ಮಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ವಿಚಾರದಲ್ಲಿ ಸಚಿವ ವಿ.ನಾಗೇಂದ್ರ ಮೇಲಿನ ಆರೋಪದ ವಿಚಾರದಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಈಶ್ವರಪ್ಪ, ಸಿದ್ದರಾಮಯ್ಯಗೆ ಏಕೆ ಈ ವಿಚಾರದಲ್ಲಿ ಡಬ್ಬಲ್ ಸ್ಟ್ಯಾಂಡರ್ಡ್. ಹಿಂದೆ ನನ್ನ ರಾಜೀನಾಮೆ ಕೇಳಿ ಮೆರವಣಿಗೆ ಮಾಡಿದ್ದ ಅವರು ಈಗೇಕೆ ನಿಮ್ಮ ಮಂತ್ರಿಯಿಂದ ರಾಜೀನಾಮೆ ಪಡೆಯುತ್ತಿಲ್ಲ. ಯಾರು ಬೇಕಾದರೂ ಸಾಯಲಿ ಎಂದು ಬಿಟ್ಟುಬಿಡುತ್ತೀರಾ?. ತನಿಖೆ ಮಾಡಿಸಿ, ಅದರಲ್ಲಿ ನಾಗೇಂದ್ರ ತಪ್ಪಿತಸ್ಥ ಅಲ್ಲ ಎಂದು ಕಂಡು ಬಂದರೆ, ಅಂದೇ ತೆಗೆದುಕೊಳ್ಳಿ. ಬೇಕಾದರೆ ಡಿಸಿಎಂ ಮಾಡಿ ನಾವೇನು ಕೇಳುವುದಿಲ್ಲ ಎಂದು ಹೇಳಿದರು.
ನನ್ನ ಮೇಲೆ ಇಂತಹದ್ದೇ ಆರೋಪ ಬಂದ ವೇಳೆ ತಕ್ಷಣ ನಾನು ದೆಹಲಿಯಲ್ಲಿರುವ ಬಿ.ಎಲ್.ಸಂತೋಷ್ ಅವರಿಗೆ ಕರೆ ಮಾಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆದುಕೊಳ್ಳುವಂತೆ ಒತ್ತಾಯಿಸಿದ್ದೆ. ಆದರೆ, ಅವರು ಈಗ ರಾಜೀನಾಮೆ ಕೊಡಬೇಡಿ ಮೋದಿ, ಅಮಿತ್ ಶಾಗೆ ಕೇಳಿ ಹೇಳುತ್ತೇನೆ ಎಂದಿದ್ದರು. ಮರುದಿನ ಮತ್ತೆ ಕರೆ ಮಾಡಿದೆ. ಸಂಜೆ ಮೇಲೆ ನನಗೆ ರಾಜೀನಾಮೆ ನೀಡುವಂತೆ ಅನುಮತಿ ಸಿಕ್ಕಿತು. ಆಮೇಲೆ ತನಿಖೆ ನಡೆದು ನನ್ನ ಮೇಲಿನ ಆರೋಪ ಸುಳ್ಳು ಎಂದು ಸಾಬೀತಾಯ್ತು ಎಂದು ಹೇಳಿದರು.
'ಅಪ್ಪ - ಮಕ್ಕಳ' ವಿರುದ್ಧ ಈಶ್ವರಪ್ಪ ತೀವ್ರ ವಾಗ್ದಾಳಿ: ದೇಶದಲ್ಲಿ ಬಿಜೆಪಿ ಸಿದ್ದಾಂತ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರೆ, ರಾಜ್ಯದಲ್ಲಿ ಈ ಸಿದ್ಧಾಂತಕ್ಕೆ ತಿಲಾಂಜಲಿ ಇಡಲಾಗುತ್ತಿದೆ. ರಾಜ್ಯದಲ್ಲಿ ಅಪ್ಪ - ಮಕ್ಕಳ ಹಿಡಿತದಿಂದ ಬಿಜೆಪಿ ಪಕ್ಷ ಹೊರಬರಬೇಕಿದೆ. ಬಿಜೆಪಿಯ ಶುದ್ಧೀಕರಣವಾದಲ್ಲಿ ಇದು ಸಾಧ್ಯ ಎಂದು ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದರು.
