ಬೆಂಗಳೂರು: ಹೊಸ ಬಸ್ ಖರೀದಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 100 ಕೋಟಿ ರೂ. ವಿಶೇಷ ಬಂಡವಾಳ ಒದಗಿಸಿದ್ದು, ಹೊಸ ಬಸ್ ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ವಿಧಾನಸಭೆಯಲ್ಲಿ ತಿಳಿಸಿದರು.
ಶಾಸಕ ದರ್ಶನ್ ಧ್ರುವನಾರಾಯಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕ ಸಾರಿಗೆ ಸಾಮಾನ್ಯ ಮಾದರಿಯ 250 ಹೊಸ ಬಸ್ಗಳನ್ನು ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಮೊದಲ ಕಂತಿನಲ್ಲಿ 6,235.44 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದರು.
25 ಹೊಸ ಸಾಮಾನ್ಯ ಕರ್ನಾಟಕ ಸಾರಿಗೆ, 300 ಹೊಸ ಸಾಮಾನ್ಯ ಬಸ್, 40 ಪಲ್ಲಕ್ಕಿ ನಾನ್ಎಸಿ ಸ್ಲೀಪರ್ ಬಸ್, 4 ಎಸಿ, 4 ನಾನ್ಎಸಿ ಹಾಗೂ ವಿದ್ಯುತ್ ಚಾಲಿತ 300 ಬಸ್ಗಳನ್ನು ಖರೀದಿಸಲಾಗುವುದು. ಒಟ್ಟಾರೆ 350 ಸಾಮಾನ್ಯ ಬಸ್ಸುಗಳನ್ನು ಖರೀದಿ ಮಾಡಲಾಗುವುದು. ಇನ್ನೊಂದು ವಾರದಲ್ಲಿ ನಂಜನಗೂಡು ಘಟಕಕ್ಕೆ ಹೊಸ ಬಸ್ ಒದಗಿಸುವ ಭರವಸೆ ನೀಡಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ 2 ಸಾವಿರ ಚಾಲಕ ಕಂ ನಿರ್ವಾಹಕ ಹಾಗೂ 300 ತಾಂತ್ರಿಕ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
ಯಾದಗಿರಿ ಜಿಲ್ಲೆಗೆ ಮುಜರಾಯಿ ಇಲಾಖೆಯಿಂದ ಕಳೆದ ಮೂರು ವರ್ಷಗಳಲ್ಲಿ 17 ಲಕ್ಷ ರೂ. ಮಂಜೂರು ಮಾಡಿದ್ದು, 11 ದೇವಾಲಯಗಳಿಗೆ 17.50 ಲಕ್ಷ ರೂ. ಬಿಡುಗಡೆ ಮಾಡಲು ಬಾಕಿ ಇದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ದೇವಾಲಯದ ಸಿಬ್ಬಂದಿ ನೇಮಕದ ಬಗ್ಗೆ ಶಾಸಕರು ಪ್ರಸ್ತಾವನೆ ಕಳುಹಿಸಿದರೆ ಅನುಮೋದನೆ ನೀಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: 49 ಹೊಸ ತಾಲೂಕುಗಳಿಗೆ ಎರಡ್ಮೂರು ವರ್ಷದಲ್ಲಿ ಆಡಳಿತ ಕಚೇರಿ ಕಟ್ಟಡ ನಿರ್ಮಾಣ: ಸಚಿವ ಕೃಷ್ಣಬೈರೇಗೌಡ