ಬೆಂಗಳೂರು: ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾದ ಪ್ರತ್ಯೇಕ ವಿವಾಹಿತರ ಜೋಡಿ ಸುಲಭವಾಗಿ ಜೀವನ ನಡೆಸಲು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಚಿನ್ನಾಭರಣ ದೋಚಿರುವ ಪ್ರಕರಣ ನಗರದಲ್ಲಿ ನಡೆದಿದೆ. ಇಬ್ಬರು ಆರೋಪಿಗಳನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನಾರಾಯಣಸ್ವಾಮಿ ಹಾಗೂ ನವೀನಾ ಎಂದು ಗುರುತಿಸಲಾಗಿದೆ. ಇವರಿಂದ 20 ಲಕ್ಷ ರೂ ಮೌಲ್ಯದ 333 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದ ವಿವರ: ಲಕ್ಕಸಂದ್ರದ ನಿವಾಸಿಯಾಗಿರುವ ದೂರುದಾರ ಸಯ್ಯದ್ ರೆಹಮಾನ್ ಎಂಬವರು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ತಮ್ಮ ಕುಟುಂಬಸಮೇತ ದುಬೈನಲ್ಲಿ ವಾಸವಾಗಿದ್ದಾರೆ. ಇವರ ಮನೆಯಲ್ಲಿ ಆರೋಪಿ ನಾರಾಯಣಸ್ವಾಮಿ ಎಂಬಾತ ತಾಯಿ ಕಳೆದ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಸಿದ್ದಾಪುರದಲ್ಲಿ ವಾಸವಾಗಿದ್ದ ತಾಯಿಗೆ ಹೆಚ್ಚು ಕೆಲಸವಿದ್ದರೆ ಅಥವಾ ಹೆಚ್ಚು ಹೊರೆಯಾಗುವ ಕೆಲಸವಿದ್ದರೆ ಆರೋಪಿ ಸ್ವಾಮಿ, ರೆಹಮಾನ್ ಮನೆಗೆ ಹೋಗುತ್ತಿದ್ದನು. ಬಳಿಕ ತಮ್ಮ ಕೆಲಸ ಮುಗಿಸಿಕೊಂಡು ಬರುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿವಾಹಿತನಾಗಿದ್ದ ಆರೋಪಿ ನಾರಾಯಣಸ್ವಾಮಿಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ಪತ್ನಿಯನ್ನು ಚೆನ್ನೈನಲ್ಲಿ ಇರಿಸಿಕೊಂಡು ಚಿಕಿತ್ಸೆ ಕೊಡಿಸುತ್ತಿದ್ದಾನೆ. ಎರಡನೇ ಆರೋಪಿಯಾದ ನವೀನಾ ಸಹ ವಿವಾಹಿತೆಯಾಗಿದ್ದು, ಈಕೆಯ ಪತಿ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಈಕೆೆಗೂ ಇಬ್ಬರು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಒಂದು ವರ್ಷದ ಹಿಂದೆ ಡೇಟಿಂಗ್ ಆ್ಯಪ್ ಮೂಲಕ ನವೀನಾ ಮತ್ತು ನಾರಾಯಣಸ್ವಾಮಿ ಮಧ್ಯೆ ಸ್ನೇಹ ಬೆಳೆದಿದೆ. ಇಬ್ಬರು ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ಅಂದಿನಿಂದ ಮಾತನಾಡಿಕೊಳ್ಳುತ್ತಿದ್ದರು. ಈ ಮಧ್ಯೆ ಇಬ್ಬರು ಮದುವೆಯಾಗುವ ನಿರ್ಧಾರಕ್ಕೂ ಬಂದಿದ್ದರು. ಜೀವನಕ್ಕೆ ಹಣ ಸಂಪಾದಿಸಲು ಕಳ್ಳತನ ಮಾಡುವಂತೆ ನಾರಾಯಣಸ್ವಾಮಿಗೆ ನವೀನಾ ಸೂಚಿಸಿದ್ದಳು.
ಕೆಲಸ ಮಾಡುತ್ತಿದ್ದ ಮಾಲೀಕರು ದುಬೈಗೆ ತೆರಳಬೇಕಾಗಿದ್ದರಿಂದ ನೆಲಮಹಡಿಯಲ್ಲಿರುವ ಸಂಬಂಧಿಕರ ಮನೆಗೆ ಬೀಗದ ಕೀ ನೀಡಿದ್ದರು. ಮನೆ ಮಾಲೀಕರು ನಾರಾಯಣಸ್ವಾಮಿಗೆ ಮನೆ ಸ್ವಚ್ಛತೆ ಮಾಡುವಂತೆ ತಿಳಿಸಿದ್ದರು. ಅದರಂತೆ ಸ್ವಾಮಿ ಮನೆ ಸ್ವಚ್ಛ ಮಾಡುತ್ತಿದ್ದಾಗ ಮಂಚದೊಳಗಿನ ಬಾಕ್ಸ್ ಪತ್ತೆಯಾಗಿದೆ. ಇದರಲ್ಲಿ ಚಿನ್ನ ಇರುವುದನ್ನರಿತ ಸ್ವಾಮಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯವೆಸಗಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳತನ ಮಾಡಿದ ಬಳಿಕ ಚಿನ್ನಾಭರಣವನ್ನು ತಮಿಳುನಾಡಿನಲ್ಲಿ ನೆಲೆಸಿದ್ದ ಸ್ನೇಹಿತೆ ನವೀನಾಗೆ ನೀಡಿರುವುದಾಗಿ ಸ್ವಾಮಿ ಬಾಯ್ಬಿಟ್ಟಿದ್ದಾನೆ. ಕೂಡಲೇ ಆಕೆಯನ್ನು ವಶಕ್ಕೆ ಪಡೆದು ಪೊಲೀಸರು ಪ್ರಶ್ನಿಸಿದಾಗ, ತಾನು ಕೆಲಸ ಮಾಡುವ ಪಾರ್ಲರ್ ಮಾಲೀಕರ ಬಳಿ ಗಿರವಿ ಇಟ್ಟಿರುವುದಾಗಿ ತಿಳಿಸಿದ್ದಳು. ಪಾರ್ಲರ್ ಮಾಲೀಕರಿಂದ 135 ಗ್ರಾಂ ನಕ್ಲೇಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನುಳಿದ ಚಿನ್ನಾಭರಣ ವಿವಿಧ ಫೈನಾನ್ಸ್ ಕಂಪನಿಗಳಲ್ಲಿ ಅಡವಿಟ್ಟಿದ್ದರು. ಸುಮಾರು 198 ಗ್ರಾಂ ತೂಕದ ಚಿನ್ನಾಭರಣವನ್ನು ಜಪ್ತಿ ಮಾಡಿಕೊಂಡಿರುವುದಾಗಿ ಪೊಲೀಸರು ವಿವರ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಕದ್ದ ನಕ್ಲೇಸ್ ಧರಿಸಿ ವಾಟ್ಸ್‌ಆ್ಯಪ್ ಡಿಪಿ ಇಟ್ಟು ಸಿಕ್ಕಿಬಿದ್ದ ಮನೆಕೆಲಸದಾಕೆ! - Jewellery Theft