ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ (92) ವಿಧಿವಶರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ ಬೆಂಗಳೂರಿನ ಸದಾಶಿವನಗರದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಹುಟ್ಟೂರಾದ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಬುಧವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇನ್ನು ಅವರ ನಿಧನಕ್ಕೆ ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರ ಸೇರಿದಂತೆ ಅನೇಕ ಕಡೆಗಳಿಂದ ಗಣ್ಯರು ಕಂಬನಿ ಮಿಡಿದಿದ್ದಾರೆ.
ಇನ್ನು ಸದಾಶಿವನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಮತ್ತು ನಟಿ ರಮ್ಯಾ ಅವರು ಎಸ್. ಎಂ. ಕೃಷ್ಣ ಅವರ ಅಂತಿಮ ದರ್ಶನ ಪಡೆದರು. ಬಳಿಕ ಮಾತನಾಡಿದ ಮಾಜಿ ಕ್ರಿಕೆಟಿಗ ಕುಂಬ್ಳೆ, ಎಸ್. ಎಂ. ಕೃಷ್ಣ ಅವರ ನಿಧನ ನಮ್ಮ ರಾಜ್ಯಕ್ಕೆ ತುಂಬಲಾರದ ನಷ್ಟ. ಎಸ್. ಎಂ. ಕೃಷ್ಣ ಅವರು ನಮ್ಮ ಕುಟುಂಬದ ಸದಸ್ಯ ಇದ್ದಂತೆ ಇದ್ದವರು. ನಮಗೆ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಕರ್ನಾಟಕ, ಬೆಂಗಳೂರಿಗೆ ಅವರ ಕೊಡುಗೆ ಅಪಾರವಾಗಿದೆ ಎಂದು ಸ್ಮರಿಸಿದರು.
ಕಾಂಗ್ರೆಸ್ ಶಾಸಕಾಂಗದ ಸಭೆ, ಔತಣಕೂಟ ಮುಂದೂಡಿಕೆ: ಬೆಳಗಾವಿಯ ಶೂನ್ಯ ರೆಸಾರ್ಟ್ನಲ್ಲಿ ಇಂದು ಸಂಜೆ ಏರ್ಪಡಿಸಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಹಾಗೂ ಔತಣಕೂಟವನ್ನು ಮುಂದೂಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ಮಾಜಿ ಸಿಎಂ ಎಸ್. ಎಂ. ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಅಂತಿಮ ದರ್ಶನಕ್ಕೆ ವ್ಯವಸ್ಥೆ: ಸದಾಶಿವನಗರದ ಎಸ್. ಎಂ. ಕೃಷ್ಣ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಕೆಲವೇ ಕ್ಷಣದಲ್ಲಿ ಡಿಸಿಎಂ ಡಿ. ಕೆ. ಶಿವಕುಮಾರ್ ಕೂಡ ಆಗಮಿಸಿದ್ದಾರೆ. ಗಣ್ಯರ ಜೊತೆಗೆ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಎಸ್. ಎಂ. ಕೃಷ್ಣ ಅವರ ನಿವಾಸದ ಮಂಭಾಗದ ರಸ್ತೆಯ ವಾಹನ ಸಂಚಾರ ಬಂದ್ ಮಾಡಲಾಗಿದ್ದು, ಒಂದು ಕಡೆಯಿಂದ ಗಣ್ಯರ ಆಗಮನಕ್ಕೆ ಅವಕಾಶ ನೀಡಲಾಗಿದೆ. ಮತ್ತೊಂದು ಕಡೆ ಕಾರ್ಯಕರ್ತರು, ಸಾರ್ವಜನಿಕರಿಗೆ ಅಂತಿಮ ದರ್ಶನ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ.
ಓದಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ವಿಧಿವಶ