ಶಿವಮೊಗ್ಗ: ವಾಹನ ತಡೆದು ತಪಾಸಣೆಗೆ ಮುಂದಾದ ಸಂಚಾರಿ ಪೊಲೀಸ್ ಸಿಬ್ಬಂದಿಯನ್ನೇ ಕಾರೊಂದು ಹೊತ್ತೊಯ್ದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈ ರೀತಿ ಕಾರು ಚಲಾಯಿಸಿರುವುದು ಭದ್ರಾವತಿ ನಿವಾಸಿ ಮಿಥುನ್ ಜಗದಾಳೆ ಎಂದು ತಿಳಿದು ಬಂದಿದೆ.
ಶಿವಮೊಗ್ಗದ ಪೂರ್ವ ಸಂಚಾರಿ ಪೊಲೀಸರು ಸಹ್ಯಾದ್ರಿ ಕಾಲೇಜು ಮುಂಭಾಗ ವಾಹನ ತಪಾಸಣೆ ನಡೆಸುತ್ತಿದ್ದರು. ಅಲ್ಲಿಗೆ ಕಾರೊಂದು ಬಂದಿದೆ. ಚಾಲಕನಿಗೆ ಕಾರು ನಿಲ್ಲಿಸುವಂತೆ ಟ್ರಾಫಿಕ್ ಪೊಲೀಸ್ ಸೂಚಿಸಿದ್ದಾರೆ. ಆದರೆ ಆತ ನಿಲ್ಲಿಸದೆ ಮುಂದೆ ಸಾಗಿದ್ದಾನೆ. ಕೂಡಲೇ ಕಾರಿನ ಮುಂಭಾಗ ಹಿಡಿದ ಪೊಲೀಸ್ ಸಿಬ್ಬಂದಿ ಬಾನೆಟ್ ಮೇಲೆ ಹತ್ತಿದ್ದಾರೆ.
ನಂತರ ಕಾರು ಚಾಲಕ ಸಹ್ಯಾದ್ರಿ ಕಾಲೇಜಿನ ಎರಡನೇ ಗೇಟ್ನಿಂದ ಮತ್ತೂರು ಕ್ರಾಸ್ ತನಕ ಸುಮಾರು 100 ಮೀಟರ್ ಸಾಗಿದ್ದಾನೆ. ನಂತರ ನಿಲ್ಲಿಸಿದ್ದಾನೆ. ತಕ್ಷಣ ಟ್ರಾಫಿಕ್ ಸಿಬ್ಬಂದಿ ಚಾಲಕನಿಗೆ ದಂಡ ಹಾಕಿ ಕಳುಹಿಸಿದ್ದಾರೆ. ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಕಾರು ಚಾಲಕನ ವಿರುದ್ಧ ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದರು.