ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡುವಂತೆ ಕೋರಿ ಎಸ್ಐಟಿ ವಿದೇಶಾಂಗ ಇಲಾಖೆಗೆ ಪತ್ರ ಬರೆದಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.
ವಿದೇಶಾಂಗ ಇಲಾಖೆಗೆ ಎಸ್ಐಟಿ ಪತ್ರ ಬರೆದ ವಿಚಾರವಾಗಿ ಬೆಂಗಳೂರಲ್ಲಿ ಗೃಹ ಸಚಿವರು ಪ್ರತಿಕ್ರಿಯೆ ನೀಡಿದರು. ಸಿಎಂ ಸಿದ್ದರಾಮಯ್ಯ ಈಗಾಗಲೇ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಗೊಳಿಸುವಂತೆ ಕೋರಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಈಗ ವಾರಂಟ್ ಆಧಾರದ ಮೇಲೆ ಪಾಸ್ ಪೋರ್ಟ್ ರದ್ದತಿಗೆ ಎಸ್ಐಟಿ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದೆ. ತಕ್ಷಣ ಪಾಸ್ ಪೋರ್ಟ್ ರದ್ದು ಮಾಡಬೇಕಾಗುತ್ತೆ. ಪಾಸ್ ಪೋರ್ಟ್ ರದ್ದು ಮಾಡುವ ಅಧಿಕಾರ ವಿದೇಶಾಂಗ ಇಲಾಖೆಗೆ ಇದೆ. ವಿದೇಶಾಂಗ ಇಲಾಖೆ ಪಾಸ್‌ಪೋರ್ಟ್ ರದ್ದು ಮಾಡಿದರೆ ಪ್ರಜ್ವಲ್ ವಿದೇಶದಲ್ಲಿ ಇರಲು ಆಗಲ್ಲ. ವಾಪಸ್ ಬರಲೇಬೇಕಾಗುತ್ತೆ. ಇದಕ್ಕೆ ಕೇಂದ್ರ ಸರ್ಕಾರ ಸ್ಪಂದನೆ ಮಾಡಬೇಕು ಎಂದು ಪರಮೇಶ್ವರ ತಿಳಿಸಿದರು.
ಸರ್ಕಾರ ಯಾರ ಫೋನ್ ಟ್ಯಾಪ್ ಮಾಡಿಲ್ಲ ಅಂತ ನಿನ್ನೆಯೇ ಹೇಳಿದ್ದೇನೆ. ಟ್ಯಾಪಿಂಗ್ ಬಗ್ಗೆ ಹೆಚ್ಡಿಕೆ ಬಳಿ ನಿಖರ ಮಾಹಿತಿ ಇದ್ದರೆ ಕೊಡಲಿ, ತನಿಖೆ ಮಾಡುತ್ತೇವೆ. ಎಸ್ಐಟಿ ನಿರಂತರ ತನಿಖೆ ಮಾಡುತ್ತಿದೆ. ಎಸ್ಐಟಿಗೆ ಫ್ರೀಡಂ ಕೊಟ್ಟಿದ್ದೇವೆ. ಸರ್ಕಾರಕ್ಕೆ ಬಹಳ ಕೆಲಸ ಇದೆ, ಟ್ಯಾಪಿಂಗ್ ಮಾಡ್ತಾ ಕೂತ್ಕೊಳ್ತೀವಾ? ಎಂದರು.
ಕುಮಾರಸ್ವಾಮಿ ಅವರು ಪ್ರಜ್ವಲ್ ವಾಪಸ್ ಬರಲಿ ಅಂತ ಕರೆದಿದ್ದು ಅವರ ಕುಟುಂಬದ ವಿಚಾರ. ಅವರು ವಾಪಸ್ ಬಂದು ಕೇಸ್ ಎದುರಿಸಲಿ ಎಂದ ಸಚಿವರು, ಎಲ್ ಆರ್ ಶಿವರಾಮೇಗೌಡ - ದೇವರಾಜೇಗೌಡ ಆಡಿಯೋ ಬಗ್ಗೆ ತನಿಖೆ ನಡೆಸಬೇಕಾ ಬೇಡವಾ ಅಂತ ಎಸ್ಐಟಿ ನಿರ್ಧಾರ ಮಾಡಲಿದೆ. ಎಸ್ಐಟಿಗೆ ಸರ್ಕಾರ ಫ್ರೀ ಹ್ಯಾಂಡ್ ಕೊಟ್ಟಿದೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ಮತ್ತು ಬೆಂಗಳೂರಲ್ಲಿ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಗಳು ದಾಖಲಾಗಿವೆ. ಲೈಂಗಿಕ ದೌರ್ಜನ್ಯದ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿದ್ದಾರೆ. ಪ್ರಕರಣ ಸಂಬಂಧ ತನಿಖೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ಕಳುಹಿಸಿದರೂ ಪ್ರಜ್ವಲ್ ಆಗಮಿಸಿರಲಿಲ್ಲ. ಬಳಿಕ ಬ್ಲೂ ಕಾರ್ನರ್ ಹೊರಡಿಸಿದ್ದರೂ ಪತ್ತೆಯಾಗಿರಲಿಲ್ಲ. ರೆಡ್ ಕಾರ್ನರ್ ನೋಟಿಸ್ ನೀಡಲು ಕಾನೂನು ಪ್ರಕ್ರಿಯೆ ಅಡ್ಡಿಯಾಗಿತ್ತು. ಇದರಿಂದಾಗಿ ಪ್ರಜ್ವಲ್ ವಿರುದ್ಧ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಬಂಧನದ ವಾರಂಟ್ ಹೊರಡಿಸಿತ್ತು.