ಚಿಕ್ಕಮಗಳೂರು: ಜಿಲ್ಲೆಯ ಆದಿಶಕ್ತಿ ಹೊರನಾಡು ಅನ್ನಪೂರ್ಣೇಶ್ವರಿ ದೇವಿ ಮಹಾರಥವನ್ನು ಏರಿ ತನ್ನ ಭಕ್ತರಿಗೆ ದರ್ಶನ ನೀಡಿದ್ದಾರೆ. ಸಾವಿರಾರು ಭಕ್ತರು ತಾಯಿ ರಥವನ್ನು ಎಳೆಯುವ ಮೂಲಕ ಗುರುವಾರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಕಾಫಿನಾಡಲ್ಲಿ ಹೊರನಾಡು ಅನ್ನ ಪೂರ್ಣೇಶ್ವರಿ ವಾರ್ಷಿಕ ಜಾತ್ರಾ ಮಹೋತ್ಸವ ಸಂಭ್ರಮ ಕಳೆಗಟ್ಟಿತ್ತು. ವರ್ಷ ಪೂರ್ತಿ ಗರ್ಭಗುಡಿಯಲ್ಲಿ ದರ್ಶನ ನೀಡುವ ತಾಯಿ ಅನ್ನಪೂಣೇಶ್ವರಿ ಜಾತ್ರಾ ಮಹೋತ್ಸವದಂದು ಭಕ್ತರಿರುವ ಜಾಗಕ್ಕೆ ಬಂದು ಅನುಗ್ರಹಿಸುತ್ತಾಳೆ ಎಂಬ ನಂಬಿಕೆ ಭಕ್ತರದ್ದು. ಗುರುವಾರ ರಥೋತ್ಸವಕ್ಕೂ ಮುನ್ನ ಬೆಳಗ್ಗೆಯಿಂದಲೇ ಗರ್ಭಗುಡಿಯಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆಸಲಾಯಿತು.
ಬಳಿಕ ಅಭಿಜಿತ್ ಲಗ್ನದಲ್ಲಿ ಉತ್ಸವ ಮೂರ್ತಿಯನ್ನು ದೇವಸ್ಥಾನದ ಒಳಭಾಗದಲ್ಲಿ ಮೂರು ಸುತ್ತು ಪ್ರದಕ್ಷಿಣೆಯೊಂದಿಗೆ ಪೂಜಾ ವಿಧಿ ವಿಧಾನಗಳು ನಡೆದವು. ದೇವಾಲಯದ ಒಳಭಾಗ ಪೂಜಾ ಕೈಂಕರ್ಯ ಮುಗಿಯುವಷ್ಟೊತ್ತಿಗೆ ಉತ್ಸವ ಮೂರ್ತಿಯನ್ನು ರಥದ ಸಮೀಪ ತರಲಾಯಿತು. ನಂತರ ರಥಕ್ಕೆ ಪ್ರದಕ್ಷಿಣೆ ಹಾಕಿ ರಥ ಏರುತ್ತಿದ್ದಂತೆಯೆ ದೇವರ ಜೈ ಘೋಷಣೆಗಳು ಮೊಳಗಿದವು.
ಆಗ ಭಕ್ತರು ಕಾಫಿ, ಏಲಕ್ಕಿ, ಮೆಣಸು, ಅಡಿಕೆಯನ್ನು ದೇವರಿಗೆ ಅರ್ಪಿಸಿದ್ದು ಜಾತ್ರೆಯಲ್ಲಿ ವಿಶೇಷವಾಗಿತ್ತು. ರಥಕ್ಕೆ ಮಲೆನಾಡಿನ ಬೆಳೆಗಳನ್ನು ಸಮರ್ಪಿಸಿದರೆ ಈ ಭಾರಿ ಉತ್ತಮ ಬೆಳೆಯಾಗುತ್ತದೆ ಎಂದು ಹೇಳಲಾಗುತ್ತದೆ. ತದನಂತರ ವಾದ್ಯ ಘೋಷಣೆ, ಡೋಲುಗಳ ನಾದ, ವೀರಗಾಸೆ ಕುಣಿತದೊಂದಿಗೆ ರಥೋತ್ಸವ ನಡೆಯಿತು. ರಥದ ಮುಂದೆ ಚಾಮರಗಳನ್ನು ಹಿಡಿದು ಸಾಗಿದ್ದು, ದೇವಾಲಯದ ಮುಂಭಾಗದಲ್ಲಿ ಬ್ರಹ್ಮರಥವನ್ನು ಭಕ್ತರು ಎಳೆದರು. ಊರಿನವರಲ್ಲದೇ ಅಕ್ಕಪಕ್ಕದ ಜಿಲ್ಲೆಗಳಿಂದ ಭಕ್ತರು ಆಗಮಿಸಿ ತಮ್ಮ ಹರಕೆಗಳನ್ನು ಈಡೇರಿಸಿಕೊಂಡರು.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಅಬ್ಬರಿಸಿದ ಮಳೆರಾಯ: ವಿಡಿಯೋ