ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ಪಂಚಮಸಾಲಿ ವಕೀಲರ ರಾಜ್ಯಮಟ್ಟದ ಮೊದಲ ಪರಿಷತ್ ನಡೆಯಿತು. ನಾಡಿನ ಮೂಲೆ ಮೂಲೆಯಿಂದ ಆಗಮಿಸಿದ್ದ ಸಮುದಾಯದ ವಕೀಲರು ಮೀಸಲಾತಿಗೆ ಒಗ್ಗಟ್ಟಾಗಿ ಕೂಗು ಹಾಕಿದರು. ವಕೀಲರ ಪರಿಷತ್ ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿದಿದ್ದು, ಚರ್ಚೆಗೆ ಸಿ.ಎಂ ಸಿದ್ದರಾಮಯ್ಯ ಆಹ್ವಾನಿಸಿದ್ದಾರೆ.
ಬೆಳಗಾವಿ ನಗರದ ಗಾಂಧಿ ಭವನದಲ್ಲಿ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ವಕೀಲರ ಪರಿಷತ್ನಲ್ಲಿ ಮುಂದಿನ ಹೋರಾಟದ ಕುರಿತು ಸುದೀರ್ಘವಾಗಿ ಸಮಾಜದ ವಕೀಲರು ಮಾತನಾಡಿದರು. ಮುಖ್ಯಮಂತ್ರಿಗಳು ತಕ್ಷಣವೇ ಮಾತುಕತೆಗೆ ತಮ್ಮನ್ನು ಆಹ್ವಾನಿಸಬೇಕು. 2ಎ ಮೀಸಲಾತಿ ಘೋಷಿಸಬೇಕು. ಸಿಎಂ ಭೇಟಿಗೆ ತಕ್ಷಣ ದಿನಾಂಕ ನಿಗದಿ ಪಡಿಸಬೇಕು ಎಂದು ಈ ವೇಳೆ ಶಾಸಕ ವಿನಯ್ ಕುಲಕರ್ಣಿ ಅವರು ಮುಖ್ಯಮಂತ್ರಿಗಳ ಜೊತೆಗೆ ಸ್ವಾಮೀಜಿ ಅವರನ್ನು ಮಾತನಾಡಿಸಿದರು. ಅಕ್ಟೋಬರ್ 15ರಂದು ಮಾತುಕತೆಗೆ ಬರುವಂತೆ ಸಿಎಂ ಆಹ್ವಾನಿಸಿದ ಬಳಿಕವೇ ವಕೀಲರು ಸುಮ್ಮನಾದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡಿ, "ಬೆಳಗಾವಿ ಅಧಿವೇಶನ ನಡೆಯದಂತೆ ಮಾಡೋಣ. ಮುಖ್ಯಮಂತ್ರಿಗಳು ಸುವರ್ಣ ವಿಧಾನಸೌಧ ಒಳಗೆ ಹೋಗದಂತೆ ತಡೆಯುವ ಶಕ್ತಿ ನಮ್ಮ ಸಮುದಾಯಕ್ಕಿದೆ. ನಾನು ಹಿಂದಿನ ಸಿಎಂ ಬೊಮ್ಮಾಯಿ ಜೊತೆಗೆ ನೇರವಾಗಿ ಜಗಳ ಆಡಿದ್ದೇನೆ. ಹಾಗಾಗಿ, ಸಿಎಂ ಸಿದ್ದರಾಮಯ್ಯ ಅವರಿಗೆ ಮೀಸಲಾತಿ ಕೊಡುತ್ತೀರೋ? ಇಲ್ಲವೋ? ನೇರವಾಗಿ ಹೇಳಬೇಕು. ಕುರುಬ ಸಮಾಜಕ್ಕೆ ಎಸ್ಟಿ ಕೊಡಲು ಸಿಎಂಗೆ ಆಸಕ್ತಿ ಇಲ್ಲ. ಇನ್ನು ನಮ್ಮ ಸಮಾಜದ ಬಗ್ಗೆ ಸಿಎಂಗೆ ಅಲರ್ಜಿ ಇದೆ. ನಮಗೆ ಮೀಸಲಾತಿ ಕೊಡುವುದು ಅನುಮಾನ. ಸಿಎಂ ಮುಂದೆ ಏನು ಮಾತನಾಡಬೇಕು ಎಂದು ಮೊದಲೇ ತೀರ್ಮಾನಿಸಬೇಕು. ಅಧಿವೇಶನ ಒಳಗಾಗಿ ಯಾವುದೇ ನಿರ್ಣಯ ಆಗದೇ ಇದ್ದರೆ ಮುಂದಿನ ಹೋರಾಟ ಮಾಡೋಣ. ಸುವರ್ಣ ಸೌಧ ಮುತ್ತಿಗೆ ಹಾಕೋಕೆ ಸಿದ್ಧರಾಗೋಣ. ಮಹಾರಾಷ್ಟ್ರದಲ್ಲಿ ನಡೆದ ಮಾದರಿಯಲ್ಲಿ ಇಲ್ಲೂ ಹೋರಾಟ ಮಾಡಬೇಕಿದೆ" ಎಂದು ಗುಡುಗಿದರು.
