ಬೆಳಗಾವಿ: ಮೈಸೂರಿನಲ್ಲಿ ಕಾಂಗ್ರೆಸ್ ಸೋತರೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎಂಬ ಹೆದರಿಕೆ ಸಿದ್ದರಾಮಯ್ಯ ಅವರನ್ನು ಕಾಡುತ್ತಿದೆ. ಹಾಗಾಗಿ ಇದು ನನ್ನ ಕೊನೆಯ ಚುನಾವಣೆ ಎನ್ನುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಲೇವಡಿ ಮಾಡಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಸಿದ್ದರಾಮಯ್ಯ ಅವರು ಇದೇ ಮಾತನ್ನು ಹೇಳುತ್ತಿದ್ದಾರೆ. ಇದು ಅವರ ರಾಜಕೀಯ ಗಿಮಿಕ್. ಆದರೆ, ಜನ ಅವರ ಮಾತನ್ನು ನಂಬುವುದಿಲ್ಲ. ಅಲ್ಲದೇ ಈ ಚುನಾವಣೆಯಲ್ಲಿ ನಾವು ರಾಜ್ಯದಲ್ಲಿ 28 ಸ್ಥಾನಗಳನ್ನೂ ಗೆಲ್ಲುತ್ತೇವೆ. ಚುನಾವಣೆ ನಂತರದಲ್ಲಿ ಈ ಸರ್ಕಾರ ಪತನವಾಗಬಹುದು ಎಂದು ಭವಿಷ್ಯ ನುಡಿದರು.
ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ, ರಾಜ್ಯದಲ್ಲಿನ ಗ್ಯಾರಂಟಿ ಯೋಜನೆಗಳು ಸ್ಥಗಿತವಾಗುತ್ತವೆ ಎಂಬ ಚರ್ಚೆಗೆ ಪ್ರತಿಕ್ರಿಯಿಸಿದ ಜಗದೀಶ ಶೆಟ್ಟರ್, ಅದು ಸುಳ್ಳು. ಬಿಜೆಪಿ ವಿರುದ್ಧ ಕಾಂಗ್ರೆಸ್‌ನವರು ಈ ರೀತಿಯ ಅಪಪ್ರಚಾರ ಮಾಡುತ್ತಲೇ ಇರುತ್ತಾರೆ ಎಂದು ಕಿಡಿಕಾರಿದರು.
ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಸೇರಿಕೊಂಡೇ ಪ್ರಚಾರ ನಡೆಸುತ್ತಿದ್ದೇವೆ. ನಾವು ಪ್ರವಾಸಕ್ಕೆ ಹೋದಲ್ಲಿ ಜೆಡಿಎಸ್ ಮುಖಂಡರು ಬೆಂಬಲ ಕೊಡುತ್ತಿದ್ದಾರೆ. ಇಬ್ಬರೂ ಸೇರಿಕೊಂಡೇ ಬೆಳಗಾವಿ ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಈ ಹಿಂದೆ ಜನತಾದಳದಲ್ಲಿದ್ದವರು ಜಾತ್ಯತೀತ ಜನತಾದಳ(ಜೆಡಿಎಸ್) ಕಟ್ಟಿದ್ದರು. ಜೆಡಿಎಸ್‌ಗೆ ಕಾಂಗ್ರೆಸ್ ವಿರೋಧಿ ನಿಲುವು ಹಿಂದಿನಿಂದಲೂ ಇದೆ. ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಇದೇ ಮೊದಲೇನಲ್ಲ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ–ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿತ್ತು. ಈಗ ಬಿಜೆಪಿಯ ರಾಷ್ಟ್ರೀಯ ನಾಯಕರ ಜತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಇದೊಂದು ನ್ಯಾಚುರಲ್ ಅಲಯನ್ಸ್. ಇನ್ನು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಬಗ್ಗೆ ಪ್ರಧಾನಿ ಮೋದಿ ಅಪಾರ ಗೌರವ ಹೊಂದಿದ್ದಾರೆ. ರಾಜ್ಯಮಟ್ಟದಲ್ಲಿ ಈಗಾಗಲೇ ಬಿಜೆಪಿ–ಜೆಡಿಎಸ್ ಸಮನ್ವಯ ಸಭೆ ನಡೆದಿದೆ. ಈಗ ಜಿಲ್ಲಾಮಟ್ಟದಲ್ಲೂ ಮಾಡಿದ್ದೇವೆ. ಮೋದಿ ಅವರನ್ನು ಮೂರನೇ ಸಲ ಪ್ರಧಾನಿ ಮಾಡಲು ಜೆಡಿಎಸ್‌ನವರು ಸಹ ಸಹಕರಿಸುತ್ತಿದ್ದಾರೆ ಎಂದು ಶೆಟ್ಟರ್ ಹೇಳಿದರು.
ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ಭದ್ರ ನೆಲೆ ಇಲ್ಲ. ಇದರಿಂದ ಬಿಜೆಪಿಗೆ ಲಾಭ ಏನು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಜಗದೀಶ ಶೆಟ್ಟರ್, ಯಾವುದೇ ಪಕ್ಷಕ್ಕೆ ಶಕ್ತಿ ಇಲ್ಲ ಎಂಬ ಮಾತನ್ನು ನಾನು ನಂಬುವುದಿಲ್ಲ. ಪ್ರತಿ ಕ್ಷೇತ್ರದಲ್ಲೂ ಆಯಾ ಪಕ್ಷಕ್ಕೆ ಶಕ್ತಿ ಇರುತ್ತದೆ. ಎಲ್ಲ ಕ್ಷೇತ್ರಗಳಲ್ಲಿ ಅವರು ಗೆಲ್ಲದಿರಬಹುದು. ಆದರೆ, ಹೆಚ್ಚಿನ ಮತ ಪಡೆದಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನವರು ಜತೆಗೆ ಚುನಾವಣೆ ಎದುರಿಸಿ ಗೆಲುವಿನ ಬಾವುಟ ಹಾರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಷ್ಟ್ರೀಯ ವಿಚಾರಧಾರೆ ಆಧರಿಸಿ ನಾವು ಚುನಾವಣೆ ಎದುರಿಸುತ್ತಿದ್ದೇವೆ. ಇದು ಜಾತಿ ಮೀರಿ ನಡೆಯುವ ಚುನಾವಣೆ. ಇಲ್ಲಿ ಜಾತಿಯ ವಿಚಾರ ಸದ್ದು ಮಾಡಲ್ಲ. ಕಾಸ್ಟ್ ಪ್ಲೇ ಕಾರ್ಡ್ ಯಾವುದೇ ರೀತಿ ಪರಿಣಾಮ ಬೀರಲ್ಲ. ಇಂದು ಹೊಲದಲ್ಲಿ ಕೆಲಸ ಮಾಡುವ ರೈತ ಮಹಿಳೆಯರು ದೇಶಕ್ಕೆ ಮೋದಿ ಅವರಂಥ ಪ್ರಧಾನಿಯೇ ಬೇಕು ಎನ್ನುತ್ತಿದ್ದಾರೆ. ಇಂಡಿಯಾ ಒಕ್ಕೂಟದಲ್ಲಿ ಮೋದಿ ಅವರಿಗೆ ಪರ್ಯಾಯ ಅಭ್ಯರ್ಥಿ ಇದ್ದಾರಾ? ಕಾಂಗ್ರೆಸ್‌ನವರಿಗೆ ಪ್ರಧಾನಿ ಅಭ್ಯರ್ಥಿ ಯಾರು ಅಂತಾನೇ ಗೊತ್ತಿಲ್ಲ. ಮೊದಲು ಅವರು ಪ್ರಧಾನಿ ಅಭ್ಯರ್ಥಿ ಯಾರೆಂದು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಹರ್ ಘರ್ ಗ್ಯಾರಂಟಿ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮಗೆ ಮೋದಿಯೇ ದೊಡ್ಡ ಗ್ಯಾರಂಟಿ ಎಂದ ಜಗದೀಶ ಶೆಟ್ಟರ್, ಬೆಳಗಾವಿಗೆ ಪ್ರಚಾರಕ್ಕೆ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ರಾಜ್ ಠಾಕ್ರೆ ಅವರಲ್ಲಿ ಮನವಿ ಮಾಡಿಕೊಂಡಿದ್ದೇನೆ. ಹಾಗಾಗಿ, ಅವರು ಪ್ರಚಾರಕ್ಕೆ ಬರಬಹುದು ಎಂದರು. ಇನ್ನು ಎಂಇಎಸ್ ಜತೆಗೆ ನೀವು ಮಾತುಕತೆ ಮಾಡಿದ್ದೀರಾ ಎಂಬ ಪ್ರಶ್ನೆಗೆ ಖಂಡಿತವಾಗಿಯೂ ಅವರ ಜೊತೆಗೂ ಮಾತನಾಡುತ್ತೇನೆ, ಅವರು ನಮಗೆ ಸಹಕಾರ ಕೊಡ್ತಾರೆ ಎನ್ನುವ ನಂಬಿಕೆಯಿದೆ ಎಂದರು.
ಮಾಜಿ ಶಾಸಕ ಮಹದೇವಪ್ಪ ಯಾದವಾಡ ಕಾಂಗ್ರೆಸ್ಗೆ ಹೋಗ್ತಾರಾ ಎಂಬ ಪ್ರಶ್ನೆಗೆ, ಈಗಾಗಲೇ ಯಾದವಾಡ ಜೊತೆಗೆ ಫೋನ್‌ನಲ್ಲಿ ಮಾತನಾಡಿರುವೆ, ನಾಳೆ ರಾಮದುರ್ಗಕ್ಕೆ ಹೋದಾಗ ಅವರನ್ನು ಭೇಟಿಯೂ ಆಗುವೆ. ಚಿಕ್ಕ ರೇವಣ್ಣ ಜೊತೆಗೂ ಮಾತಾಡ್ತಿನಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ. ಮಹದೇವಪ್ಪ ಯಾದವಾಡ ಕಾಂಗ್ರೆಸ್ಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಜೆಡಿಎಸ್ ಮುಖಂಡ ಶಂಕರ ಮಾಡಲಗಿ ಸೇರಿ ಮತ್ತಿತರರು ಇದ್ದರು.