ಬೆಂಗಳೂರು: ಎಸ್‌ಎಸ್ಎಲ್‌ಸಿ ಪರೀಕ್ಷೆ 1 ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ 2ಕ್ಕೆ ಅರ್ಜಿ ಸಲ್ಲಿಸಲು ಹಾಗೂ ಪರೀಕ್ಷೆಯ ಪರಿಷ್ಕೃತ ದಿನಾಂಕಗಳನ್ನು ಮುಂದೂಡಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 ರಲ್ಲಿ ಫೇಲ್ ಆಗಿ ಸಿ ಮತ್ತು ಸಿ+ ಪಡೆದ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಸುಧಾರಣೆಗಾಗಿ ಪರೀಕ್ಷೆ-2 ರಲ್ಲಿ ಉತ್ತೀರ್ಣರಾಗುವಂತೆ ಸಿದ್ಧಗೊಳಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮೇ 15 ರಿಂದ ಜೂನ್ 05 ರವರೆಗೆ ಆಯಾ ವಿಷಯ ಶಿಕ್ಷಕರಿಂದ ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು ನಡೆಸಲು ಉದ್ದೇಶಿಸಿತ್ತು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ 2 ಕ್ಕೆ ಅರ್ಜಿ ಸಲ್ಲಿಸಲು ಪರಿಷ್ಕೃತ ವೇಳಾಪಟ್ಟಿ:
- ಮಂಡಳಿ ಜಾಲತಾಣದ ಶಾಲಾ ಲಾಗಿನ್ ಮೂಲಕ ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್‌ಲೋಡ್ ಮಾಡಲು ನಿಗದಿಪಡಿಸಿರುವ ಅಂತಿಮ ದಿನಾಂಕ: 19-05-2024 ರ ರಾತ್ರಿ 12 ಗಂಟೆವರೆಗೆ.
- ಪರೀಕ್ಷಾ ಶುಲ್ಕದ ಚಲನ್ ಮುದ್ರಿಸಿಕೊಳ್ಳಲು ನಿಗದಿಪಡಿಸಿದ ದಿನಾಂಕ: 21-05-2024.
- ಚಲನ್ ಮುದ್ರಿಸಿಕೊಂಡು ಬ್ಯಾಂಕ್‌ಗೆ ಜಮೆ ಮಾಡಲು ನಿಗದಿಪಡಿಸಿದ ಕೊನೆ ದಿನಾಂಕ: 23-05-2024.ವರ್ಗಾವಣೆ ಪ್ರಮಾಣ ಪತ್ರ ಪಡೆದಿದ್ದರೂ ಪರೀಕ್ಷೆ 2ಕ್ಕೆ ಅರ್ಜಿ ಹಾಕಬಹುದು ಎಂದು ಮಂಡಳಿ ತಿಳಿಸಿದೆ.
2024ರ ಎಸ್ಎಸ್ಎಲ್ಸಿ ಪರೀಕ್ಷೆ -1 ರಲ್ಲಿ ತೇರ್ಗಡೆ ಹೊಂದಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮೂಲ ಶಾಲೆಯಿಂದ ವರ್ಗಾವಣೆ ಪ್ರಮಾಣ ಪತ್ರ ಪಡೆದಿದ್ದರೂ ಸಹ, ಅಂತಹ ವಿದ್ಯಾರ್ಥಿಗಳು ಪರೀಕ್ಷೆ 2ಕ್ಕೆ ಹಾಜರಾಗಲು ಇಚ್ಛಿಸಿದಲ್ಲಿ ಅಂತಹ ವಿದ್ಯಾರ್ಥಿಗಳ ಮನವಿಯನ್ನು ಪರಿಗಣಿಸಿ 2024ರ ಎಸ್ಎಸ್ಎಲ್ಸಿ ಪರೀಕ್ಷೆ 2 ಕ್ಕೆ ನೋಂದಾಯಿಸಲು ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚನೆಗಳನ್ನು ಇಲಾಖೆ ನೀಡಿದೆ.
2024ರ ಎಸ್ ಎಸ್ ಎಲ್ ಸಿ ಪರೀಕ್ಷೆ-02ವನ್ನು 14/06/2024 ರಿಂದ ಪ್ರಾರಂಭಿಸಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದ್ದು, ಸದರಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಅವರು ಪ್ರತ್ಯೇಕ ಪ್ರಕಟಣೆಯನ್ನು ಹೊರಡಿಸಲಿದ್ದಾರೆ ಎಂದು ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆ 1 ರ ಫಲಿತಾಂಶ ಈಗಾಗಲೇ ಪ್ರಕಟವಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೇರಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂಕಿತಾ ಬಸಪ್ಪ ಕೊಣ್ಣುರು ಎಂಬ ವಿದ್ಯಾರ್ಥಿನಿ 625ಕ್ಕೆ 625 ಅಂಕ ಪಡೆದ ರಾಜ್ಯಕ್ಕೆ ಮೊದಲ ಶ್ರೇಯಾಂಕ ಗಳಿಸಿದ್ದಾರೆ.
ಇದನ್ನೂ ಓದಿ: ಮುಂದಿನ ವರ್ಷದಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ನೀಡದಂತೆ ಸಿಎಂ ಸೂಚನೆ - CM Siddaramaih