ಬೆಂಗಳೂರು: ದೇಶದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿರುವ ಕೆಎಸ್ಆರ್ಟಿಸಿ ಪ್ರಶಸ್ತಿಗಳ ಬೇಟೆ ಮುಂದುವರೆಸಿದೆ. ಇದೀಗ ಐದು ಜಾಗತಿಕ ಪ್ರಶಸ್ತಿಗಳೊಂದಿಗೆ ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಎಸ್.ಲತಾ ಅವರಿಗೆ ಜಾಗತಿಕ ಮಹಿಳಾ ನಾಯಕಿ ಪ್ರಶಸ್ತಿ ಲಭಿಸಿದ್ದು, ಈ ಮೂಲಕ ರಾಜ್ಯ ಸಾರಿಗೆ ಸಂಸ್ಥೆಗೆ ಎಂಟು ತಿಂಗಳಲ್ಲೇ ಪ್ರಶಸ್ತಿಗಳ ಅರ್ಧ ಶತಕವನ್ನು ದಾಟಿದೆ.
ಹೊಸ ಉಪಕ್ರಮಗಳು, ನೂತನ ಮಾದರಿಯ ಬಸ್ಗಳನ್ನು ರಸ್ತೆಗಿಳಿಸಿ ಪ್ರಯೋಗದ ಮೂಲಕವೇ ಉತ್ತಮ ಸಾರಿಗೆ ಸೇವೆಗೆ ಬೇಕಾದ ಮಾದರಿಯ ಬಸ್ಗಳ ಸಂಚಾರದ ಮೂಲಕ ದೇಶದ ಗಮನ ಸೆಳೆದಿರುವ ಕೆಎಸ್ಆರ್ಟಿಸಿಗೆ ಇದೀಗ ಮತ್ತೆ 6 ಪ್ರಶಸ್ತಿಗಳು ಲಭಿಸಿವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ವರ್ಲ್ಡ್ ಮ್ಯಾನ್ಯುಫ್ಯಾಕ್ಚರಿಂಗದ ಕಾಂಗ್ರೆಸ್ (World Manufacturing Congress) ಹಾಗೂ ವರ್ಲ್ಡ್ ಮಾರ್ಕೆಟಿಂಗ್ ಕಾಂಗ್ರೆಸ್ ( World Marketing Congress)ನ 5 ಪ್ರಶಸ್ತಿಗಳು ಹಾಗೂ ನಿಗಮದ ಮಂಡಳಿ ಕಾರ್ಯದರ್ಶಿ ಮತ್ತು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗೆ ಜಾಗತಿಕ ಮಹಿಳಾ ನಾಯಕಿ ಪ್ರಶಸ್ತಿ ಲಭಿಸಿದೆ.
ಮುಂಬೈನ ಹೋಟೆಲ್ ತಾಜ್ ಲ್ಯಾಂಡ್ಸ್ ಎಂಡ್ನಲ್ಲಿ ಶನಿವಾರ ಆಯೋಜಿಸಲಾಗಿದ್ದ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯುನೈಟೆಡ್ ಸ್ಟೇಟ್ಸ್ ನಿನಾ ಇ ಉಡರ್ಡ್ ಅಸೋಸಿಯೇಟ್ಸ್ ಅಧ್ಯಕ್ಷರು ಹಾಗೂ ಮುಖ್ಯಸ್ಥರಾದ ಮಿಸ್.ನಿನಾ ಇ ಉಡರ್ಡ್ ಹಾಗೂ ದುಬೈನ ಓಝೋನ್ ಗ್ರೂಪ್ ಸಂಸ್ಥಾಪಕ ಡಾ.ಓವಿಲಿಯಾ ಫೆರ್ನಾಂಡಿಸ್ ನಿಗಮಕ್ಕೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಕೆಎಸ್ಆರ್ಟಿಸಿ ನಿಗಮ ಮಂಡಳಿಯ ಕಾರ್ಯದರ್ಶಿ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಲತಾ ಟಿ.ಎಸ್, ವಿಭಾಗೀಯ ತಾಂತ್ರಿಕ ಅಭಿಯಂತರ ಹೆಚ್ ಎಸ್. ಸತೀಶ್, ವಿಭಾಗೀಯ ತಾಂತ್ರಿಕ ಶಿಲ್ಪಿ ಸೌಮ್ಯ ಸಿ ಹಾಗೂ ಸಹಾಯಕ ಆಡಳಿತಾಧಿಕಾರಿ ಶಿಬಾ.ಎಸ್. ನಿಗಮದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಪ್ರಶಸ್ತಿಗಳು ವಿವರ:
- ವಿದ್ಯುತ್ ವಾಹನಗಳ ಕೈಗಾರಿಕಾ ನಾಯಕತ್ವ ಪ್ರಶಸ್ತಿ - ಇ.ವಿ.ಪವರ್ ಪ್ಲಸ್
- ಜಾಗತಿಕ ಬ್ರಾಂಡ್ ಉತ್ಕೃಷ್ಟತೆ ಪ್ರಶಸ್ತಿ - ಅತ್ಯುತ್ತಮ ಬ್ರಾಂಡಿಂಗ್ ಮತ್ತು ಮಾರ್ಕೆಟಿಂಗ್ ಉಪಕ್ರಮ
- ವರ್ಷದ ವ್ಯವಹಾರಿಕ ನಾಯಕತ್ವ ಪ್ರಶಸ್ತಿ - ಅತ್ಯುತ್ತಮ ವಿನೂತನ ಉಪಕ್ರಮ ಸಂಸ್ಥೆ
