ಬೆಂಗಳೂರು: ರಾಜ್ಯ ಸರ್ಕಾರ ಹಣಕಾಸಿನ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಕೇಂದ್ರ ಸರ್ಕಾರವನ್ನು ಬೈಯುವುದರ ಬದಲು ರಾಜ್ಯದ ಹಣಕಾಸಿನ ಸ್ಥಿತಿಗತಿಯನ್ನು ಕಾಪಾಡಿಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.
ವಿಧಾನಸಭೆಯಲ್ಲಿ ಇಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಆದಾಯಕ್ಕಿಂತ ಶೇ.103 ರಷ್ಟು ಕಂದಾಯ ವೆಚ್ಚವನ್ನು ಬಳಕೆ ಮಾಡುವುದಾಗಿ ಹೇಳುವ ಮೂಲಕ ನಾಡಿನ ಆರ್ಥಿಕ ಶಿಸ್ತನ್ನು ಹಾಳು ಮಾಡಲಾಗಿದೆ. ಅಂಕಿ ಅಂಶಗಳ ಸಹಿತ, ಕಲ್ಯಾಣ ಕಾರ್ಯಕ್ರಮಗಳಿಗೆ ಹಣ ನೀಡಬೇಕು. ಆದರೆ, ಅದಕ್ಕೆ ಪೂರಕವಾದ ಆದಾಯವೂ ಅಗತ್ಯವಿದೆ. ಈ ಬಜೆಟ್‍ನಲ್ಲಿ ಯೋಜನೆ ಆಧರಿತ ವೆಚ್ಚಗಳಡಿ ಶೇ.42 ರಷ್ಟು ಖರ್ಚು ಮಾಡಲಾಗುತ್ತಿದೆ. ಇದು ಪಂಚಖಾತ್ರಿಯಂತಹ ಯೋಜನೆಗಳಿಗೆ ಬಳಕೆಯಾಗುತ್ತಿದೆ ಮತ್ತು ನಿರಂತರವಾಗಿ ವೆಚ್ಚಗಳ ಬಾಬ್ತಾಗಿರುವ ವೇತನ, ಪಿಂಚಣಿ, ಸಾಲ ಮತ್ತು ಬಡ್ಡಿ ಪಾವತಿಗಳಿಗೆ ಶೇ.61 ರಷ್ಟು ಕಂದಾಯ ವೆಚ್ಚ ನಿಗದಿಯಾಗಿದೆ ಎಂದರು.
ಕಳೆದ ಬಜೆಟ್ಗಳಲ್ಲಿ ಇದು ಶೇ.56 ಮತ್ತು ಶೇ.48 ರಷ್ಟಿತ್ತು. ಪ್ರಸ್ತುತ ಯೋಜನೇತರ ಮತ್ತು ಯೋಜನೇತರ ಆಧರಿತ ವೆಚ್ಚಗಳಿಂದ ಶೇ.61ರಷ್ಟು ಬಳಕೆಯಾಗುತ್ತಿದೆ. ಬಂಡವಾಳ ವೆಚ್ಚವನ್ನು ಹಿಂದಿನ ವರ್ಷಕ್ಕಿಂತಲೂ 1 ಸಾವಿರ ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಸೇರಿಸಿ ಒಟ್ಟು 55 ಸಾವಿರ ಕೋಟಿ ರೂ.ಗಳಿಗೆ ನಿಗದಿ ಮಾಡಿದ್ದಾರೆ ಎಂದು ಹೇಳಿದರು.