"ಹತ್ತು ಜನರ ಹಿರಿಯರ ತಂಡ ರಚಿಸಿ, ಸಿಎಂ ಭೇಟಿಗೆ ಹೋಗಬೇಕು. ಎಲ್ಲಿಯಾದರೂ ಸ್ವಲ್ಪ ವ್ಯತ್ಯಾಸ ಆದರೆ ಸಿಎಂ ಸಿದ್ದರಾಮಯ್ಯ ಉಲ್ಟಾ ಹೊಡೆಯುತ್ತಾರೆ. ಅದು ಗಿರಾಕಿ ಕೂಡ ವಕೀಲರೇ. ಪಾಯಿಂಟ್ ಟು ಪಾಯಿಂಟ್ ಮಾತನಾಡುವವರೇ ಸಿಎಂ ಕಡೆ ಹೋಗಬೇಕು. ವಿನಯ್ ಕುಲಕರ್ಣಿ ಮೇಲೆ ವಿಶ್ವಾಸ ಇದೆ. ಉಳಿದವರದ್ದು ನಾಟಕ ಕಂಪನಿ. ನನ್ನ ಸಕ್ಕರೆ ಕಾರ್ಖಾನೆ ಬಂದ್ ಮಾಡಿಸಿದರು. ಆದರೂ ಹೈಕೋರ್ಟ್‌ನಲ್ಲಿ ಗೆದ್ದೆ. ನಾನು ಸುಪ್ರೀಂ ಕೋರ್ಟ್‌ಗೆ ಹೋದೆ, ನನ್ನ ವಿರುದ್ಧ ಕಪಿಲ್ ಸಿಬಲ್‌ರನ್ನು ಕಳುಹಿಸಿದರು. ನನ್ನ ಪರವಾಗಿ ಮುಕುಲ್ ರೋಹಟಗಿ ನೇಮಿಸಿಕೊಂಡಿದ್ದೇನೆ. ನಮ್ಮ ಸಮಾಜದ ಒಬ್ಬ ನಾಯಕನೇ ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾನೆ" ಎಂದು ಯತ್ನಾಳ್ ಕಿಡಿಕಾರಿದರು.
ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, "ನಮ್ಮ ನಮ್ಮಲ್ಲಿ ಒಡಕಿದೆ ಎಂದು ಅಣಕಿಸುತ್ತಾರೆ. ನಾವು ಒಗ್ಗಟ್ಟು ತೋರಿಸಬೇಕು. ಸಾಕ್ಷಾತ್ ಮುಖ್ಯಮಂತ್ರಿ ಬಂದರೂ ಕೈಹಿಡಿದು ಹೇಳಬೇಕು. ನನ್ನ ಜತೆ ವೇದಿಕೆಯಲ್ಲಿ ಕುಳಿತು ಬಹಳ ಜನ ಬೆಳೆದರು. ಆದರೆ, ಸಮಾಜ ಬೆಳೆಸಲಿಲ್ಲ. ಮಠದಲ್ಲಿ ಇರು ಎಂದರೆ ನಾನು ಬರುತ್ತೇನೆ. ಮೀಸಲಾತಿ ಆದೇಶ ಪತ್ರ ಸಿಗುವವರೆಗೆ ನಾನು ಬಿಡಲ್ಲ. ಸಮಾಜಕ್ಕೆ ವಂಚನೆ ಮಾಡಲ್ಲ. ಶಾಸಕ, ಸಚಿವರು ಆದ ಬಳಿಕ ಮೈಮರೆಯಬಹುದು. ಆದರೆ, ನಾನು ಮೈ ಮರೆಯಲ್ಲ. ನನ್ನ ಕಣ್ಣಿಗೆ ಯಾವ ಮುಖ್ಯಮಂತ್ರಿ, ಮಂತ್ರಿ ಕಾಣಿಸುವುದಿಲ್ಲ. ನನಗೆ 2ಎ ಮೀಸಲಾತಿ ಮಾತ್ರ ಕಾಣಿಸುತ್ತದೆ. ಮೀಸಲಾತಿ ಸಿಗೋವರೆಗೂ ಹೋರಾಟ ಕೈಬಿಡಲ್ಲ" ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ಪ್ರತಿನಿಧಿಯಾಗಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಪರಿಷತ್ಗೆ ಆಗಮಿಸಿ ಮುಖ್ಯಮಂತ್ರಿಗಳು ಅ.15ರಂದು ತಮ್ಮ ಭೇಟಿಗೆ ದಿನಾಂಕ ನೀಡಿದ್ದಾರೆ ಎಂದು ಸ್ವಾಮೀಜಿ ಅವರಿಗೆ ತಿಳಿಸಿದರು. ಇದೇ ವೇಳೆ ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್ತು, ನ್ಯಾಯಪೀಠವನ್ನು ಉದ್ಘಾಟಿಸಲಾಯಿತು. ಶಾಸಕ ಸಿ.ಸಿ. ಪಾಟೀಲ್, ಮಾಜಿ ಸಚಿವ ಎ.ಬಿ. ಪಾಟೀಲ್, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ ಸೇರಿ ಪಂಚಮಸಾಲಿ ಸಮಾಜದ 500ಕ್ಕೂ ಅಧಿಕ ವಕೀಲರು ಪರಿಷತ್ನಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: 2A ಮೀಸಲಾತಿಗಾಗಿ ನ್ಯಾಯಾಂಗದ ಮೂಲಕ ಹೋರಾಟ: ಮೃತ್ಯುಂಜಯ ಸ್ವಾಮೀಜಿ - 2A reservation