ಬೆಂಗಳೂರು: ತಿರುಪತಿ ತಿರುಮಲ ದೇವಸ್ಥಾನದ ಪ್ರಸಾದಕ್ಕೆ ಕರ್ನಾಟಕದ ನಂದಿನಿ ತುಪ್ಪವನ್ನು ಸರಬರಾಜು ಮಾಡಲಾಗುತ್ತಿದ್ದು, ತುಪ್ಪದ ಟ್ಯಾಂಕರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣದಲ್ಲಿ ಬುಧವಾರ ರಾತ್ರಿ ಚಾಲನೆ ನೀಡಿದರು. ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಭೀಮಾನಾಯಕ್ ಮತ್ತು ಕೆಎಂಎಫ್ ಎಂಡಿ ಜಗದೀಶ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು. ಇದೇ ವೇಳೆ, ಸಿಎಂ ಸಿದ್ದರಾಮಯ್ಯ ಅವರು ನಂದಿನಿ ದೇಸಿ ಹಸುವಿನ ತುಪ್ಪವನ್ನು ಬಿಡುಗಡೆಗೊಳಿಸಿದರು.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳವು ಕಳೆದ 5 ದಶಕಗಳಿಂದಲೂ ತನ್ನ ಸದಸ್ಯ ಹಾಲು ಒಕ್ಕೂಟಗಳ ಮೂಲಕ ರಾಜ್ಯದ 24 ಲಕ್ಷಕ್ಕೂ ಹೆಚ್ಚು ಹೈನುಗಾರರಿಂದ ಹಾಲು ಖರೀದಿಸಿ, ಸಂಸ್ಕರಿಸಿ, 'ಗೋವಿನಿಂದ ಗ್ರಾಹಕರವರೆಗೆ' ಎಂಬ ಶೀರ್ಷಿಕೆಯನ್ನು ಹೊತ್ತು "ನಂದಿನಿ" ಬ್ರ್ಯಾಂಡ್ನಲ್ಲಿ ಉತ್ಕೃಷ್ಟ ಗುಣಮಟ್ಟದ ವಿವಿಧ ಮಾದರಿಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಪರಿಚಯಿಸಿದೆ. ನಂದಿನಿಯು ಕರ್ನಾಟಕ ರಾಜ್ಯದ ಮನೆ ಮಾತಾಗಿರುವ ಬ್ರ್ಯಾಂಡ್ ಆಗಿರುವುದಲ್ಲದೇ, ರಾಷ್ಟ್ರಾದ್ಯಂತ ಗ್ರಾಹಕರು ಗುರುತಿಸುವ ಪ್ರತಿಷ್ಠಿತ ಹಾಲಿನ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದಿಂದ ತಿರುಮಲ ತಿರುಪತಿ ದೇವಸ್ಥಾನದವರಿಗೆ ಹಲವಾರು ವರ್ಷಗಳಿಂದ ಅಸ್ಮಾರ್ಕ್ ಸ್ಪೆಷಲ್ ಗ್ರೇಡ್ ಹೊಂದಿರುವ ಹಸುವಿನ ತುಪ್ಪವನ್ನು ಟ್ಯಾಂಕರ್ ಮೂಲಕ ತಿರುಮಲ ತಿರುಪತಿ ದೇವಸ್ಥಾನಕ್ಕೆ ಪವಿತ್ರ ಶ್ರೀವಾರಿ ಪ್ರಸಾದ ತಯಾರಿಕೆಗೆ ಸರಬರಾಜು ಮಾಡಲಾಗುತ್ತಿದೆ.
2013-14ನೇ ಸಾಲಿನಿಂದ 2021-22ರ ವರೆಗೂ 5000 ಮೆ. ಟನ್ ತುಪ್ಪವನ್ನು ತಿರುಮಲ ತಿರುಪತಿ ದೇವಸ್ಥಾನಕ್ಕೆ ಸರಬರಾಜು ಮಾಡಲಾಗಿದೆ. ಪ್ರಸ್ತುತ 2024-25 ನೇ ಸಾಲಿನಲ್ಲಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಪ್ರಾರಂಭಿಕವಾಗಿ 350 ಮೆ.ಟನ್ ನಂದಿನಿ ತುಪ್ಪ ಸರಬರಾಜು ಮಾಡಲು ಟೆಂಡರ್ ಮೂಲಕ ಬೇಡಿಕೆ ನೀಡಿದ್ದು, ಅದಕ್ಕನುಗುಣವಾಗಿ ಹಸುವಿನ ತುಪ್ಪವನ್ನು ತಿರುಮಲ ತಿರುಪತಿ ದೇವಸ್ಥಾನಕ್ಕೆ ಟ್ಯಾಂಕರ್ ಮಾಲಕ ಸರಬರಾಜು ಮಾಡಲಾಗುತ್ತಿದೆ.
