ಬೆಂಗಳೂರು: "ಸರ್ಕಾರಿ ಪಿಯುಸಿ ವಿದ್ಯಾರ್ಥಿಗಳಿಗೆ ನೀಟ್ ಮತ್ತು ಸಿಇಟಿಗೆ ವಿಶೇಷ ತರಬೇತಿ ಕೊಡುವ ಕಾರ್ಯಕ್ರಮ ಆರಂಭಿಸಿದ್ದೇವೆ. ಈ ವರ್ಷದಿಂದಲೇ ತರಬೇತಿ ಕಾರ್ಯಕ್ರಮ ಪ್ರಾರಂಭಿಸಲಿದ್ದು, ಆನ್ಲೈನ್ನಲ್ಲೂ ತರಬೇತಿ ನಡೆಯಲಿದೆ. ಸಿಇಟಿ ಮತ್ತು ನೀಟ್ ಪರೀಕ್ಷೆಗೆ ತಯಾರು ಮಾಡಲು 12.50 ಕೋಟಿ ರೂ. ವೆಚ್ಚ ಮಾಡಲು ಸರ್ಕಾರ ಸಿದ್ದವಿದೆ. ಇದರಿಂದ 25 ಸಾವಿರ ಮಕ್ಕಳಿಗೆ ಅನುಕೂಲವಾಗುತ್ತದೆ" ಎಂದು ಪ್ರಾರ್ಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಪಿಯುಸಿ ಕಾಲೇಜುಗಳು ಇನ್ನು ಹೆಚ್ಚಾಗಿ ಬೇಕಿದೆ. ಆದರ್ಶ ಶಾಲೆಗಳನ್ನು ಪಿಯುಸಿ ಕಾಲೇಜುಗಳನ್ನಾಗಿ ಮಾರ್ಪಾಡು ಮಾಡಲಾಗಿದೆ. ವಿಶೇಷ ತರಬೇತಿ ನೀಡುವ ಮರು ಸಿಂಚನ ಕಾರ್ಯಕ್ರಮ ಜಾರಿ ಮಾಡಿದ್ದು, 8, 9, 10ನೇ ತರಗತಿ ವಿಜ್ಞಾನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, 93 ತಾಲೂಕಿನ 8 ಲಕ್ಷ ವಿದ್ಯಾರ್ಥಿಗಳಿಗೆ ಇದರ ಅನುಕೂಲ ಆಗಲಿದೆ. ರಾಗಿ ಮಾಲ್ಟ್ ಅನ್ನು ವಾರದಲ್ಲಿ ಮೂರು ದಿನ ಔಟ್ ಸೋರ್ಸ್ ಮೂಲಕ ಕೊಡಲಾಗುತ್ತಿದೆ. ನಮ್ಮ ದೇಶದಲ್ಲಿ ಸಾಕಷ್ಟು ಶ್ರೀಮಂತರಿದ್ದಾರೆ. ಅಜೀಮ್ ಪ್ರೇಮ್ ಜಿ ಫೌಂಡೇಶನ್ 1,400 ಕೊಟಿ ರೂ. ಕೊಟ್ಟು ವಾರದಲ್ಲಿ ನಾಲ್ಕು ದಿನ ಮೊಟ್ಟೆ ಕೊಡಲು ಸಾಧ್ಯವಾಗುತ್ತಿದೆ. ಒಟ್ಟಾರೆ ರಾಜ್ಯದಲ್ಲಿ 56 ಲಕ್ಷ ಮಕ್ಕಳು ಇದ್ದಾರೆ. ಅವರಿಗೆ ಪೌಷ್ಟಿಕತೆ ಅಹಾರ ಕೊಡಲು ಸಹಾಯವಾಗಿದೆ. ಅವರ ಹಣ ದುರುಪಯೋಗ ಆಗದಂತೆ ಈ ಯೋಜನೆಯನ್ನು ಎಸ್ಡಿಎಂಸಿನವರು ವ್ಯವಸ್ಥೆ ಮಾಡುತ್ತಾರೆ" ಎಂದರು.
