ಕಡಬ (ದಕ್ಷಿಣ ಕನ್ನಡ) : ಕಡಬದ ಸರ್ಕಾರಿ ಕಾಲೇಜು ಆವರಣದಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗುತ್ತಿದ್ದ ಆರೋಪಿ ಆಬೀನ್ನನ್ನು ಶಾಲಾ ವಿದ್ಯಾರ್ಥಿಗಳು ಬೆನ್ನಟ್ಟಿಕೊಂಡು ಹೋಗಿ ಹಿಡಿದು ತರುತ್ತಿರುವ ಎಕ್ಸ್ಲೂಸಿವ್ ವಿಡಿಯೋ ಈಟಿವಿ ಭಾರತಕ್ಕೆ ಲಭ್ಯವಾಗಿದೆ.
ಕಡಬದ ಸರ್ಕಾರಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳನ್ನು ಗುರಿಯಾಗಿಸಿ ಸೋಮವಾರ ಬೆಳಗ್ಗೆ ನಡೆದ ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ಎಂಬಿಎ ವಿದ್ಯಾರ್ಥಿ ಆಬೀನ್ ಕೃತ್ಯ ಎಸಗಲಿ ಎಂದು ಭಾನುವಾರ ತನ್ನ ಹುಟ್ಟೂರಾದ ಕೇರಳದಿಂದ ಮಂಗಳೂರಿಗೆ ರೈಲಿನಲ್ಲಿ ಬಂದಿದ್ದು, ನಂತರ ಕಡಬಕ್ಕೆ ಆಗಮಿಸಿದ್ದ. ಅಲ್ಲಿನ ಬೇಕರಿಯೊಂದರ ಸಿಸಿಟಿವಿಯಲ್ಲಿ ಈತನ ಚಲನವಲನಗಳು ಈ ಮೊದಲು ಪತ್ತೆಯಾಗಿತ್ತು.
ಆಬೀನ್ ಕೇರಳದ ಮಲಪ್ಪುರಂ ಜಿಲ್ಲೆಯ ನಿಲಂಬೂರು ತಾಲೂಕು ನಿವಾಸಿ. ಭಾನುವಾರ ಮಧ್ಯಾಹ್ನ ರೈಲಿನ ಮೂಲಕ ನಿಲಂಬೂರಿನಿಂದ ಹೊರಟ ಆತ ರಾತ್ರಿ ವೇಳೆ ಮಂಗಳೂರು ರೈಲು ನಿಲ್ದಾಣ ತಲುಪಿದ್ದ. ಅಲ್ಲಿಯೇ ಬೆಳಿಗ್ಗೆಯವರೆಗೆ ಕಾಲ ಕಳೆದ ಅವರು ಬಳಿಕ ಮಂಗಳೂರಿನಿಂದ ಬಸ್ ಹಿಡಿದು ಕಡಬಕ್ಕೆ ಆಗಮಿಸಿದ್ದ ಎಂಬುದು ತಿಳಿದುಬಂದಿದೆ. ಆಬೀನ್ ಕಾಲೇಜ್ ಪ್ರವೇಶಿಸುವುದಕ್ಕೆ ಮುಂಚೆ ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಮವಸ್ತ್ರವನ್ನು ಹೋಲುವ ಬಿಳಿ ಅಂಗಿ, ನೀಲಿ ಪ್ಯಾಂಟ್ ಧರಿಸಿಕೊಂಡು ಶಾಲಾ ಆವರಣ ಪ್ರವೇಶಿಸಿದ್ದ ಎಂದು ತಿಳಿದುಬಂದಿತ್ತು.
ಇದಕ್ಕೆ ಮುಂಚೆ ಈತ ಕಡಬದ ಕೆಳಗಿನ ಬಸ್ ನಿಲ್ದಾಣದ ಬಳಿ ಬೆಳಗ್ಗಿನ ಜಾವ 8 ಗಂಟೆ ಸುಮಾರಿಗೆ ಬೇಕರಿಯಲ್ಲಿ ತನ್ನಲ್ಲಿದ್ದ ಎರಡು ಮೊಬೈಲ್ ಫೋನ್ಗಳನ್ನು ಚಾರ್ಜ್ಗಿಟ್ಟಿದ್ದ. ಈ ವೇಳೆಯೂ ಆತ ಕಪ್ಪು ಫ್ಯಾಂಟ್ ಹಾಗೂ ಕಪ್ಪು ಅಂಗಿ ಧರಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆ್ಯಸಿಡ್ ಎರಚಿ ಓಡುತ್ತಿದ್ದ ಆರೋಪಿಯನ್ನ ಹಿಡಿದ ವಿದ್ಯಾರ್ಥಿಗಳು : ಫೋನ್ ಚಾರ್ಜ್ಗಿಟ್ಟು, ಅಲ್ಲೇ ಒಂದು ಬ್ಯಾಗ್ ಬಿಟ್ಟಿದ್ದಾನೆ. ಆ ಬಳಿಕ ಬ್ಯಾಗ್ನಿಂದ ಯಾವುದೋ ವಸ್ತುವನ್ನು ಪ್ಯಾಂಟ್ ಪಾಕೇಟಿಗೆ ಹಾಕಿ ಅಲ್ಲಿಂದ ಹೊರನಡೆಯುತ್ತಾನೆ. ನಂತರದಲ್ಲಿ ಆತ ಈ ಕಪ್ಪು ಬಣ್ಣದ ಬಟ್ಟೆಯನ್ನು ತಹಶಿಲ್ದಾರ್ ಕಚೇರಿ ಸಮೀಪದಲ್ಲಿ ಬಿಚ್ಚಿ ಅಲ್ಲಿಂದ ಯೂನಿಫಾರ್ಮ್ ಬಟ್ಟೆ ಧರಿಸಿ, ಶಾಲಾ ಆವರಣ ಪ್ರವೇಶಿಸಿ, ಆ್ಯಸಿಡ್ ದಾಳಿ ನಡೆಸಿದ್ದ. ಮೂವರು ಕಾಲೇಜು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ಎರಚಿ ಓಡುತ್ತಿದ್ದ ಆರೋಪಿ ಆಬೀನ್ನನ್ನು ಕಾಲೇಜಿನ ಇತರ ವಿದ್ಯಾರ್ಥಿಗಳು ಓಡಿಸಿಕೊಂಡು ಹೋಗಿ ಹಿಡಿದು ತರುತ್ತಿರುವ ವಿಡಿಯೋ ಇದೀಗ ಈಟಿವಿ ಭಾರತಕ್ಕೆ ಲಭ್ಯವಾಗಿದೆ.
ಇದನ್ನೂ ಓದಿ : ವಿದ್ಯಾರ್ಥಿನಿಗೆ ಆ್ಯಸಿಡ್ ಎರಚಿದ ಆರೋಪಿ ಬಗ್ಗೆ ಸಿಸಿಟಿವಿಯಲ್ಲಿ ಸಿಕ್ಕಿದೆ ಮಹತ್ವದ ಸಾಕ್ಷಿ