ಶಿವಮೊಗ್ಗ: ಕಾಂಗ್ರೆಸ್ ನಾಯಕರು ಭ್ರಮೆಯಲ್ಲಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ನಂತರ ಭ್ರಮೆಯಲ್ಲಿ ತೇಲುತ್ತಿದ್ದರು. ಈಗ ಅವರಿಗೆ ವಾಸ್ತವಿಕತೆ ಅರ್ಥ ಆಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ವಿರುದ್ದ ಕಿಡಿಕಾರಿದರು. ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಬಿಜೆಪಿ ಸೇರಿದಾಗ ಕಾಂಗ್ರೆಸ್ನವರ ಸ್ಥಿತಿ ಅರ್ಥ ಆಗುತ್ತಿದೆ. ಶೆಟ್ಟರ್ ಅವರು ಬಿಜೆಪಿ ಸೇರುವ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಇಂಟಲಿಜೆನ್ಸಿ ಫೇಲ್ ಆಗಿದೆ ಅಂತ ಗಾಬರಿಯಾಗಿದ್ದಾರೆ. ಆ ಪಕ್ಷದ ಹಿರಿಯ ಮುಖಂಡರು ಕಕ್ಕಾ ಬಿಕ್ಕಿಯಾಗಿದ್ದಾರೆ. ಜಗದೀಶ ಶೆಟ್ಟರ್ ಸೇರಿದಂತೆ ಅನೇಕ ಪಕ್ಷದ ಮುಖಂಡರು ಮೋದಿ ಅವರನ್ನು ಮತ್ತೆ ಪ್ರಧಾನ ಮಂತ್ರಿ ಮಾಡಲು ಎಲ್ಲರೂ ಬಯಸುತ್ತಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಯಾವುದೇ ಒಂದು ವಿಭಾಗಕ್ಕೆ ಸೀಮಿತವಾಗಿಲ್ಲ:ನಮ್ಮ ಬಿಜೆಪಿ ಪಕ್ಷ ಯಾವುದೇ ಒಂದೇ ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋಗುವ ಪಕ್ಷ. ಆದರೆ, ಕಾಂಗ್ರೆಸ್ ಪಕ್ಷ ಚುನಾವಣೆ ಬಂದಾಗ ‘ವೀರಶೈವ ಲಿಂಗಾಯತ’ ವಿಚಾರವಾಗಿ ಬೆಂಕಿ ಹಚ್ಚಿದರು. ಈಗ ಬೇರೆ ಬೇರೆ ಜಾತಿಯವರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಕುಮಾರ್ ಬಂಗಾರಪ್ಪ ಬಿಜೆಪಿಯಲ್ಲಿ ಇದ್ದಾರೆ: ಕುಮಾರ ಬಂಗಾರಪ್ಪ ಅವರು ಈಗಲೂ ಬಿಜೆಪಿಯಲ್ಲಿದ್ದಾರೆ. ಸೋಲಿನಿಂದಾಗಿ ಸಹಜವಾಗಿ ಬೇಸರದಲ್ಲಿದ್ದಾರೆ. ಎಲ್ಲರನ್ನೂ ಕರೆದುಕೊಂಡು ಹೋಗುವ ಕೆಲಸ ಮಾಡಲಾಗುತ್ತಿದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಎಲ್ಲ ತಯಾರಿ ನಡೆಸಲಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಸಕನಾಗಿ ಮೊದಲ ಬಾರಿಗೆ ಶಿಕಾರಿಪುರದಲ್ಲಿ ಗಣರಾಜೋತ್ಸವದಲ್ಲಿ ಭಾಗಿಯಾಗಿ ಬಂದಿದ್ದೇನೆ. ಜನವರಿ 22 ರಂದು ಭಾರತ ಅಷ್ಟೇ ಅಲ್ಲ. ಜಗವೆಲ್ಲವೂ ಅಯೋಧ್ಯೆ ಕಡೆ ತಿರುಗಿ ನೋಡುತ್ತಿತ್ತು. ಬಿಜೆಪಿಯ ಪ್ರಣಾಳಿಕೆಯಲ್ಲಿ ರಾಮ ಮಂದಿರದ ಕುರಿತು ಹೇಳಿಕೊಂಡಿದ್ವಿ. ರಾಮಮಂದಿರ ಲೋಕಾರ್ಪಣೆ ಆಗಿದ್ದು ಸಂತೋಷವಾಗಿದೆ.
ದೇಶ ಹಾಗೂ ರಾಜ್ಯ ಕಾಂಗ್ರೆಸ್ನವರು ಅಯೋಧ್ಯೆ ಕುರಿತು ದ್ವಂದ್ವದಲ್ಲಿದ್ದರು. ಅಯೋಧ್ಯೆಗೆ ಹೋದರೆ ಅಲ್ಪಸಂಖ್ಯಾಂತರ ಮತ ಹೋಗುತ್ತದೆ ಎಂಬ ಭಾವನೆಯಲ್ಲಿದ್ದರು. ಅವರು ರಾಮಮಂದಿರ ವಿಚಾರದಲ್ಲಿ ನಡೆದುಕೊಂಡಿದ್ದು ನೋವುಂಟು ಮಾಡಿದೆ. ಇನ್ಮುಂದೆ ಕಾಂಗ್ರೆಸ್ನ್ನು ಭಗವಂತ ಕಾಪಾಡಬೇಕು. ಇದರಿಂದ ದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ಥಿತ್ವವನ್ನು ಕಳೆದುಕೊಂಡಿದೆ. ಇದಕ್ಕೆ ಪಂಚರಾಜ್ಯ ಚುನಾವಣೆಯ ಫಲಿತಾಂಶವೇ ಸಾಕ್ಷಿ ಎಂದು ಕುಟುಕಿದರು.