- ಜಾಗತಿಕ ಮಾನವ ಸಂಪನ್ಮೂಲ ಉತ್ಕೃಷ್ಟತೆ ಪ್ರಶಸ್ತಿ - ಕಾರ್ಮಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಸಂಸ್ಥೆ
- ಜಾಗತಿಕ ಅತ್ಯುತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿ - ಜಾಗತಿಕ ಮಾನವ ಸಂಪನ್ಮೂಲ ಉಪಕ್ರಮ
- ನಿಗಮದ ಮಂಡಳಿ ಕಾರ್ಯದರ್ಶಿ ಮತ್ತು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಲತಾ ಟಿ.ಎಸ್ ಅವರಿಗೆ ವಿಶ್ವ ಮಾರ್ಕೆಟಿಂಗ್ ಉತ್ಕೃಷ್ಟತೆಗಾಗಿ ಜಾಗತಿಕ ಮಹಿಳಾ ನಾಯಕಿ ಪ್ರಶಸ್ತಿ
ಈ ಆರು ಪ್ರಶಸ್ತಿಗಳ ಗರಿಮೆಯೊಂದಿಗೆ ನಿಗಮವು ಕಳೆದ 8 ತಿಂಗಳುಗಳಲ್ಲಿ 51 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಂತಾಗಿದೆ. ಸಾರಿಗೆ ನಿಗಮಕ್ಕೆ ಪ್ರಶಸ್ತಿ ಲಭಿಸಿದ್ದಕ್ಕೆ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಭಿನಂದಿಸಿದ್ದಾರೆ.
ಕೆಎಸ್ಆರ್ಟಿಸಿಗೆ ಸ್ಕ್ವಾಚ್ ಸಂಸ್ಥೆಯಿಂದ ಎರಡು ರಾಷ್ಟ್ರೀಯ ಪ್ರಶಸ್ತಿ: ಕೆಎಸ್ಆರ್ಟಿಸಿಗೆ ಕಾರ್ಮಿಕ ಕಲ್ಯಾಣ ಉಪಕ್ರಮ ಮತ್ತು ಶಕ್ತಿ ಯೋಜನೆಗಳಿಗೆ ಸ್ಕ್ವಾಚ್ನಿಂದ ಎರಡು ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದೆ. ಇತ್ತೀಚೆಗೆ ಸ್ಕ್ವಾಚ್ ಸಂಸ್ಥೆಯು ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ಆಯೋಜಿಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಕ್ವಾಚ್ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಸಮೀರ್ ಕೊಚ್ಚರ್ ಹಾಗೂ ಉಪಾಧ್ಯಕ್ಷ ಗುರುಶರಣ್ ನಿಗಮಕ್ಕೆ ಸ್ಕ್ವಾಚ್ 2 ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದ್ದರು. ಕೆಎಸ್ಆರ್ಟಿಸಿ ಉಪ ಮುಖ್ಯ ಲೆಕ್ಕಾಧಿಕಾರಿ ವೈ.ಕೆ. ಪ್ರಕಾಶ್ ನಿಗಮದ ಪರವಾಗಿ ಪ್ರಶಸ್ತಿ ಸ್ವೀಕರಿಸಿದ್ದರು.
ದೆಹಲಿ ಮೂಲದ ಸ್ಕ್ವಾಚ್ ಸಂಸ್ಥೆಯು ಸ್ವತಂತ್ರ ವಿಚಾರ ತಜ್ಞ ವೇದಿಕಾ ಸಂಸ್ಥೆಯಾಗಿದ್ದು, 1997ರಲ್ಲಿ ಸ್ಥಾಪಿತವಾಗಿರುತ್ತದೆ. ಈ ಸಂಸ್ಥೆಯು 2003 ರಿಂದ ಸ್ಕ್ವಾಚ್ ಪ್ರಶಸ್ತಿಯನ್ನು ವಿವಿಧ ಸಂಸ್ಥೆಗಳು ಸಾಧಿಸಿರುವ ಉತ್ತಮ ಆಡಳಿತ ನಿರ್ವಹಣೆ, ಹಣಕಾಸು, ತಾಂತ್ರಿಕತೆ ಅಳವಡಿಕೆ ಹಾಗೂ ಆಂತರಿಕ ಬೆಳವಣಿಗೆಗಾಗಿ ನೀಡುತ್ತಾ ಬಂದಿದೆ. ಸ್ಕ್ವಾಚ್ ಸಂಸ್ಥೆಯು ತನ್ನ ಅತ್ಯುನ್ನತ ಪ್ರಶಸ್ತಿಗಳನ್ನು ಸಂಸ್ಥೆಗಳು ಮಾಡಿರುವ ಅತಿ ಉತ್ತಮ ಸಾಧನೆ ಹಾಗೂ ಅವುಗಳಿಂದ ಉಂಟಾಗಿರುವ ಪರಿಣಾಮಗಳನ್ನು ಆಧರಿಸಿ ಆಯ್ಕೆ ಮಾಡಿ ನೀಡುತ್ತದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ: 9 ಕಾರಿಡಾರ್‌ಗಳಲ್ಲಿ ಪ್ರತ್ಯೇಕ ಬಸ್ ಲೇನ್ ನಿರ್ಮಾಣಕ್ಕೆ ಮುಂದಾದ ಪಾಲಿಕೆ