ದಾವಣಗೆರೆ: ಚನ್ನಗಿರಿ ಲಾಕಪ್ ಡೆತ್ ಆರೋಪ ಹಿನ್ನೆಲೆ, ಉದ್ರಿಕ್ತರಿಂದ ಪೊಲೀಸ್ ಠಾಣೆಗೆ ಹಾನಿಯಾಗಿದೆ. ಐದು ಪೊಲೀಸ್ ವಾಹನಗಳನ್ನು ಹಾನಿಗೊಳಿಸಲಾಗಿದೆ. 11 ಜನ ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ. ಠಾಣೆಯ ಕಿಟಕಿ ಗಾಜುಗಳನ್ನು ಒಡೆದು ಹಾಕಲಾಗಿದೆ. ಕಳೆದ ರಾತ್ರಿ ಉದ್ರಿಕ್ತಗೊಂಡಿದ್ದ ಪರಿಸ್ಥಿತಿ ಸದ್ಯ ಸುಧಾರಿಸಿದೆ.
ಪ್ರಕರಣ ಹಿನ್ನೆಲೆ: ಮಟ್ಕಾ ಆಡಿಸಿದ ಆರೋಪದ ಮೇರೆಗೆ ಚನ್ನಗಿರಿಯ ಟಿಪ್ಪು ನಗರದ ನಿವಾಸಿ ಆದಿಲ್ (30)ನನ್ನು ನಿನ್ನೆ (ಶುಕ್ರವಾರ) ಚನ್ನಗಿರಿ ಪೊಲೀಸರು ವಶಕ್ಕೆ ಪಡೆದಿದ್ದರು. ಠಾಣೆಯಲ್ಲಿ ಆರೋಪಿ ಕುಸಿದು ಬಿದ್ದ ಪರಿಣಾಮ, ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಆರೋಪಿ ಆದಿಲ್ ಮೃತಪಟ್ಟಿದ್ದಾನೆ. ಇದರಿಂದ ಆಕ್ರೋಶಗೊಂಡ ಅದಿಲ್ ಸಂಬಂಧಿಕರು, ಇದು ಲಾಕಪ್ ಡೆತ್. ಪೊಲೀಸರೇ ಹೊಡೆದು ಸಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಬಳಿಕ ರಾತ್ರಿ ಪೊಲೀಸ್ ಠಾಣೆಯ ಸುತ್ತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿತ್ತು. ಅದಿಲ್ನನ್ನು ಕಳೆದುಕೊಂಡ ದುಃಖದಲ್ಲಿ ಸಂಬಂಧಿಕರು ಠಾಣೆಗೆ ನುಗ್ಗಿ ಹಾನಿಗೊಳಿಸಿದ್ದಾರೆ.
ಎಸ್ಪಿ ಉಮಾ ಪ್ರಶಾಂತ್ ಹೇಳಿದ್ದಿಷ್ಟು: "ನಿನ್ನೆ ಪೊಲೀಸರು ಆದಿಲ್ ಎಂಬ ವ್ಯಕ್ತಿಯನ್ನು ಕರೆತಂದಿದ್ದರು. ಆದ್ರೆ ಅದಿಲ್ ಕುಸಿದು ಬಿದ್ದಿದ್ದು, ಅಸ್ವಸ್ಥನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆಸ್ಪತ್ರೆಯಲ್ಲಿ ಆತ ಸಾವನ್ನಪ್ಪಿರೋದು ಗೊತ್ತಾಯಿತು. ಪೊಲೀಸ್ ಠಾಣೆಯಲ್ಲಿ ಆರರಿಂದ ಏಳು ನಿಮಿಷ ಕೂಡಾ ಇರಲಿಲ್ಲ. ಆದರೆ ಅವರ ಸಂಬಂಧಿಕರು ಲಾಕಪ್ ಡೆತ್ ಎಂದು ಹೇಳುತ್ತಿದ್ದಾರೆ. ನಮ್ಮಲ್ಲಿ ಕೂಡಾ ಸಿಸಿ ಕ್ಯಾಮರಾ ಇದೆ. ಎಲ್ಲವನ್ನೂ ಪರಿಶೀಲನೆ ಮಾಡಲಾಗುತ್ತಿದೆ. ಪ್ರಾಮಾಣಿಕ ತನಿಖೆ ಮಾಡುತ್ತೇವೆ. ಮೃತರ ತಂದೆ ಖಲೀಮ್ ಉಲ್ಲಾ ಕೂಡಾ ದೂರು ಕೊಟ್ಟಿದ್ದಾರೆ. ಈ ಕುರಿತು ತನಿಖೆ ಆಗುತ್ತದೆ. ಈಗಾಗಲೇ ಮೃತದೇಹವನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಗಂಭೀರ ಪ್ರಕರಣ ಹಿನ್ನೆಲೆ ನ್ಯಾಯಾಧೀಶರ ಸಮ್ಮುಖದಲ್ಲಿ ಶವಪರೀಕ್ಷೆ ಮಾಡಲಾಗುವುದು. ಐದು ಪೊಲೀಸ್ ವಾಹನ ಹಾಗೂ 11 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ವಿಚಾರವಾಗಿ ಮೂರು ಪ್ರಕರಣ, ಮೃತನ ತಂದೆ ನೀಡಿದ ಒಂದು ಪ್ರಕರಣ ಸೇರಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ, ಶಾಂತಿಯುತವಾಗಿದೆ'' ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಚನ್ನಗಿರಿ ಪೊಲೀಸರ ವಶದಲ್ಲಿದ್ದ ವ್ಯಕ್ತಿ ಸಾವು: ಲಾಕಪ್ ಡೆತ್ ಆರೋಪ, ಠಾಣೆ ಎದುರು ಬಿಗುವಿನ ವಾತಾವರಣ - Accused Death
ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗಿತ್ತು. ಅದರಂತೆ ಹಲವರು ಕನ್ವೀನ್ಸ್ ಆಗಿದ್ದರು. ಪರಿಸ್ಥಿತಿ ಅರಿತು ಒಂದಷ್ಟು ಜನರು ಹೋಗುವ ಹೊತ್ತಿನಲ್ಲಿ, ಮತ್ತೊಂದಿಷ್ಟು ಜನರು ಗುಂಪು ಗಲಾಟೆ ತೆಗೆದಿದೆ. ಉದ್ರಿಕ್ತಗೊಳ್ಳಲು ಕಾರಣ ಯಾರೆಂಬುದನ್ನು ತಿಳಿಯಲು ಸಹ ವಿಚಾರಣೆ ಮಾಡುತ್ತಿದ್ದೇವೆ. ಪರಿಸ್ಥಿತಿ ಶಾಂತಿಯುತವಾಗಿದ್ದು, ಪೊಲೀಸರು ರೌಂಡ್ಸ್ನಲ್ಲಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇವೆ. ಎಲ್ಲವನ್ನೂ ಕೂಲಂಕುಶವಾಗಿ ತನಿಖೆ ನಡೆಸುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಪತ್ನಿ ಮೇಲೆ ಕ್ರೌರ್ಯ ಎಸಗಿದ ಆರೋಪ: ವೈದ್ಯ ಪತಿಗೆ ನಿರೀಕ್ಷಣಾ ಜಾಮೀನು - High Court