ಪ್ರಧಾನಿ ನರೇಂದ್ರ ಮೋದಿ ಅವರು 9 ವರ್ಷಗಳಿಂದ ವಿಶ್ರಾಂತಿ ತೆಗದುಕೊಳ್ಳದೇ ಕೆಲಸ ಮಾಡುತ್ತಿದ್ದಾರೆ. ಅವರು ದೇಶವನ್ನು ಅಭಿವೃದ್ದಿ ಕಡೆಗೆ ತೆಗೆದುಕೊಂಡ ಹೋಗುತ್ತಿದ್ದಾರೆ. ಭಾರತ ಅಭಿವೃದ್ದಿ ಹೊಂದಿದ ದೇಶವಾಗುವ ಕಡೆಗೆ ಕರೆದುಕೊಂಡು ಹೋಗುತ್ತಾರೆ. ಸೂರ್ಯ ಚಂದ್ರರು ಇರುವಷ್ಟೇ ಸತ್ಯ ಮೋದಿ 3ನೇ ಬಾರಿಗೆ ಪಿಎಂ ಆಗುವುದು ಸತ್ಯ ಎಂದು ಅಭಿಪ್ರಾಯ ತಿಳಿಸಿದರು.
ಪದ್ಮಶ್ರೀ ಪುರಸ್ಕೃತರಿಗೆ ಅಭಿನಂದನೆ: ಕೇಂದ್ರ ಸರ್ಕಾರ ನೀಡುವ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಗೊಂಡಿರುವ ರಾಜ್ಯದ ಎಲ್ಲ ಸಾಧಕರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿನಂದಿಸಿದ್ದಾರೆ. ವಿಶಿಷ್ಟ ಸಾಧನೆ ಮಾಡಿರುವ ಕರ್ನಾಟಕದ ಮೈಸೂರಿನ ಬುಡಕಟ್ಟು ಸಮುದಾಯದ ಕಲ್ಯಾಣಕ್ಕೆ ಶ್ರಮಿಸಿದ ಕಾರ್ಯಕರ್ತ ಸೋಮಣ್ಣ, ಪ್ಲಾಸ್ಟಿಕ್ ಸರ್ಜನ್ ಸಾಮಾಜಿಕ ಕಾರ್ಯಕರ್ತೆ ಪ್ರೇಮಾ ಧನರಾಜ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ.
ರಾಜ್ಯದ ರೋಹನ್ ಬೋಪಣ್ಣ-ಕ್ರೀಡೆ, ಅನುಪಮಾ ಹೊಸಕೆರೆ-ಕಲೆ, ಶ್ರೀಧರ್ ಮಾಕಂ ಕೃಷ್ಣಮೂರ್ತಿ-ಸಾಹಿತ್ಯ, ಶಿಕ್ಷಣ, ಕೆ.ಎಸ್. ರಾಜಣ್ಣ-ಸಮಾಜಸೇವೆ, ಡಾ.ಸಿ.ಆರ್.ಚಂದ್ರಶೇಖರ್ –ವೈದ್ಯಕೀಯ, ಶಶಿ ಸೋನಿ-ಟ್ರೇಡ್ ಇಂಡಸ್ಟ್ರಿ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.
ಅಳಿವಿನಂಚಿನ ಅಪರೂಪದ ಭತ್ತದ ತಳಿಗಳ ಬೀಜ ಬಿತ್ತಿ ತಳಿ ಸಂರಕ್ಷಣೆ ಮಾಡಿದ್ದ ಕಾಸರಗೋಡಿನ ಸತ್ಯನಾರಾಯಣ ಕಿನ್ನಿಂಗಾರ್ ಬೆಳೇರಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಪುರಸ್ಕೃತರು ಇನ್ನಷ್ಟು ಸಾಧನೆ ಮಾಡಲು, ಈ ಪ್ರಶಸ್ತಿ ಪ್ರೇರಣೆ ನೀಡಲಿ ಎಂದು ಶುಭ ಹಾರೈಸಿದರು.
ಅಲ್ಲದೇ ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾದ ಉದ್ಯಮಿ ಸೀತಾರಾಮ್ ಜಿಂದಾಲ್ ಅವರನ್ನು ಸಹ ಅಭಿನಂದಿಸಿ, ನೈಜ ಸಾಧಕರನ್ನು ಗುರುತಿಸುವ ಕೆಲಸ ಆಗಿದೆ,ಕೇಂದ್ರ ಸರಕಾರಕ್ಕೆ ಧನ್ಯವಾದಗಳು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂಓದಿ:'ಜಾತಿ, ಧರ್ಮಗಳಂತಹ ಭಾವನಾತ್ಮಕ ವಿಷಯಗಳ ದುರ್ಬಳಕೆ ಸಂವಿಧಾನಕ್ಕೆ ಬಗೆವ ದ್ರೋಹ'