ಧಾರವಾಡ: ಹಿಂಗಾರಿ ಬಿತ್ತನೆಗೆ ಸಂಗ್ರಹಿಸಿಟ್ಟಿದ್ದ ರೈತರ ಕೋಟ್ಯಂತರ ರೂ. ಬೆಲೆ ಬಾಳುವ ಬಿತ್ತನೆ ಕಾಳುಗಳು ನಾಪತ್ತೆಯಾದ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಎಪಿಎಂಸಿಯಲ್ಲಿ ನಡೆದಿದೆ. ಪ್ರಭಾರಿಯಾಗಿ ಬಂದಿದ್ದ ಅಧಿಕಾರಿಯೊಬ್ಬರಿಂದ ಈ ಬಹುದೊಡ್ಡ ಅಕ್ರಮ ನಡೆದಿದೆ ಎಂದು ರೈತರು ಆರೋಪ ಮಾಡುತ್ತಿದ್ದಾರೆ.
''ಎಪಿಎಂಸಿ ಗೋದಾಮಿನಲ್ಲಿಟ್ಟಿದ್ದ ಕಡಲೆ ಹಾಗೂ ಹೆಸರುಕಾಳು ನಾಪತ್ತೆಯಾಗಿವೆ. ಹಿಂಗಾರಿಗೆ ಕಡಲೆ ಬಿತ್ತುವ ನಿರೀಕ್ಷೆಯಲ್ಲಿದ್ದ ನಮಗೆ ಇದೀಗ ಸಮಸ್ಯೆ ಎದುರಾಗಿದೆ. ಕಳೆದ ವರ್ಷ ಬೆಳೆದಿದ್ದ ಕಡಲೆ ಹಾಗೂ ಹೆಸರುಕಾಳುಗಳ ಚೀಲಗಳನ್ನು ಅಣ್ಣಿಗೇರಿ ಎಪಿಎಂಸಿಯಲ್ಲಿ ನೂರಾರು ರೈತರು ಸಂಗ್ರಹಿಸಿಟ್ಟಿದ್ದರು. ಇದೀಗ ಕಡಲೆ ಮತ್ತು ಹೆಸರುಕಾಳು ಸೇರಿ ಒಟ್ಟು 4000 ಚೀಲಗಳು ನಾಪತ್ತೆಯಾಗಿವೆ'' ಎಂದು ರೈತರು ಆರೋಪ ಮಾಡಿದ್ದಾರೆ.
''ಸರ್ಕಾರಿ ಗೋದಾಮಿನಲ್ಲಿಟ್ಟಿದ್ದ ಚೀಲಗಳನ್ನು ಖೊಟ್ಟಿ ದಾಖಲೆ ಸೃಷ್ಟಿಸಿ ಅಧಿಕಾರಿ ಮಾರಾಟ ಮಾಡಿದ್ದಾರೆ. ಅವರಿಂದಲೇ ಈ ಅಕ್ರಮ ನಡೆದಿದೆ. ರೈತರಿಗೆ ಮಾಹಿತಿಯೇ ಇಲ್ಲದೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಲಾಗಿದೆ. ಅಣ್ಣಿಗೇರಿ ಸೇರಿ ಬೈಲಹೊಂಗಲ ಗೋದಾಮಿನಲ್ಲಿಯೂ ಸಹ ಅಕ್ರಮ ನಡೆದಿದೆ'' ಎಂದು ಆರೋಪಿಸಿದ್ದಾರೆ.
''ಬೈಲಹೊಂಗಲದಲ್ಲಿ 7 ಸಾವಿರ ಸೋಯಾಬೀನ್ ಚೀಲಗಳು ನಾಪತ್ತೆಯಾದರೆ, ಇತ್ತ ಅಣ್ಣಿಗೇರಿಯಲ್ಲಿ ಸಂಗ್ರಹಿಸಿದ್ದ ಕೋಟ್ಯಂತರ ಮೌಲ್ಯದ ಚೀಲಗಳು ಕಣ್ಮರೆಯಾಗಿವೆ. ರೈತರ ದಾಖಲೆಗಳನ್ನು ನಕಲಿ ಮಾಡಿ ಬ್ಯಾಂಕ್ನಲ್ಲೂ ಸಹ ಸಾಲ ಪಡೆದು ಅಧಿಕಾರಿ ಎಸ್ಕೇಪ್ ಆಗಿದ್ದಾರೆ. ಅಧಿಕಾರಿ ವಿರುದ್ಧ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಸಂಬಂಧಪಟ್ಟ ಅಧಿಕಾರಿಗೆ ಮನವಿ ಮಾಡಲಾಗಿದೆ. ಬಿತ್ತನೆ ಸಮಯ ಇದಾಗಿದ್ದರಿಂದ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ'' ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಅಣ್ಣಿಗೇರಿಗೆ ಬೆಂಗಳೂರು ರಾಜ್ಯ ಉಗ್ರಾಣ ನಿಗಮದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಅಣ್ಣಿಗೇರಿ ತಹಶೀಲ್ದಾರ್ ಸಹ ಆಗಮಿಸಿದ್ದರು.
''ಬೈಲಹೊಂಗಲ ಮತ್ತು ಅಣ್ಣಿಗೇರಿ ಉಗ್ರಾಣಗಳಿಗೆ ಆಕಾಶ್ ಎಂಬುವರನ್ನು ಪ್ರಭಾರಿ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಅವರು ಹಲವು ದಿನಗಳಿಂದ ನಮಗೆ ಉಗ್ರಾಣದ ಸಂಗ್ರಹಣ ಶುಲ್ಕ ಪಾವತಿ ಮಾಡದಿರುವುದು ಗಮನಕ್ಕೆ ಬಂದಿತ್ತು. ಹಾಗಾಗಿ ಅವರನ್ನು ಭೇಟಿಯಾಗಲು ನಾನು ಬೈಲಹೊಂಗಲಕ್ಕೆ ತರಳಿದ್ದೆವು. ಆಗ ಅವರು ಸ್ಥಳದಲ್ಲಿರಲಿಲ್ಲ. ಕೇಂದ್ರಕ್ಕೆ ಬರುವಂತೆ ಫೋನ್ ಮೂಲಕ ಬರಹೇಳಿದರೂ ಅವರು ಬರಲಿಲ್ಲ. ಮೇಲಧಿಕಾರಿಗಳ ಒತ್ತಾಯದ ಬಳಿಕ ಸಂಗ್ರಹಣ ಶುಲ್ಕವನ್ನು ಬೇರೆಯವರಿಂದ ಪಾವತಿ ಮಾಡಿಸಿದರು. ಆದರೆ, ಮುಖತಃ ಭೇಟಿಯಾಗದಿರುವುದು ಮತ್ತು ಅವರ ಈ ನಡೆಯಿಂದ ನಮಗೆ ಅನುಮಾನ ಮೂಡಿತು. ತಕ್ಷಣ ಬೈಲಹೊಂಗಲ ಉಗ್ರಾಣಕ್ಕೆ ಬಂದು ಅಲ್ಲಿ ಸಂಗ್ರಹಿಸಿಟ್ಟಿದ್ದ ರೈತರ ಬಿತ್ತನೆ ಬೀಜಗಳ ಚೀಲಗಳನ್ನು ಪರಿಶೀಲಿಸಿದೆವು. ನಮ್ಮಲ್ಲಿರುವ ಮಾಹಿತಿಗೂ ಅಲ್ಲಿರುವ ಚೀಲಗಳಿಗೂ ವ್ಯತ್ಯಾಸ ಕಂಡುಬಂದಿತು. ತಕ್ಷಣ ತಮ್ಮ ಮೇಲಧಿಕಾರಿಗೆ ಈ ವಿಷಯ ತಿಳಿಸಿದೆವು. ಅವರ ಅನುಮತಿಯೊಂದಿಗೆ ಪಕ್ಕಲ್ಲಿದ್ದ ಮತ್ತೊಂದು ಉಗ್ರಾಣದ ಬಾಗಿಲನ್ನು ತೆರೆದು ನೋಡಿದೆವು. ಅಲ್ಲಿಯೂ ವ್ಯತ್ಯಾಸ ಕಂಡುಬಂದಿತು. ಸೋಯಾಬೀನ್ ಸೇರಿ ಒಟ್ಟು 7 ಸಾವಿರಕ್ಕೂ ಅಧಿಕ ಚೀಲಗಳನ್ನು ಬೈಲಹೊಂಗಲ ಉಗ್ರಾಣದಲ್ಲಿ ಸಂಗ್ರಹ ಮಾಡಲಾಗಿತ್ತು. ಆದರೆ, ನಮ್ಮಲ್ಲಿ ದಾಖಲಾಗಿರುವ ಅಂಕಿ-ಅಂಶಕ್ಕೂ ಸದ್ಯ ಸ್ಥಳದಲ್ಲಿರುವ ಚೀಲಕ್ಕೂ ಬಹಳ ವ್ಯತ್ಯಾಸ ಕಂಡುಬರುತ್ತಿದೆ. ಸದ್ಯಕ್ಕೆ ಈ ಉಗ್ರಾಣವನ್ನು ಸೀಜ್ ಮಾಡಿದ್ದೇವೆ. ಅಣ್ಣಿಗೇರಿ ಕೂಡ ಅದೇ ಅಧಿಕಾರಿಯ ಅಂಡರ್ನಲ್ಲಿರುವುದರಿಂದ ಇಲ್ಲಿಗೆ ಬಂದು ನೋಡಿದೆವು. ಇಲ್ಲಿ ಕೂಡ ಸಂಗ್ರಹಿಸಿಟ್ಟಿದ್ದ ಚೀಲಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ. ಹಾಗಾಗಿ ಇದನ್ನೂ ಸಹ ಸೀಜ್ ಮಾಡಿದ್ದೇವೆ. ಕಾಣೆಯಾದ ಚೀಲಗಳ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಬೇಕಿದೆ. ಆದರೆ, ಅದಕ್ಕೂ ಮುನ್ನ ಯಾವ ರೈತರ ಎಷ್ಟು ಚೀಲಗಳು ನಾಪತ್ತೆಯಾಗಿವೆ ಎಂಬ ಮಾಹಿತಿ ಬೇಕು. ಆದರೆ, ಇದು ಹಿಂಗಾರು ಬೀಜ ಬಿತ್ತುವ ಕಾಲವಾಗಿದ್ದರಿಂದ ಬೀಜದ ಪರ್ಯಾಯ ವ್ಯವಸ್ಥೆ ಮಾಡಲಾಗುವುದು'' ಎಂದು ರಾಜ್ಯ ಉಗ್ರಾಣದ ಪ್ರಾದೇಶಿಕ ವ್ಯವಸ್ಥಾಪಕ ನೇಮಪ್ಪ ಲಂಬಾಣಿ ಭರವಸೆ ನೀಡಿದರು.