ಬೆಳಗಾವಿ: ಪತ್ನಿ ಕೊಲೆಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪತಿಗೆ 10 ವರ್ಷ ಸಾದಾ ಜೈಲುಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ಬೆಳಗಾವಿಯ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ಪ್ರಕಟಿಸಿದೆ.
ಮೂಡಲಗಿ ತಾಲ್ಲೂಕಿನ ಬಿಸನಕೊಪ್ಪ ಗ್ರಾಮದ ರಮೇಶ ಬಸಪ್ಪ ಹೊಂಗಲ ಜೈಲು ಶಿಕ್ಷೆಗೊಳಗಾದ ವ್ಯಕ್ತಿ. ಪತ್ನಿ ಶ್ರೀದೇವಿ ಆವರನ್ನು ಮದುವೆ ಆಗಿದ್ದ ರಮೇಶ ಪದೇ ಪದೇ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದ, ಅಲ್ಲದೇ ವಿಪರೀತ ಮದ್ಯ ಸೇವಿಸುತ್ತಿದ್ದ. ತನ್ನ ಪತ್ನಿಗೆ ತವರು ಮನೆಯಿಂದ ಹಣ, ಬಂಗಾರದ ಒಡವೆ ತರುವಂತೆ ಆಗ್ರಹಿಸುತ್ತಿದ್ದ. ಇದಕ್ಕೆ ಪತ್ನಿ ಶ್ರೀದೇವಿ ನಿರಾಕರಿಸಿದಾಗ 2021ರ ಜ.12ರಂದು ಸೀರೆಯಿಂದ ಕುತ್ತಿಗೆಗೆ ಬಿಗಿದು, ಉಸಿರುಗಟ್ಟಿಸಿ ಹತ್ಯೆಗೈದಿದ್ದ. ಈ ಸಂಬಂಧ ಕುಲಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಚ್. ಎಸ್. ಮಂಜುನಾಥ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ನಸರೀನ್ ಬಂಕಾಪುರ ವಾದ ಮಂಡನೆ ಮಾಡಿದ್ದರು.
ಹುಬ್ಬಳ್ಳಿ ಪೊಲೀಸರ ಕಾರ್ಯಾಚರಣೆ: 11 ಬೈಕ್ ಪತ್ತೆ, ಇಬ್ಬರು ಆರೋಪಿತರು ಜೈಲಿಗೆ
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸರು ಕಾರ್ಯಾಚರಣೆ ಮೂಲಕ ಅವಳಿನಗರದಲ್ಲಿ ಕಳ್ಳತನವಾಗಿದ್ದ 11 ಬೈಕ್ಗಳನ್ನು ಪತ್ತೆ ಹಚ್ಚಿ ಇಬ್ಬರು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ನಿರ್ದೇಶನದ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ವಿವಿಧ ಠಾಣೆಯಲ್ಲಿ ದಾಖಲಾಗಿದ್ದ ಬೈಕ್ ಕಳ್ಳತನ ಪ್ರಕರಣ ಪತ್ತೆ ಮಾಡಿದ್ದು, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕಾಶ ಬಾಬು ಕಾಂಬಳೆ, ವಿಷ್ಣು ಶಿವಣ್ಣ ನಂದ್ಯಾಳ ಬಂಧಿತ ಆರೋಪಿಗಳಾಗಿದ್ದು, 11 ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಗೋಕುಲ ರೋಡ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನವಾದ ಒಟ್ಟು 4 ಮೋಟಾರ್ ಸೈಕಲ್, ಹಳೇಹುಬ್ಬಳ್ಳಿ ಠಾಣೆಯ ವ್ಯಾಪ್ತಿಯಲ್ಲಿ ಕಳುವಾದ 3 ಮೋಟಾರ್ ಸೈಕಲ್, ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳುವಾದ 1 ಮೋಟಾರ್ ಸೈಕಲ್, ಬೆಂಡಿಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳುವಾದ 1 ಮೋಟಾರ್ ಸೈಕಲ್ ಹಾಗೂ ವಿಜಯಪೂರ ಶಹರದಲ್ಲಿ ಕಳ್ಳತನವಾದ 2 ಮೋಟಾರ್ ಸೈಕಲ್‌ಗಳು ಹೀಗೆ ಒಟ್ಟು 7,80,000 ಮೌಲ್ಯದ 11 ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಂಡು ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.