ಚಾಮರಾಜನಗರ : ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ಕೊಟ್ಟಿದ್ದ ಫೆ.13 ರ ದೆಹಲಿ ಚಲೋ ಪ್ರತಿಭಟನೆಗೆ ತೆರಳುತ್ತಿದ್ದ ರಾಜ್ಯದ ರೈತರನ್ನು ಮಧ್ಯಪ್ರದೇಶದ ಪೊಲೀಸರು ಸೋಮವಾರ ಮುಂಜಾನೆ ವಶಕ್ಕೆ ಪಡೆದಿದ್ದಾರೆ.
ಚಾಮರಾಜನಗರ ಹಾಗೂ ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ದೆಹಲಿಗೆ 130 ಕ್ಕೂ ಅಧಿಕ ರೈತ ಹೋರಾಟಗಾರರು ಪ್ರಯಾಣ ಬೆಳೆಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಮಧ್ಯಪ್ರದೇಶದ ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಚಾಮರಾಜನಗರದಿಂದ ಕಬ್ಬು ಬೆಳೆಗಾರರ ಸಂಘದ ಮೂಕಹಳ್ಳಿ ಮಹದೇವಸ್ವಾಮಿ, ಮೂಡ್ಲುಪುರ ಶಿವಮೂರ್ತಿ, ರೇವಣ್ಣ, ಉಡಿಗಾಲ ಲೋಕೇಶ್, ಬಸವಣ್ಣ, ಶೀಲಾ, ಪುಷ್ಪಾ, ಕಲಾವತಿ ಸೇರಿದಂತೆ 30 ಕ್ಕೂ ಅಧಿಕ ಮಂದಿ ತೆರಳಿದ್ದರು. ಮೈಸೂರಿನಿಂದಲೂ 70 ಕ್ಕೂ ಹೆಚ್ಚು ಮಂದಿ ದೆಹಲಿಗೆ ಪ್ರಯಾಣ ಬೆಳೆಸಿದ್ದರು.
ರೈತರ ಸಾಲಮನ್ನಾ ಮಾಡಬೇಕು. ಸ್ವಾಮಿನಾಥನ್ ವರದಿ ಜಾರಿಯಾಗಬೇಕು. ಎಂಎಸ್ಪಿ ನಿಗದಿಯಾಗಬೇಕು. 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದೇಶದ ಬಹುಪಾಲು ರೈತ ಸಂಘಟನೆಗಳು ರಾಷ್ಟ್ರೀಯ ಕಿಸಾನ್ ಒಕ್ಕೂಟ ರಚನೆ ಮಾಡಿಕೊಂಡು ಫೆ.13 ರಂದು ಹೋರಾಟಕ್ಕೆ ಕರೆ ಕೊಟ್ಟಿವೆ.
ಇನ್ನು, ಚಾಮರಾಜನಗರ ಕಬ್ಬು ಬೆಳೆಗಾರ ಸಂಘದ ಕಾರ್ಯದರ್ಶಿ ಎಚ್. ಮೂಕಹಳ್ಳಿ ಮಹದೇವಸ್ವಾಮಿ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಮುಂಜಾನೆ ಮಲಗಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ವಶಕ್ಕೆ ಪಡೆಯುವ ವೇಳೆ ಕುರುಬೂರು ಶಾಂತಕುಮಾರ್ ಅವರ ಪತ್ನಿ ಪದ್ಮಾ ಶಾಂತಕುಮಾರ್ ಅವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ನಮ್ಮ ರೈಲಿನಲ್ಲಿದ್ದ 150 ಕ್ಕೂ ಅಧಿಕ ಮಂದಿಯನ್ನು ಛತ್ರವೊಂದರಲ್ಲಿ ಇಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಫೆ.12ಕ್ಕೆ ಬೆಂಗಳೂರು ಚಲೋ ರ್‍ಯಾಲಿ: ವಾಸುದೇವ ಮೇಟಿ
ದೆಹಲಿಯಲ್ಲಿ ಬಿಗಿ ಬಂದೋಬಸ್ತ್: ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದೆಹಲಿಯ ಈಶಾನ್ಯ ಜಿಲ್ಲೆಯಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್ಪಿಸಿ) ಸೆಕ್ಷನ್ 144 ರ ಅಡಿ ನಿಷೇಧಾಜ್ಞೆ ಹೊರಡಿಸಲಾಗಿದೆ. ರೈತಸಂಘಟನೆಗಳು ಫೆಬ್ರವರಿ 13 ರಂದು ದೆಹಲಿಗೆ ಮೆರವಣಿಗೆ ಮೂಲಕ ಪ್ರವೇಶಿಸುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಅಲ್ಲಿನ ಪೊಲೀಸರು ಭಾನುವಾರವೇ ತಿಳಿಸಿದ್ದಾರೆ. ಇಂದು ಕೂಡಾ ಭಾರಿ ಭದ್ರತೆ ಒದಗಿಸಲಾಗಿದೆ.
ಸುಮಾರು 200 ರೈತ ಸಂಘಗಳು ಮತ್ತು ಹೆಚ್ಚಿನ ಸಂಖ್ಯೆಯ ರೈತರು ನಡೆಸುತ್ತಿರುವ 'ದೆಹಲಿ ಚಲೋ ರ‍್ಯಾಲಿ' ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್‌ನಿಂದ ರಾಷ್ಟ್ರ ರಾಜಧಾನಿಯನ್ನು ತಲುಪುವ ನಿರೀಕ್ಷೆಯಿದೆ. 2021 ರ ಘಟನಾವಳಿಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ನಿಗಾ ವಹಿಸಲಾಗಿದೆ. ಪ್ರತಿಭಟನೆ ವೇಳೆ ರೈತರು ಟ್ರ್ಯಾಕ್ಟರ್, ಟ್ರಾಲಿಗಳು, ಶಸ್ತ್ರಾಸ್ತ್ರಗಳೊಂದಿಗೆ ದೆಹಲಿಗೆ ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ ದೆಹಲಿ ಮತ್ತು ಉತ್ತರ ಪ್ರದೇಶದ ನಡುವಿನ ಎಲ್ಲ ಗಡಿಗಳಲ್ಲಿ ಜನರು ಒಟ್ಟುಗೂಡಿಸುವುದನ್ನು ನಿಷೇಧಿಸಲಾಗಿದೆ.