ಹಾವೇರಿ: ''ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ತಮಗೆ ಹಿನ್ನೆಡೆಯಾಗುವ ಭಯವನ್ನು ಸಿಎಂ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ'' ಎಂದು ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಮಡ್ಲೂರಿನಲ್ಲಿ ಮಾತನಾಡಿದ ಅವರು, ''ಈ ಲೋಕಸಭೆ ಚುನಾವಣೆಯಲ್ಲಿ ಹಿನ್ನೆಡೆಯಾಗುವ ಕುರಿತು ತಮಗೆ ಅಭದ್ರತೆಯಾಗುತ್ತದೆ ಎಂಬುವುದನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ದುಃಸ್ಥಿತಿ ಚಿತ್ರ ಅವರ ಮಾತುಗಳಲ್ಲಿ ಸ್ಪಷ್ಟವಾಗುತ್ತಿದೆ'' ಎಂದರು.
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನೀಡದೇ ಅಮಿತ್ ಶಾ ಚುನಾವಣೆ ಪ್ರಚಾರಕ್ಕೆ ಬರುವ ಯಾವ ನೈತಿಕತೆ ಇದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಕೇಂದ್ರದಿಂದ ಈಗಾಗಲೇ ಎನ್‌ಡಿಆರ್‌ಎಫ್ ಎರಡು ಹಂತದ ಪರಿಹಾರವನ್ನು ಕೇಂದ್ರ ಬಿಡುಗಡೆ ಮಾಡಿದೆ. ಕೇಂದ್ರ ಬಿಡುಗಡೆ ಮಾಡಿರುವ 680 ಕೋಟಿ ರೂಪಾಯಿಯಲ್ಲಿ ಅವರು ರೈತರಿಗೆ ಎರಡು ಸಾವಿರ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸರ್ಕಾರ ದುಡ್ಡು ತಗೆದುಕೊಂಡು ನಮ್ಮ ದುಡ್ಡು ಎಂದು ರೈತರಿಗೆ ನೀಡಿ, ಈ ದುಡ್ಡು ನಮ್ಮದು ಎನ್ನುವ ಸಿಎಂ ಸಿದ್ದರಾಮಯ್ಯಗೆ ಅಮಿತ್ ಶಾ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ'' ಎಂದು ಬಸವರಾಜ ಬೊಮ್ಮಾಯಿ ಕಿಡಿಕಾರಿದರು.
''ಕಾಂಗ್ರೆಸ್‌ನವರು ಸ್ಪರ್ಧಿಸುತ್ತಿರುವುದೇ 200 ಕ್ಷೇತ್ರಗಳಲ್ಲಿ ಅವರು ನಮ್ಮ ಗೆಲುವಿನ ಕ್ಷೇತ್ರದ ಬಗ್ಗೆ ಏನು ಹೇಳುತ್ತೆ? ಬಿಜೆಪಿ 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಪ್ರಧಾನಿ ನರೇಂದ್ರ ಮೋದಿ ಅಭೂತಪೂರ್ವ ಜಯಸಾಧಿಸಿ ಮತ್ತೆ ಪ್ರಧಾನಿಯಾಗಲಿದ್ದಾರೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ಅಮಿತ್ ಶಾ ಮನವೊಲಿಕೆಗೆ ಸಹ ಬಗ್ಗುವುದಿಲ್ಲ ಎಂದಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ ಅವರು, ಇದಕ್ಕೆ ಜನರೇ ಉತ್ತರಿಸಲಿದ್ದಾರೆ ಎಂದರು. ''ರಾಜಕಾರಣದಲ್ಲಿ ರಾಜಕೀಯ ಪಕ್ಷ ಇರಲಿ, ರಾಜಕಾರಣಿ ಇರಲಿ, ರಾಜಕೀಯ ನಾಯಕನಿರಲಿ ಅವರಿಗೆ ಸಾವಿಲ್ಲ. ರಾಜಕೀಯ ಇತಿಹಾಸದಲ್ಲಿ ಸೋತಿರುವ ರಾಜಕೀಯ ನಾಯಕರಿಗೆ ಜನರು ಮತ್ತೆ ಜಯ ತಂದುಕೊಟ್ಟಿರುವ ಹಲವಾರು ಉದಾಹರಣೆಗಳಿವೆ'' ಎಂದು ಬೊಮ್ಮಾಯಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
''2018ರಲ್ಲಿ ಇದೇ ಕಾಂಗ್ರೆಸ್ ಪಕ್ಷ ಸೋಲು ಅನುಭಿಸಿಲ್ಲವೇ, ಹೀಗಾಗಿ ಒಬ್ಬ ರಾಜಕೀಯ ನಾಯಕನಿಗೆ ರಾಜಕೀಯ ಪಕ್ಷಕ್ಕೆ ಈ ರೀತಿ ಹೇಳುವುದು ಎಷ್ಟರ ಮಟ್ಟಿಗೆ ಸರಿ. ಕಾಂಗ್ರೆಸ್ ನಾಯಕರು ತಮ್ಮ ಗ್ಯಾರಂಟಿಗಳನ್ನು ನಂಬಿದ್ದಾರೆ. ಗ್ಯಾರಂಟಿ ಯೋಜನೆಗಳಲ್ಲಿ ಆದ ಅವಘಡ ಬರುವ ಚುನಾವಣೆಯಲ್ಲಿ ಅಭಿವ್ಯಕ್ತವಾಗುತ್ತದೆ. ಹುಸಿ ಭರವಸೆ ನೀಡಿದವರಿಗೆ ಜನ ಪಾಠ ಕಲಿಸಲಿದ್ದಾರೆ'' ಎಂದು ವಾಗ್ದಾಳಿ ನಡೆಸಿದರು.
''ಶಿರಹಟ್ಟಿ ಕ್ಷೇತ್ರದಲ್ಲಿ ಸ್ಫರ್ಧಿಸುವ ಟಿಕೆಟ್‌ಗೆ ಹಣ ಪಡೆದಿದ್ದೇನೆ ಎಂಬ ರಾಮಣ್ಣ ಲಮಾಣಿ ಹೇಳಿಕೆಯು ಹತಾಶೆಯಿಂದ ಕೂಡಿದೆ ಮತ್ತು ಆಧಾರ ರಹಿತವಾಗಿದೆ ಎಂದರು.
ಇದನ್ನೂ ಓದಿ: ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಅಮಿತ್ ಶಾಗೂ ಹೇಳಿ ಬರುತ್ತೇನೆ: ಕೆ.ಎಸ್. ಈಶ್ವರಪ್ಪ - K S Eshwarappa