ಬೆಂಗಳೂರು : ಸಚಿವರುಗಳಿಗೆ ಬಿಸಿ ಮುಟ್ಟಿಸಿರುವ ಕಾಂಗ್ರೆಸ್ ಹೈಕಮಾಂಡ್ ಸಂಪುಟ ಪುನಾರಚನೆಯ ಮುನ್ಸೂಚನೆ ನೀಡಿದೆ.
ಸಿಎಂ ಕಾವೇರಿ ನಿವಾಸದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಸಚಿವರುಗಳ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ ವೇಣುಗೋಪಾಲ್ ಹಾಗೂ ಸುರ್ಜೇವಾಲ ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ. ಸಚಿವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರ ಹಾಕಿರುವ ಹೈಕಮಾಂಡ್ ವರಿಷ್ಠರು ಸಚಿವರಿಗೆ ಚುರುಕು ಮುಟ್ಟಿಸುವ ಕೆಲಸ ಮಾಡಿದ್ದಾರೆ.
ಶಾಸಕರು ಉಸ್ತುವಾರಿ ಸಚಿವರುಗಳ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಸಚಿವರುಗಳು ಶಾಸಕರ ಜೊತೆ ಸಮನ್ವಯ ಸಾಧಿಸಿ, ಅವರನ್ನು ವಿಶ್ವಾಸಕ್ಕೆ ಪಡೆದು ಜಿಲ್ಲೆಗಳಲ್ಲಿ ಕೆಲಸ ಮಾಡಬೇಕು. ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ಹೋಗಬೇಕು. ಜಿಲ್ಲೆಗಳಲ್ಲಿ ಮೂರು ತಿಂಗಳಿಗೊಮ್ಮೆ ಕೆಡಿಪಿ ಸಭೆ ನಡೆಸಬೇಕು. ಉಸ್ತುವಾರಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಬೇಡಿ. ಬೇರೆ ಜಿಲ್ಲೆಗಳಿಗೂ ತೆರಳಬೇಕು. ಪಕ್ಷ ಸಂಘಟನೆ ಮಾಡಬೇಕು ಎಂದು ತಾಕೀತು ಮಾಡಿದ್ದಾರೆ.
ಕೆಲ ಸಚಿವರ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವರು ಚುರುಕಿನಿಂದ ಕೆಲಸ ಮಾಡಬೇಕು. ಸಚಿವರು ತಮ್ಮ ಪ್ರವೃತ್ತಿಯನ್ನು ಸರಿಪಡಿಸಿಕೊಳ್ಳಬೇಕು. ಶಾಸಕರ ಜೊತೆ ಎರಡು ತಿಂಗಳ ಬಳಿಕ ನಿಮ್ಮ ಕಾರ್ಯಕ್ಷಮತೆಯಲ್ಲಿ ಸುಧಾರಣೆ ಆಗದಿದ್ದರೆ ಸಂಪುಟ ಪುನಾರಚನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂಬುದು ತಿಳಿದುಬಂದಿದೆ.
ಸಂಪುಟ ಪುನರಚನೆ ಮುನ್ಸೂಚನೆ : ಮುಂದೆ ಸಣ್ಣಮಟ್ಟಿನ ಸಂಪುಟ ಪುನಾರಚನೆ ಮಾಡುವ ಅಗತ್ಯ ಇದೆ. ಹೀಗಾಗಿ ಸಚಿವರುಗಳು ಪಕ್ಷ ಸಂಘಟನೆ, ಉತ್ತಮ ನಿರ್ವಹಣೆ ತೋರಬೇಕು. ಜಿಲ್ಲೆಗಳಿಗೆ ಹೋಗಿ ಸಕ್ರಿಯವಾಗಿ ಕೆಲಸ ಮಾಡಬೇಕು. ಶಾಸಕರ ಜೊತೆ ಎರಡು ತಿಂಗಳ ಬಳಿಕ ನಿಮ್ಮ ಕಾರ್ಯಕ್ಷಮತೆಯಲ್ಲಿ ಸುಧಾರಣೆ ಆಗದಿದ್ದರೆ ಸಂಪುಟ ಪುನಾರಚನೆ ಮಾಡುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸಣ್ಣಮಟ್ಟಿನ ಸಂಪುಟ ಪುನರಚನೆ ಮಾಡಬೇಕಾಗುತ್ತದೆ. ಕಾರ್ಯನಿರ್ವಹಿಸದ ಐದಾರು ಸಚಿವರಗಳನ್ನು ಬದಲಾಯಿಸುವ ಮುನ್ಸೂಚನೆ ನೀಡಿದ್ದಾರೆ. ದಸರಾ ಬಳಿಕ ಸಂಪುಟ ಪುನಾರಚನೆಯ ಸಾಧ್ಯತೆ ಬಗ್ಗೆ ಹೈಕಮಾಂಡ್ ಮುನ್ಸೂಚನೆ ನೀಡಿದೆ.