ಇಲಾಖೆ ದೊಡ್ಡದು, ಸಮಸ್ಯೆಗಳು ಹೆಚ್ಚು: "ನಮ್ಮ ಇಲಾಖೆ ಬಹಳ ದೊಡ್ಡದು. ಅದೇ ರೀತಿ ಸಮಸ್ಯೆಗಳು ಹೆಚ್ಚು. ಹೊಸದಾಗಿ ಜವಾಬ್ದಾರಿ ತೆಗೆದುಕೊಂಡು ಅರ್ಥಮಾಡಿಕೊಂಡು ಹೋಗದೇ ಇದ್ದರೆ ತಪ್ಪಾಗುತ್ತದೆ. ಪ್ರತಿಪಕ್ಷದವರು ನನ್ನ ಬಗ್ಗೆ ಟೀಕೆ, ಟಿಪ್ಪಣಿ ಮಾಡುತ್ತಿದ್ದರು. ಅದಕ್ಕೆಲ್ಲಾ ಮಹತ್ವ ಕೊಡುವುದಿಲ್ಲ. ನಾನು ಇಲಾಖೆ ಜವಾಬ್ದಾರಿ ವಹಸಿಕೊಂಡ ಮೇಲೆ ಅಧಿಕಾರಿಗಳ ಜೊತೆ ಸಾಕಷ್ಟು ಸಭೆ ಮಾಡಿದ್ದೇನೆ. ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದನ್ನು ಅನುಷ್ಠಾನ ಮಾಡಿದ್ದೇವೆ" ಎಂದು ಹೇಳಿದರು.
"7ನೇ ವೇತನ ಆಯೋಗ ಈಗಾಗಲೇ ಜಾರಿಯಾಗಿದೆ. 46 ಸಾವಿರಕ್ಕೂ ಹೆಚ್ಚು ಶಾಲೆಗಳಿವೆ. ಚುನಾವಣೆ ಮುಗಿದು ಸಚಿವನಾದ ಮೇಲೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿದೆ. ಬಿಜೆಪಿಯಿಂದ ಮೂವರು ಮಂತ್ರಿಗಳಾಗಿದ್ದರೂ ಮೂರು ವರ್ಷದಲ್ಲಿ 5 ಸಾವಿರಕ್ಕಿಂತ ಕಡಿಮೆ ಶಿಕ್ಷಕರನ್ನು ನೇಮಕ ಮಾಡಿದ್ದಾರೆ. ನಮ್ಮ ಸರ್ಕಾರ ಬಂದಾಗ 15 ಸಾವಿರ ನೋಟಿಫಿಕೇಷನ್ ಆಗಿತ್ತು. 42 ಸಾವಿರ ಅತಿಥಿ ಶಿಕ್ಷಕರು ಹಾಗೂ 3 ಸಾವಿರ ಸ್ಟಾಂಡಿಗ್ ಶಿಕ್ಷಕರು ಇದ್ದಾರೆ. ಈಗಾಗಲೇ 11,500 ಪರ್ಮನೆಂಟ್ ಶಿಕ್ಷಕರು ಕೆಲಸ ಮಾಡ್ತಿದ್ದಾರೆ. ಶಿಕ್ಷಕರೇ ಇಲ್ಲವೆಂದರೆ ಮಕ್ಕಳಿಗೆ ಯಾರು ಪಾಠ ಮಾಡ್ತಾರೆ? ಅನುದಾನಿತ ಶಾಲೆಯಲ್ಲಿ ಇಲ್ಲಿಯವರೆಗೂ ಶಿಕ್ಷಕರನ್ನು ನೇಮಕ ಮಾಡಿಕೊಂಡಿಲ್ಲ. ನೇಮಕ ಮಾಡಿಕೊಳ್ಳಲು ನಮ್ಮ ಸರ್ಕಾರ ಮುಂದಾಗಿದೆ. 2013 ರಿಂದ ಇಲ್ಲಿಯವರೆಗೆ ಅನುದಾನಿತ ಶಾಲೆಯಲ್ಲಿ ನೇಮಕ ಮಾಡೋದಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ" ಎಂದು ತಿಳಿಸಿದರು.
