ಝರಿ ಫಾಲ್ಸ್ ಪ್ರವಾಸಕ್ಕೆ ನಿಷೇಧ ಹೇರಿದ್ದಾರೆ.
ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಝರಿ ಫಾಲ್ಸ್ ಈಗ ತನ್ನ ಸೌಂದರ್ಯದ ಮೂಲಕ ಪ್ರತಿನಿತ್ಯ ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿದೆ. ಈ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಈ ಫಾಲ್ಸ್ ಕಳೆದ ಮೂರು ದಿನಗಳಿಂದ ಉಕ್ಕಿ ಹರಿಯಲು ಪ್ರಾರಂಭಿಸಿದೆ. ಇದರ ಸೌಂದರ್ಯ ಹಾಗೂ ದೃಶ್ಯ ಸವಿಯೋದೆ ಒಂದು ಅದ್ಭುತ, ಮನಸ್ಸಿಗೆ ಉಲ್ಲಾಸ ತರುವಂತೆ ಮಾಡಿದೆ.
ಕೋಡಿ ಬಿದ್ದ ಹಿರೇಕೊಳಲೆ ಕೆರೆ, ಶಾಸಕ ಹೆಚ್ ಡಿ ತಮ್ಮಯ್ಯ, ಸಿ ಟಿ ರವಿ ಭಾಗಿನ ಅರ್ಪಣೆ : ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದ, ನಿಧಾನವಾಗಿ ಎಲ್ಲ ಕೆರೆಗಳು, ಹಳ್ಳ ಕೊಳ್ಳಗಳು, ಕೆರೆ ಕಟ್ಟೆಗಳು, ಚೆಕ್ ಡ್ಯಾಂಗಳು ಹಾಗೂ ಜಲಾಶಯಗಳು ತುಂಬಿ ಹರಿಒಯುತ್ತಿವೆ.
ಈ ತಿಂಗಳು ಚಿಕ್ಕಮಗಳೂರು ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಇಲ್ಲಿನ ನೂರಾರು ಎಕರೆ ಭೂಮಿಗೆ ನೀರನ್ನು ಒದಗಿಸುವ ಹಾಗೂ ನಗರದ 8ಕ್ಕೂ ಹೆಚ್ಚು ವಾರ್ಡ್ಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವ ಹಿರೇಕೊಳಲೆ ಕೆರೆ ತುಂಬಿದ್ದು, ಈಗ ಕೋಡಿ ಬಿದ್ದಿದೆ.
ಪಶ್ಚಿಮ ಘಟ್ಟಗಳ ತಪ್ಪಲು ಮುಳ್ಳಯ್ಯನಗಿರಿಯಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ಹಿರೇಕೊಳಲೆ ಕೆರೆ ಕೋಡಿ ಬಿದ್ದಿದೆ. ಹೀಗಾಗಿ ಇಂದು ಶಾಸಕ ಹೆಚ್. ಡಿ ತಮ್ಮಯ್ಯ, ಎಂಎಲ್ಸಿ ಸಿ ಟಿ ರವಿ ಹಾಗೂ ಭೋಜೇಗೌಡ ಭಾಗಿನ ಅರ್ಪಣೆ ಮಾಡಿದರು. ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ನಗರಸಭೆ ಅಧಿಕಾರಿಗಳು ಈ ಸಂದರ್ಭದಲ್ಲಿ ಸಾಥ್ ನೀಡಿದರು.
ಹಿರೇಕೊಳಲೆ ಕೆರೆ ನಗರಕ್ಕೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ಕೆರೆಯಾಗಿದೆ. ಅಲ್ಲದೇ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿಯೂ ಒಂದಾಗಿದೆ. ನೂರಾರು ಸಿನಿಮಾಗಳು ಚಿತ್ರೀಕರಣಗೊಂಡಿರುವ ಹಿರೇಕೊಳಲೆ ಕೆರೆ ಈಗ ಮೈದುಂಬಿದ್ದು, ಜೀವಕಳೆ ಬಂದಿದೆ.
ಇದನ್ನೂ ಓದಿ : ಕಾಫಿನಾಡಿಗೆ ಆಗಸ್ಟ್ನಲ್ಲೂ ಕಾದಿದೆ ಆತಂಕ; ಎಸ್ಡಿಆರ್ಎಫ್ನಿಂದ ಅಪಾಯಕಾರಿ ಸ್ಥಳಗಳ ಗುರುತು - Heavy rainfall in chikkamagaluru