ಬಿಜೆಪಿ ಹಗರಣಗಳ ತನಿಖೆಗೆ ಚುರುಕು ಮುಟ್ಟಿಸಿ : ಬಿಜೆಪಿ ಕಾಲದ ಹಗರಣಗಳ ತನಿಖೆಗೆ ಚುರುಕು ಮುಟ್ಟಿಸಿ ಎಂದು ಹೈಕಮಾಂಡ್ ಸೂಚನೆ ನೀಡಿದೆ. ಅವರ ಹಗರಣಗಳನ್ನು ಬಯಲು ಮಾಡಿ. ಬಿಜೆಪಿಯ ಸರ್ಕಾರದ ಮೇಲಿನ ಆರೋಪಗಳಿಗೆ ಬಲವಾದ ಕೌಂಟರ್ ಕೊಡುವಂತೆ ತಾಕೀತು ಮಾಡಿದ್ದಾರೆ ಎಂಬುದು ತಿಳಿದುಬಂದಿದೆ.
ಆಡಳಿತದಲ್ಲಿ ಯಾವುದೇ ಗೊಂದಲ ಆಗದಂತೆ ನೋಡಿಕೊಳ್ಳಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಮುಂದಿಟ್ಟುಕೊಂಡು ರಾಷ್ಟ್ರೀಯವಾಗಿ ನಮ್ಮನ್ನು ಮುಜುಗರಗೊಳಪಡಿಸುವ ಯತ್ನ ಮಾಡುತ್ತಿದ್ದಾರೆ. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ಯಾವುದೇ ಹಗರಣ, ವಿವಾದಗಳಿಗೆ ಆಸ್ಪದ ನೀಡಬೇಡಿ. ಬಿಜೆಪಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗೊಂದಲ, ಹಗರಣ ಆರೋಪವನ್ನು ಪ್ರಸ್ತಾಪಿಸಿ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ಗೆ ಠಕ್ಕರ್ ನೀಡುತ್ತಿದೆ ಎಂದು ವರಿಷ್ಠರು ವಿವರಿಸಿದ್ದಾರೆ.
ರಾಜ್ಯಪಾಲರ ವಿರುದ್ಧದ ಹೋರಾಟಕ್ಕೆ ಹೈಕಮಾಂಡ್ ಸಿಎಂ ಹಾಗೂ ಡಿಸಿಎಂ ಜೊತೆಗಿರುತ್ತದೆ. ರಾಜ್ಯಪಾಲರ ವಿರುದ್ಧ ಕಾನೂನು ಹೋರಾಟ ಮಾಡಿ. ನಾವು ನಿಮ್ಮ ಜೊತೆಗೆ ಇರುತ್ತೇವೆ. ಬಿಜೆಪಿ-ಜೆಡಿಎಸ್ ಸಂಚಿನ ಬಗ್ಗೆ ಜಿಲ್ಲೆಗಳಿಗೆ ತೆರಳಿ ಸತ್ಯವನ್ನು ಜನರ ಮುಂದಿಡಿ ಎಂದು ವರಿಷ್ಠರು ಸಚಿವರುಗಳಿಗೆ ಸೂಚನೆ ನೀಡಿದ್ದಾರೆ.