ಬೆಂಗಳೂರು: ಬಿನ್ನಿಗಾನಹಳ್ಳಿಯಿಂದ ಚಿಕ್ಕಬಾಣವರದವರೆಗಿನ ಬೆಂಗಳೂರು ಉಪನಗರ (ಸಬ್ ಅರ್ಬನ್) ರೈಲ್ವೆ ಯೋಜನೆಯ ರೈಲ್ವೆ ನಿಲ್ದಾಣ ಕಾರಿಡಾರ್ -2 ರ ನಡುವಿನ 699 ಮರಗಳನ್ನು ಜುಲೈ 12ರವರೆಗೂ ಕಡಿಯದಂತೆ ಹೈಕೋರ್ಟ್ ನಿರ್ಬಂಧ ವಿಧಿಸಿ ಆದೇಶಿಸಿದೆ.
ಮರ ಅಧಿಕಾರಿಯೂ ಆಗಿರುವ ಬಿಬಿಎಂಪಿ ಅರಣ್ಯ ಉಪ ಸಂರಕ್ಷಣಾಧಿಕಾರಿ, 2024ರ ಮೇ 29ರಂದು ರಸ್ತೆ ವಿಸ್ತಾರಣೆಗಾಗಿ 699 ಮರಗಳನ್ನು ಕಡಿಯುವುದಕ್ಕೆ ಅನುಮತಿ ನೀಡಿದ್ದರು. ರಾಜಧಾನಿ ಬೆಂಗಳೂರು ನಗರದಲ್ಲಿ ಮರಗಳ ಗಣತಿ ನಡೆಸುವಂತೆ ಕೋರಿ ದತ್ತಾತ್ರೇಯ ದೇವರು ಮತ್ತು ಬೆಂಗಳೂರು ಎನ್ವಿರಾನ್ಮೆಂಟಲ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ, ಮತ್ತೆ ಮಧ್ಯಂತರ ಅರ್ಜಿ ಸಲ್ಲಿಸಿ ಬಿಬಿಎಂಪಿ ಮರ ಅಧಿಕಾರಿಯ ಕ್ರಮವನ್ನು ಪ್ರಶ್ನಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಜುಲೈ 8ಕ್ಕೆ ಮುಂದೂಡಿತು. ಅಲ್ಲದೆ, ಈ ಹಿಂದೆ ನೀಡಿದ್ದ ಆದೇಶವನ್ನು ಪರಿಶೀಲಿಸಿ ಈ ಕುರಿತು ಪರಿಹಾರ ಕಂಡುಕೊಳ್ಳಲಾಗುವುದು ಎಂದು ಪೀಠ ತಿಳಿಸಿತು. ಅಲ್ಲದೆ, ಅರ್ಜಿದಾರರ ಮಧ್ಯಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಬಿಬಿಎಂಪಿಗೆ ಸೂಚನೆ ನೀಡಿತು.
ವಿಚಾರಣೆ ವೇಳೆ ಬಿಬಿಎಂಪಿ ಅರಣ್ಯ ಅಧಿಕಾರಿ ಆದೇಶವನ್ನು ಪರಿಶೀಲಿಸಲಾಗುವುದು ಎಂದು ಮುಖ್ಯನ್ಯಾಯಮೂರ್ತಿಗಳು ಮೌಖಿಕವಾಗಿ ಅಭಿಪ್ರಾಯಪಟ್ಟರು. ಅಲ್ಲದೆ, ಅತ್ಯಂತ ಅಗತ್ಯವಿದ್ದಲ್ಲಿ ಮಾತ್ರ ಮರಗಳನ್ನು ಕಡಿಯಬೇಕು. ಇಲ್ಲವಾದಲ್ಲಿ ಮರಗಳನ್ನು ಏಕೆ ಕಡಿಯಬೇಕು ಎಂದು ಪ್ರಶ್ನಿಸಿದರು.