"ಕೆಲವು ಕಡೆ ಕಟ್ಟಡ ಕೊರತೆ, ವಿದ್ಯುತ್ ಕೊರತೆ ಇದೆ. ಬೆಸ್ಟ್ ಟೀಚರ್ಸ್ ಇರೋದೇ ಸರ್ಕಾರಿ ಶಾಲೆಯಲ್ಲಿ. ಫೇಲ್ ಆದ ಮಕ್ಕಳಿಗೆ ಅನುಕೂಲ ಆಗಲೆಂದು ಮೂರು ಹಂತದ ಪರೀಕ್ಷೆ ಮಾಡಿದೆವು" ಎಂದು ಹೇಳಿದರು.
ಬಿಜೆಪಿ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, "ಮುಖ್ಯಮಂತ್ರಿಗಳು ಈಗಾಗಲೇ ಹಗರಣಗಳ ಕುರಿತು ಎಸ್ಐಟಿ ತನಿಖೆಗೆ ಆದೇಶ ಮಾಡಿದ್ದಾರೆ. ಇದನ್ನೇ ಇಟ್ಟುಕೊಂಡು ಪಾದಯಾತ್ರೆ ಮಾಡಿದರೆ ಅವರು ದಡ್ಡರು. ಸದನದಲ್ಲಿ ಚರ್ಚೆಗೆ ಅವಕಾಶ ನೀಡಿ, ಉತ್ತರ ಕೊಟ್ಟಿದ್ದಾರೆ. ಸರ್ಕಾರ ಸುಭದ್ರವಾಗಿರುತ್ತದೆ. ಐದು ವರ್ಷ ಅಧಿಕಾರದಲ್ಲಿರುತ್ತದೆ" ಎಂದರು.
ಸರ್ಕಾರಕ್ಕೆ ರಾಜ್ಯಪಾಲರ ಮೂಲಕ ಒತ್ತಡ ಹಾಕಲಾಗುತ್ತಿದೆಯಾ ಎಂಬ ಪ್ರಶ್ನೆಗೆ ಉತ್ತಿರಿಸಿ, "ಬಿಜೆಪಿಗೆ ಅದೊಂದು ಕೆಟ್ಟ ಚಾಳಿ ಇದೆ. ಅದನ್ನು ಅವರು ಮುಂದುವರೆಸಿಕೊಂಡು ಬಂದಿದ್ದಾರೆ. ಉಪ ಚುನಾವಣೆಗಳಲ್ಲಿ ಏನೇನಾಗಿದೆ ಎಲ್ಲರಿಗೂ ಗೊತ್ತಿದೆ. ಬಿಜೆಪಿಗೆ ಯಾವತ್ತೂ ಬಹುಮತ ಬಂದಿಲ್ಲ. ಹೀಗೆಯೇ ಅವರು ಅಧಿಕಾರಕ್ಕೆ ಬಂದಿದ್ದಾರೆ. ತಿಪ್ಪರಲಾಗ ಹಾಕಿದ್ರೂ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಆಗುವುದಿಲ್ಲ. ಮುಡಾ ಕೇಸ್, ವಾಲ್ಮೀಕಿ ಕೇಸ್ ಬಗ್ಗೆ ಚರ್ಚೆ ಆಗಿದೆ. ಸಿಎಂ ಈಗಾಗಲೇ ತನಿಖೆಗೆ ಆದೇಶ ಮಾಡಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ" ಎಂದರು.
ಇದನ್ನೂ ಓದಿ: ಭದ್ರಾ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸಲು ನಿರ್ಧಾರ - Bhadra Dam