ರಾಮನಗರ: ಇಲ್ಲಿ ಭಕ್ತಾದಿಗಳ ಯಾವುದೇ ಹರಕೆಯಿದ್ದರೂ ಈಡೇರುತ್ತವಂತೆ. ಪ್ರಾಕೃತಿಕವಾಗಿ ಸುಂದರ ನೈಸರ್ಗಿಕ ತಾಣವೆಂದೇ ಕರೆಸಿಕೊಳ್ಳುವ ಈ ಸ್ಥಳ ಶ್ರೀರಾಮ ವನವಾಸ ಕೈಗೊಂಡಾಗ ಭೇಟಿ ನೀಡಿದ್ದ ಪುಣ್ಯ ಸ್ಥಳ. ಬೆಂಗಳೂರಿನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ರಾಮನಗರದಲ್ಲಿ ಅಂಥದ್ದೊಂದು ಪುರಾಣ ಪ್ರಸಿದ್ಧ ತಾಣವಿದೆ.
ಈ ಕ್ಷೇತ್ರ ರಾಮನಗರದ ಶ್ರೀರಾಮದೇವರ ಬೆಟ್ಟದ ಮೇಲಿದೆ. ರಾಮ ವನವಾಸದ ಸಂದರ್ಭದಲ್ಲಿ ಸೀತೆ ಮತ್ತು ಸಹೋದರ ಲಕ್ಷ್ಮಣನೊಂದಿಗೆ ಇಲ್ಲಿ 5 ರಿಂದ 6 ವರ್ಷಗಳ ಕಾಲ ತಂಗಿದ್ದನು ಎಂಬುದು ಪುರಾಣಗಳಿಂದ ದೊರೆಯುವ ಮಾಹಿತಿ. ತನ್ನ ತಂದೆಯ ನಿತ್ಯಪೂಜೆಗೆ ಶ್ರೀರಾಮ ಇಲ್ಲಿ ತೀರ್ಥ ಮತ್ತು ಶ್ರೀರಾಮೇಶ್ವರ ದೇವಾಲಯಗಳನ್ನು ನಿರ್ಮಿಸಿದ್ದ ಎಂದೇ ಹೇಳಲಾಗುತ್ತದೆ.
ಶ್ರೀರಾಮ ತೀರ್ಥಕ್ಕೆ ಇನ್ನೊಂದು ಹೆಸರು ಶ್ರೀಧನುಷ್ ಕೋಟಿ ತೀರ್ಥ. ಅಂದರೆ ಈ ತೀರ್ಥದಲ್ಲಿ ಒಂದು ಕೋಟಿ ಪವಿತ್ರ ನದಿಯ ಜಲ ಮಿಶ್ರಿತವಾಗಿದೆ ಎಂದರ್ಥ. ಗಂಗಾ, ಯಮುನಾ, ಸರಸ್ವತಿ, ಕುಮಾರಧಾರಾ, ನೇತ್ರಾವತಿ ನದಿಗಳು ಇಲ್ಲಿ ಬಂದು ಮುಟ್ಟಿವೆ ಎಂಬುದು ಭಕ್ತರ ನಂಬಿಕೆ.
ಶ್ರೀರಾಮ ತೀರ್ಥ ಮತ್ತು ಶ್ರೀರಾಮೇಶ್ವರ ದೇವಸ್ಥಾನಗಳು ಇಂದಿಗೂ ಕೂಡ ಸುಸ್ಥಿತಿಯಲ್ಲಿವೆ. ಶ್ರೀರಾಮ ಈ ಕ್ಷೇತ್ರದಲ್ಲಿ ವಾಸವಿದ್ದಾಗ ಕಾಗೆಯ ರೂಪದಲ್ಲಿದ್ದ ಕಾಕಾಸುರ ಎಂಬ ಅಸುರ, ಸೀತಾಮಾತೆಯ ಶರೀರದ ಮಾಂಸ ತಿನ್ನಲು ದಾಳಿ ಮಾಡುತ್ತಾನೆ. ಶ್ರೀರಾಮ ದರ್ಬೆಯನ್ನು ಮಂತ್ರ ಶಕ್ತಿಯಿಂದ ಬಾಣವಾಗಿ ಮಾಡಿ ಕಾಕಾಸುರನ ಸಂಹಾರಕ್ಕೆ ಬಿಡುತ್ತಾರೆ. ಆದರೆ ಯಾವ ದೇವತೆಯೂ ಕೂಡ ಕಾಕಾಸುರನನ್ನು ರಕ್ಷಿಸುವುದಿಲ್ಲ. ಕೊನೆಗೆ ಈ ಕ್ಷೇತ್ರಕ್ಕೆ ಮರಳಿ ಶ್ರೀರಾಮನಿಗೆ ಶರಣಾಗತನಾಗುತ್ತಾನೆ. ಆಗ ಅವನ ಪ್ರಾಣ ಉಳಿಯುತ್ತದೆ. ಆದರೆ ಬಾಣದ ದಾಳಿಯಿಂದ ಕಾಕಾಸುರನ ಒಂದು ಕಣ್ಣಿಗೆ ಹಾನಿಯಾಗುತ್ತದೆ. ಈ ಕ್ಷೇತ್ರದಲ್ಲಿ ಜಟಾಯು ಕೂಡ ವಾಸವಿದ್ದ ಎಂದು ತಿಳಿದು ಬರುತ್ತದೆ. ಹೀಗಾಗಿಯೇ ಇಲ್ಲಿ ಜಟಾಯು ಜಾತಿಯ ಪಕ್ಷಿ ಸಂಕುಲವಾದ ರಣಹದ್ದು ಈಗಲೂ ಕಂಡುಬರುತ್ತದೆ.