ಕಂದಾಯ ಇಲಾಖೆಯ ಮುದ್ರಾಂಕ ಶುಲ್ಕ, ಅಬಕಾರಿ ಹಾಗೂ ಮೋಟಾರು ವಾಹನ ತೆರಿಗೆ ಹೆಚ್ಚಳದಿಂದ 13 ಸಾವಿರ ಕೋಟಿ ರೂ.ಗಳು ಹೆಚ್ಚುವರಿ ಹಣ ಸಂದಾಯವಾಗುತ್ತಿದೆ. ಈ ಹಿಂದೆ ತಮ್ಮ ಸರ್ಕಾರ 8 ಸಾವಿರ ಕೋಟಿ ರೂ.ಗಳ ಹೆಚ್ಚುವರಿ ಆದಾಯ ಸಂಗ್ರಹಿಸಿತ್ತು. ಹೆಚ್ಚುವರಿಯಾದ 26 ಸಾವಿರ ಕೋಟಿ ರೂ.ಗಳು ಕಂದಾಯ ವೆಚ್ಚಕ್ಕೆ ಬಳಕೆಯಾಗುತ್ತಿವೆ ಎಂದು ವಿವರಿಸಿದರು. 7ನೇ ವೇತನ ಆಯೋಗಕ್ಕೆ 20 ಸಾವಿರ ಕೋಟಿ ರೂ.ಗಳ ಅನುದಾನದ ಅಗತ್ಯವಿದೆ. ಅದನ್ನು ಈ ಬಜೆಟ್‍ನಲ್ಲಿ ಎಲ್ಲಿಯೂ ನಮೂದಿಸಿಲ್ಲ. ಕಂದಾಯ ವೆಚ್ಚವೇ ದುಬಾರಿಯಾಗಿರುವುದರಿಂದ ಅಭಿವೃದ್ಧಿಗೆ ಹಣವೇ ಇಲ್ಲದಂತಾಗಿದೆ ಎಂದು ವಿವರಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ 1.05 ಲಕ್ಷ ಕೋಟಿ ರೂ.ಗಳ ಸಾಲ ಮಾಡುತ್ತಿದೆ. ಸಾಲವನ್ನು ಬಂಡವಾಳ ವೆಚ್ಚದ ಬದಲಾಗಿ ಕಂದಾಯ ವೆಚ್ಚವಾಗಿ ಬಳಕೆ ಮಾಡುತ್ತಿರುವುದು ಸರಿಯಲ್ಲ. ಸಾಲದ ಬಾಬ್ತಿನಲ್ಲೂ ಶೇ.90 ರಷ್ಟನ್ನು ಮಾರುಕಟ್ಟೆ ಮೂಲಗಳಿಂದ ದುಬಾರಿ ಬಡ್ಡಿದರದಲ್ಲಿ ಸಂಗ್ರಹಿಸಲಾಗುತ್ತಿದೆ. ಇದು ರಾಜ್ಯದ ಆರ್ಥಿಕತೆಗೆ ಭಾರೀ ಹಾನಿ ಉಂಟು ಮಾಡಲಿದೆ ಎಂದು ಎಚ್ಚರಿಸಿದರು.
ಸಂಪನ್ಮೂಲ ಕ್ರೋಢೀಕರಣಲ್ಲಿ 12 ಸಾವಿರ ಕೋಟಿ ರೂ. ಕೊರತೆಯಾಗಿದೆ. ತತ್ಸಮಾನವಾಗಿ ವೆಚ್ಚದಲ್ಲೂ ಕೂಡ 10 ಸಾವಿರ ಕೋಟಿ ರೂ. ಕಡಿಮೆಯಿದೆ. ಸಾಮಾಜಿಕ ಸೇವೆಗೆ 96 ಸಾವಿರ ಕೋಟಿ ರೂ. ನಿಗದಿ ಮಾಡಿದ್ದಾರೆ. ಆರ್ಥಿಕ ವೆಚ್ಚಗಳನ್ನು ಕಡಿಮೆ ಮಾಡಲಾಗಿದೆ ಎಂದು ಹೇಳಿದರು.
ವಿದೇಶಿ ಬಂಡವಾಳ ಹೂಡಿಕೆ ಶೇ. 40 ರಷ್ಟು ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ನೋಂದಣಿಯಾಗಿದ್ದ 30 ಕಂಪನಿಗಳು ಸಿಂಗಾಪುರ ಸೇರಿದಂತೆ ಬೇರೆ ಬೇರೆ ದೇಶಗಳಿಗೆ ಹೋಗಿವೆ. ಈ ರೀತಿಯ ಕಂಪನಿಗಳಿಂದಲೇ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುತ್ತಿತ್ತು ಎಂದರು.