ಹಿಂದುತ್ವಬೇಕು ಎಂದು ಈವರೆಗೆ ಬಿಜೆಪಿ ಪಕ್ಷ ಇದ್ದದ್ದು. ಆದರೆ, ಕರ್ನಾಟಕದ ಬಿಜೆಪಿಯಲ್ಲಿ ಕಾಂಗ್ರೆಸ್ ಸಂಸ್ಕೃತಿ ಬಂದಿದೆ. ಯಡಿಯೂರಪ್ಪ ಮನೆಯಲ್ಲಿ ಅಪ್ಪ - ಮಕ್ಕಳು ಎಲ್ಲರಿಗೂ ಅಧಿಕಾರವಿದೆ. ಕುಟುಂಬದ ರಾಜಕಾರಣವನ್ನು ಕರ್ನಾಟದಿಂದ ಮುಕ್ತ ಮಾಡಬೇಕು ಎನ್ನುವವರಿಗೆ ನೋವಾಗಿದೆ. ನಾವೆಲ್ಲ ಸಾಮೂಹಿಕ ನೇತೃತ್ವದಲ್ಲಿ ಪಕ್ಷ ಕಟ್ಟಿದ್ದೇವೆ. ಆದರೆ, ಇಂದು ಸಾಮೂಹಿಕ ನೇತೃತ್ವ ಅಳಿದು ಸರ್ವಾಧಿಕಾರದತ್ತ ಹೋಗಿದೆ. ಹಿಂದುತ್ವ ಹೋಗಿ ಜಾತೀಯತೆ ಬಂದಿದೆ. ಇದರ ವಿರುದ್ಧ ನಾನು ಲೋಕಸಭೆಗೆ ಸ್ಪರ್ಧಿಸಿದ್ದೇನೆ ಎಂದು ಹೇಳಿದರು.
ಜಾತಿ ಆಧಾರದಲ್ಲಿ, ಹಣ ಬಲದ ಮೇಲೆ ಇತ್ತೀಚೆಗೆ ಪಕ್ಷ ಸೇರಿದವರಿಗೆ ಟಿಕೆಟ್ ನೀಡಿದ್ದಾರೆ. ಪುತ್ರನಿಗೆ ಅನುಕೂಲವಾಗುತ್ತದೆ ಎಂಬ ಒಂದೇ ಕಾರಣಕ್ಕೆ ಹಿಂದುತ್ವ ವಿರೋಧಿಗೆ ಯಡಿಯೂರಪ್ಪ ಟಿಕೆಟ್ ನೀಡಿದ್ದಾರೆ. ಇದನ್ನು ಸಹಿಸದೇ ರಘುಪತಿ ಭಟ್ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಆದರೆ ಬಿಜೆಪಿಯವರು ನೇರವಾಗಿ ರಘುಪತಿ ಭಟ್ ಅವರಿಗೆ ಬೆಂಬಲ ನೀಡಿದ್ರೆ, ಕೆಲವರು ಗೊತ್ತಾಗದಂತೆ ಬೆಂಬಲ ನೀಡುತ್ತಿದ್ದಾರೆ. ಪಕ್ಷ ನಿಷ್ಠೆ ಕಡಿಮೆಯಾಗಿ ರಾಜ್ಯದಲ್ಲಿ ಬಿಜೆಪಿ 66 ಸ್ಥಾನಕ್ಕೆ ಇಳಿದಿದೆ. ಯಡಿಯೂರಪ್ಪ ಅವರೊಂದಿಗೆ ಹೋದವರಿಗೆ ಟಿಕೆಟ್ ನೀಡುತ್ತಾರೆ. ಅವರು ಬಿಜೆಪಿಯನ್ನು ಸ್ವಂತ ಆಸ್ತಿಯಂತೆ ಬಳಸುತ್ತಿದ್ದಾರೆ. ಯಡಿಯೂರಪ್ಪ ಪಕ್ಷವನ್ನು ಹಿಡಿತದಲ್ಲಿ ಇಡುವಾಗ ನಾವು ಸುಮ್ಮನೆ ಕೂರಬಾರದು. ಬಿಜೆಪಿ ಉಳಿಸಲು ಹೋರಾಟ ಮಾಡಬೇಕು. ಈ ಚುನಾವಣೆ ಮೂಲಕ ಬಿಜೆಪಿ ಶುದ್ದೀಕರಣ ಆಗಬೇಕು ಎಂದು ಈಶ್ವರಪ್ಪ ಹೇಳಿದರು.