ನಾಟಿ ಹಸು ಹಾಲು ಪ್ರತ್ಯೇಕ ಸಂಗ್ರಹ: ಇನ್ನು ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಲಭ್ಯವಿರುವ ನಾಟಿ ಹಸುವಿನ ಹಾಲನ್ನು ಪ್ರತ್ಯೇಕವಾಗಿ ಬೆಂಗಳೂರು ಹಾಲು ಒಕ್ಕೂಟದಲ್ಲಿ ಸಂಗ್ರಹಿಸಿಲಾಗುತ್ತದೆ. ಬೆಂಗಳೂರು ಹಾಲು ಒಕ್ಕೂಟದಲ್ಲಿ ಈ ಹಾಲನ್ನು ಸಂಗ್ರಹಿಸಲು ಮಾಗಡಿ ಮತ್ತು ಕನಕಪುರ ತಾಲೂಕಿನ ಮರಳವಾಡಿ, ಕೋಡಿಹಳ್ಳಿ ಮಾಡಬಾಳು ಮತ್ತು ಕಸಬಾ ಹೋಬಳಿಯ 87 ಹಾಲು ಉತ್ಪಾದಕರ ಸಂಘಗಳನ್ನು ಗುರುತಿಸಲಾಗಿದೆ. ಈ ಸಂಘಗಳಲ್ಲಿ ದೇಸಿ ಹಸುಗಳಾದ ಶಾಹೀವಾಲ್, ಗಿರ್, ಅಮೃತ್ ಮಹಲ್ ಮತ್ತು ಹಳ್ಳಿಕಾರ್ ತಳಿಗಳಿಂದ ಹಾಲನ್ನು ಪ್ರತ್ಯೇಕವಾಗಿ ನಿಗದಿಪಡಿಸಿರುವ ಮೂರು ಬಲ್ಕ್ ಮಿಲ್ಕ್ ಕೂಲರ್ (BMC) ಗಳಲ್ಲಿ ಸಂಗ್ರಹಿಸಿ ಪ್ರತ್ಯೇಕವಾದ ಹಾಲಿನ ಟ್ಯಾಂಕರ್‌ಗಳಲ್ಲಿ ರವಾನಿಸಲಾಗುವುದು. ಈ ಹಾಲಿನಲ್ಲಿ ಸರಾಸರಿ 4.8 % ಜಿಡ್ಡಿನ ಅಂಶವಿರುತ್ತದೆ. ದೇಸಿ ತಳಿಯ ಪ್ರತಿ ಲೀಟರ್ ಹಾಲಿಗೆ 57.85 ರೂ. ದರವನ್ನು ನಿಗದಿ ಪಡಿಸಲಾಗಿದೆ.
ದೇಸಿ ಹಸುವಿನ ಹಾಲಿನಿಂದ ತುಪ್ಪ ತಯಾರಿಸಿ, ನಂದಿನಿ "ದೇಸಿ ಹಸುವಿನ ತುಪ್ಪ" 200 ಮಿಲಿ ಮತ್ತು 500 ಮಿಲಿ ಬಾಟಲ್‌ಗಳಲ್ಲಿ ಗ್ರಾಹಕರಿಗೆ ಬಿಡುಗಡೆ ಮಾಡಲಾಗುತ್ತಿದೆ. 500 ಮಿಲಿ ಬಾಟಲ್‌ನ ದರವು 900 ರೂ. ಮತ್ತು 200 ಮಿಲಿ ಬಾಟಲ್‌ನ ದರವು 400 ರೂ. ಗಳಾಗಿರುತ್ತದೆ. ಪ್ರಾರಂಭಿಕ ಹಂತದಲ್ಲಿ ಇ- ಕಾಮರ್ಸ್/ಆನ್‌ಲೈನ್ ಮೂಲಕ ಮಾರಾಟ ಮಾಡಲಾಗುವುದು.
ದೇಸಿ ಹಸುವಿನ ತುಪ್ಪದ ಅನುಕೂಲಗಳು: ದೇಸಿ ತುಪ್ಪ ಸೇವನೆಯಿಂದ ಹೃದಯ ಮತ್ತು ಮೂಳೆಗಳ ಆರೋಗ್ಯವು ವೃದ್ಧಿಸುತ್ತದೆ. ದೇಸಿ ತುಪ್ಪವು ವಿಟಮಿನ್ ಎ.ಡಿ.ಇ ಮತ್ತು ಕೆಯ ಸಮೃದ್ಧ ಮೂಲವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದೇಸಿ ತುಪ್ಪವು ಬ್ಯುಟರಿಕ್ ಆಮ್ಲವನ್ನು ಸಹ ಹೊಂದಿದ್ದು, ಕರುಳಿನ ಆರೋಗ್ಯವನ್ನು ಸುಧಾರಿಸಲು ಮತ್ತು ಉತ್ತಮ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ದೇಸಿ ತುಪ್ಪದಲ್ಲಿ OMEGA-3 ಇರುವುದರಿಂದ ಕಣ್ಣಿನ ಆರೋಗ್ಯವೃದ್ಧಿಗೆ ಅನುಕೂಲಕರ. ಚರ್ಮದ ಕಾಂತಿ ಮತ್ತು ಪೋಷಣೆಗೆ ಅನುಕೂಲಕರವಾಗಿದೆ.