ಆರ್ಥಿಕತೆಯಲ್ಲಿ ಸಾಮರ್ಥ್ಯ ಮತ್ತು ಹಂಚಿಕೆ ಸರಿಸಮಾನವಾಗಿರಬೇಕು. ತೆರಿಗೆ ಸಂಗ್ರಹ ಸಾಮರ್ಥ್ಯ ದಕ್ಷವಾಗಿರುವುದರ ಜೊತೆಗೆ ಹಂಚಿಕೆಯಲ್ಲೂ ಅಷ್ಟೇ ನ್ಯಾಯಯುತವಾಗಿರಬೇಕು. ಹೀಗಿದ್ದಾಗ ಮಾತ್ರ ಆರ್ಥಿಕತೆ ಸಮಾನವಾಗಿರುತ್ತದೆ. ಆದರೆ ರಾಜ್ಯದಲ್ಲಿ ಅದು ಕಂಡುಬರುತ್ತಿಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸುತ್ತಿರುವ ರಾಜ್ಯ ಸರ್ಕಾರ ನಾಡಿನ ಮೂಲ ಸೌಕರ್ಯಾಭಿವೃದ್ಧಿಯಲ್ಲಿ ಕೇಂದ್ರದ ಕೊಡುಗೆಗಳನ್ನು ಮರೆಮಾಚುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ರೈಲ್ವೆ, ಸ್ಮಾರ್ಟ್ ಸಿಟಿಗೆ ತಲಾ 7 ಸಾವಿರ ಕೋಟಿ ರೂ., ಆಯುಷ್ಮಾನ್ ಭಾರತ್, ಜಲಜೀವನ್ ಮಿಷನ್ ಸೇರಿದಂತೆ ಹಲವು ಬಾಬ್ತುಗಳಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಆದಾಯ, ಕಸ್ಟಮ್ಸ್ ಮತ್ತು ವೃತ್ತಿ ತೆರಿಗೆಗಳಲ್ಲಿ ಸಂಗ್ರಹವಾಗುವ ಸಂಪನ್ಮೂಲವನ್ನು ಕೇಂದ್ರ, ರಕ್ಷಣೆ, ರೈಲ್ವೆಯಂತಹ ತನ್ನದೇ ವೆಚ್ಚಗಳಿಗೆ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲಿ 13 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದೆ. ಈ ಹಿಂದೆ ಸ್ವತಂತ್ರ್ಯ ನಂತರದಿಂದ 2014 ರವರೆಗೂ ರಾಜ್ಯದಲ್ಲಿ 6,500 ಕಿ.ಮೀ. ಮಾತ್ರ ಹೆದ್ದಾರಿ ಇತ್ತು. ಅದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರಸರ್ಕಾರ 13 ಸಾವಿರ ಕಿ.ಮೀ.ಗಳಿಗೆ ಹೆಚ್ಚಿಸಿದೆ ಎಂದರು.
ಇದಕ್ಕೆ ಆಡಳಿತ ಪಕ್ಷದ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಶಿವಮೊಗ್ಗ-ತುಮಕೂರು ರಸ್ತೆ, ಬೆಂಗಳೂರು-ಮಂಗಳೂರು ರಸ್ತೆ ಅಪೂರ್ಣವಾಗಿ ಹಲವಾರು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದೆ ಎಂದು ತಿರುಗೇಟು ನೀಡಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುಂಠಿತಗೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾರಣ. ಭೂಸ್ವಾಧೀನಾಧಿಕಾರಿಗಳನ್ನು ನೇಮಿಸಿ ಭೂಮಿಯನ್ನು ಹಸ್ತಾಂತರಿಸಿದರೆ, ಹೆದ್ದಾರಿ ನಿರ್ಮಾಣ ಕಾಮಗಾರಿ ಚುರುಕಾಗಿ ನಡೆಯಲಿದೆ ಎಂದರು.
ಇದನ್ನೂ ಓದಿ: ನಾಡಗೀತೆ ಸುತ್ತೋಲೆಯಲ್ಲಿ ಪ್ರಿಂಟ್ ಮಿಸ್ಟೇಕ್ ಆಗಿತ್ತು: ಸಚಿವ ತಂಗಡಗಿ ಸ್ಪಷ್ಟನೆ