ಶ್ರೀರಾಮನಿಗೆ ಪಟ್ಟಾಭಿಷೇಕವಾದ ನಂತರ ವಾನರ ಅಧಿಪತಿ ಸುಗ್ರೀವ ತನ್ನ ಕಿಷ್ಕಿಂದೆ ಕ್ಷೇತ್ರದಲ್ಲಿ ಸ್ಥಾಪಿಸಲು ಶ್ರೀರಾಮನ ಒಂದು ವಿಗ್ರಹವನ್ನು ತೆಗೆದುಕೊಂಡು ಹೊರಟು ನಿಂತಾಗ, ಶ್ರೀರಾಮ ಕ್ಷೇತ್ರದಲ್ಲಿ ತಪಸ್ಸು ಮಾಡುತ್ತಿದ್ದ ಋಷಿಮುನಿಗಳನ್ನು ಕೆಲವು ರಾಕ್ಷಸರು ಕಾಡುತ್ತಿದ್ದರಂತೆ. ಅವರನ್ನು ಸಂಹರಿಸುವಂತೆ ಆಜ್ಞೆಯಾಗುತ್ತದೆ. ಆಗ ಸುಗ್ರೀವನು ಶ್ರೀರಾಮನ ಕ್ಷೇತ್ರಕ್ಕೆ ಬಂದು ಆಜ್ಞೆ ಪಾಲಿಸುತ್ತಾನೆ. ಆದರೆ ಕೆಳಗಿದ್ದಂತಹ ವಿಗ್ರಹವನ್ನು ಎಷ್ಟು ಬಾರಿ ಪ್ರಯತ್ನಿಸಿದರೂ ಮೇಲೆತ್ತಲು ಆಗುವುದಿಲ್ಲ. ಆಗ ಅಶರೀರವಾಣಿಯೊಂದು ಮೊಳಗಿ ವಿಗ್ರಹವನ್ನು ಶ್ರೀರಾಮನೇ ಸ್ವತಃ ಪ್ರತಿಷ್ಠಾಪಿಸುತ್ತಾನೆ. ಹೀಗಾಗಿ ರಾಮಾಯಣ ಸಮಯದಿಂದ ಇಂದಿಗೂ ಆ ವಿಗ್ರಹ ಶ್ರೀರಾಮದೇವರ ಬೆಟ್ಟದ ಮೇಲೆ ಕಂಗೊಳಿಸುತ್ತಿದೆ ಎಂಬುದು ಪ್ರತೀತಿ.
ಶ್ರೀರಾಮನ ವಿಗ್ರಹದೊಂದಿಗೆ ಸೀತಾಮಾತೆ, ಲಕ್ಷ್ಮಣ ಹಾಗೂ ಹನುಮಾನ್ ದೇವರಿದ್ದಾರೆ. ದೇವಾಲಯದ ಮುಂದೆ ಗರುಡವಿದೆ. ಪಕ್ಕದಲ್ಲಿ ಚಾತೂರು ಮೂರ್ತಿ ಸ್ಥಾನವಾದ ಅಶ್ವಥ ವೃಕ್ಷವಿದೆ. ಪ್ರತ್ಯೇಕ ದೇವಾಲಯದಲ್ಲಿ ಶ್ರೀರಾಮ ಪೂಜಿಸಿದ ಲಿಂಗರೂಪಿ ಶಿವಶಂಕರನ ಮೂರ್ತಿ ಯದ್ದು, ರಾಮೇಶ್ವರ ಎಂದೇ ಪ್ರಸಿದ್ಧಿ. ಶಿವನ ಜೊತೆಗೆ ಪಾರ್ವತಿ, ಗಣೇಶ, ನಂದಿ ವಿಗ್ರಹಗಳಿವೆ. ಸುಗ್ರೀವ ಇಲ್ಲಿ ಮೂರ್ತಿ ರೂಪದಲ್ಲಿ ನೆಲೆಸಿದ್ದಾನೆ.
ಶ್ರೀರಾಮ ಇಲ್ಲಿ ತಪಸ್ಸು ಮಾಡಿದ ನಂತರದ ದಿನಗಳಲ್ಲಿ ಸಪ್ತಋಷಿಗಳು ಈ ಕ್ಷೇತ್ರದಲ್ಲೇ ನೆಲೆಸಲು ಬಯಸುತ್ತಾರೆ. ದೊಡ್ಡ ದೊಡ್ಡ ಕಲ್ಲಿನ ಬಂಡೆಯ ರೂಪ ತಾಳಿದ ಸಪ್ತಋಷಿಗಳನ್ನು ಈಗಲೂ ದರ್ಶನ ಮಾಡಬಹುದು. ಕ್ಷೇತ್ರಕ್ಕೆ ಶ್ರಾವಣ ಮಾಸದ ದಿನದಂದು ಮಾತ್ರ ರಾಜ್ಯದ ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಶಾರದಾಮಠದಲ್ಲಿ ಗಮನ ಸೆಳೆದ ಅಯೋಧ್ಯೆ ರಾಮಮಂದಿರ ಪ್ರತಿಕೃತಿ