ಮೈಸೂರು: ಹೆತ್ತ ತಾಯಿ ಹಾಗೂ ತಂಗಿಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿರುವ ಘಟನೆ ಹುಣಸೂರು ತಾಲೂಕಿನ ಮರೂರು ಗ್ರಾಮದಲ್ಲಿ ನಡೆದಿದೆ. ಸ್ವಂತ ಮಗನಿಂದಲೇ ಕೃತ್ಯ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಯುವಕನೊಬ್ಬನನ್ನು ಪ್ರೀತಿಸುತ್ತಿದ್ದ ವಿಚಾರವಾಗಿ ತಂಗಿಯೊಂದಿಗೆ ದ್ವೇಷ ಬೆಳೆಸಿಕೊಂಡಿದ್ದ ಅಣ್ಣ ನಿತಿನ್ ಈ ಕೃತ್ಯ ಎಸಗಿದ್ದಾನೆ. ಆರೋಪಿಯು ಮೊದಲು ತಂಗಿಯನ್ನು ಕೆರೆಗೆ ತಳ್ಳಿದ್ದ. ಈ ವೇಳೆ ರಕ್ಷಿಸಲು ಬಂದ ತಾಯಿಯನ್ನೂ ಸಹ ಕೆರೆಗೆ ತಳ್ಳಿದ್ದಾನೆ. ಹಿರಿಕ್ಯಾತನಹಳ್ಳಿಯ ಅನಿತಾ(40) ಹಾಗೂ ಮಗಳು ಧನುಶ್ರೀ(19) ಮೃತರು.
ಹನಗೋಡು ಗ್ರಾಮದ ಬೇರೆ ಯುವಕನೊಂದಿಗಿನ ಪ್ರೀತಿ ವಿಚಾರವಾಗಿ ಅಣ್ಣ-ತಂಗಿ ಮಧ್ಯೆ ವೈಮನಸ್ಸು ಬೆಳೆದಿತ್ತು. ಆಗಾಗ ಇಬ್ಬರ ನಡುವೆ ಗಲಾಟೆ ಕೂಡ ನಡೆಯುತ್ತಿತ್ತು. ನಾವೇ ಹಲವು ಬಾರಿ ಸಮಾಧಾನಪಡಿಸಿದ್ದೆವು. ಮಂಗಳವಾರ ಸಂಜೆ ಹೆಮ್ಮಿಗೆ ಗ್ರಾಮದಲ್ಲಿರುವ ಮಾವನ ಮನೆಗೆ ಹೋಗುವ ಕಾರಣ ನೀಡಿ ತಾಯಿ ಹಾಗೂ ತಂಗಿಯನ್ನು ನಿತಿನ್ ಬೈಕ್ನಲ್ಲಿ ಕರೆದೊಯ್ದು ಈ ಕೃತ್ಯವೆಸಗಿದ್ದಾನೆ ಎಂದು ತಂದೆ ಸತೀಶ್ ಹೇಳಿದ್ದಾರೆ. ಒದ್ದೆ ಬಟ್ಟೆಯಲ್ಲೇ ಮನೆಗೆ ಹಿಂದಿರುಗಿ ಈ ಬಗ್ಗೆ ಮಾಹಿತಿ ನೀಡಿದ್ದಾಗಿ ಸತೀಶ್ ತಿಳಿಸಿದ್ದಾರೆ.
ಘಟನೆ ಬಳಿಕ ಪಶ್ಚಾತ್ತಾಪ ಪಟ್ಟು ತಾಯಿಯನ್ನು ರಕ್ಷಿಸಲು ನಿತಿನ್ ಕೆರೆಗೆ ಹಾರಿದ್ದಾನೆ. ಆದ್ರೆ, ಅಷ್ಟರಲ್ಲಾಗಲೇ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿದೆ. ಆರೋಪಿ ನಿತಿನ್ನನ್ನು ಹುಣಸೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯ ಹಲವೆಡೆ 116 ಐಟಿ ಅಧಿಕಾರಿಗಳಿಂದ ಏಕಕಾಲಕ್ಕೆ ದಾಳಿ