ಬೆಂಗಳೂರು: 'ದರ್ಶನ್, ಮುಡಾ ವಿಚಾರ ಬಿಡ್ರಪ್ಪ, ಮೊದಲು ಮಹದಾಯಿ ವಿಚಾರದಲ್ಲಿ ಏನಾಗಿದೆ ಮಾತನಾಡಿ' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ತಿರುಗೇಟು ನೀಡಿದರು.
ಮುಡಾ ಪ್ರಕರಣ ಡೈವರ್ಟ್ಗೆ ರೇಣುಕಾಸ್ವಾಮಿ ಫೋಟೋ ರಿಲೀಸ್ ಎಂಬ ಪ್ರಲ್ಹಾದ್ ಜೋಶಿ ಆರೋಪಕ್ಕೆ ಡಿಸಿಎಂ ಪ್ರತಿಕ್ರಿಯಿಸುತ್ತ, ಮೊದಲು ಭದ್ರಾ ಮೇಲ್ದಂಡೆ ದುಡ್ಡು ಕೊಡಿಸ್ರಪ್ಪಾ. 5,300 ಕೋಟಿ ರೂ. ಬರಬೇಕಾದುದನ್ನು ಕೊಡಿಸಿ. ಪ್ರಲ್ಹಾದ್ ಜೋಶಿಯವರಿಂದ ಕೊಡಿಸಿ. ಆಮೇಲೆ ಅವರ ಮಾತಿನ ಬಗ್ಗೆ ಉತ್ತರ ಕೊಡೋಣ ಎಂದು ಟಾಂಗ್ ನೀಡಿದರು.
ನಿನ್ನೆ ಎತ್ತಿನಹೊಳೆ ಯೋಜನೆಗೆ ಚಾಲನೆ ಕೊಟ್ಟಿದ್ದೇವೆ. ಎಲ್ಲರೂ ನಮಗೆ ಸಹಕಾರ ಕೊಟ್ಟಿದ್ದಾರೆ. ರಾಜಕೀಯವಾಗಿ ಟೀಕೆ ಮಾಡಬಹುದು. ಆದರೆ ನಾವು ನಮ್ಮ ಕೆಲಸ ಮಾಡಿದ್ದೇವೆ. ರಾಜ್ಯದಲ್ಲಿ ಒಳ್ಳೆಯ ಮಳೆ ಬಿದ್ದಿದೆ ಬೆಳೆ ಆಗುತ್ತಿದೆ. ಎಲ್ಲಾ ವಿಘ್ನಗಳು ನಿವಾರಣೆಯಾಗಿದೆ. ಇನ್ನು ಬಯಲುಸೀಮೆಯಲ್ಲಿ ಕೆರೆಗಳು ತುಂಬಿಲ್ಲ. ಎತ್ತಿನಹೊಳೆ ಯೋಜನೆ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಕೊಟ್ಟಿಲ್ಲ. ಕೇಂದ್ರದಿಂದ 5,300 ಕೋಟಿ ಹಣ ಬಂದಿಲ್ಲ. ಕೇಂದ್ರಕ್ಕೆ ನಿಯೋಗ ಹೋಗುವ ಬಗ್ಗೆ ಚರ್ಚೆ ಮಾಡುತ್ತೇವೆ. ಸಿಎಂ ಜೊತೆ ಮೊದಲು ಚರ್ಚೆ ಮಾಡುತ್ತೇವೆ. ನಂತರ ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಹೇಳುತ್ತೇವೆ ಎಂದರು.
ಮುಂದುವರೆದು, ಚಿಕ್ಕಬಳ್ಳಾಪುರ ಸಂಸದರು ಸವಾಲು ಹಾಕಿದ್ದಾರೆ. ಅವರ ಸವಾಲನ್ನು ನಾನು ಸ್ವೀಕರಿಸುತ್ತೇನೆ. ಹಿಂದೆ ಶರಾವತಿ ಸುಟ್ಟುಹೋಗಿತ್ತು. ಅದನ್ನು ನಾವು ಸರಿ ಮಾಡಿದ್ದೇವೆ. ತುಂಗಭದ್ರಾ ಗೇಟ್ ಒಡೆದು ಹೋಗಿತ್ತು. ಅದನ್ನು ಸರಿಪಡಿಸಿದ್ದೆವು, ಈಗ ನೀರು ತುಂಬಿದೆ. ಎಲ್ಲವೂ ಸರಿ ಹೋಗುತ್ತಿದೆ, ಎಲ್ಲರಿಗೆ ಒಳ್ಳೆಯದಾಗಲಿ.
ನಾನು ಒಂದು ವಾರ ಖಾಸಗಿ ಪ್ರವಾಸಕ್ಕೆ ಹೋಗುತ್ತಿದ್ದೇನೆ. ತುಮಕೂರು, ದೊಡ್ಡಬಳ್ಳಾಪುರದಲ್ಲಿ ಯೋಜನೆ ಅನುಷ್ಠಾನ ಸಂಬಂಧ ಸಮಸ್ಯೆ ಇದೆ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇದೆ. ನಾನು ವಾಪಸ್ ಬಂದ ನಂತರ ಅದನ್ನು ಪರಿಹರಿಸುತ್ತೇನೆ. ಇದೊಂದು ಚಾಲೆಂಜಿಂಗ್ ಜಾಬ್ ಎಂದರು.