ಗಂಗಾವತಿ(ಕೊಪ್ಪಳ): ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು ನನ್ನೊಂದಿಗೆ (ರೆಡ್ಡಿ) ಹೊಂದಾಣಿಕೆ ಮಾಡಿಕೊಂಡು ನನ್ನ ಸೋಲಿಗೆ ಕಾರಣರಾದರು ಎನ್ನುವುದನ್ನು ಇಕ್ಬಾಲ್ ಅನ್ಸಾರಿ ಪದೇ ಪದೇ ಪ್ರಸ್ತಾಪಿಸುತ್ತಾರೆ. ಆದರೆ ವಾಸ್ತವ ಬೇರೆ ಇದೆ. ನನ್ನೊಂದಿಗೆ ಕೈ ಜೋಡಿಸಿದ್ದು ಸ್ಥಳೀಯ ಕಾಂಗ್ರೆಸ್ ನಾಯಕರಲ್ಲ. ಸ್ವತಃ ಸಿದ್ದರಾಮಯ್ಯ ಅವರೇ ನನಗೆ ಸಾಥ್ ನೀಡಿದ್ದರು ಎಂದು ಶಾಸಕ ಜಿ.ಜನಾರ್ದನ ರೆಡ್ಡಿ ಹೊಸ ಬಾಂಬ್ ಸಿಡಿಸಿದ್ದಾರೆ.
ಒಳ ಒಪ್ಪಂದ ಆಗಿತ್ತು: ಗಂಗಾವತಿಯಲ್ಲಿಂದು ಆಯೋಜಿಸಿದ್ದ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದುಕೊಳ್ಳುವ ವಿಶ್ವಾಸ ಸ್ವತಃ ಕಾಂಗ್ರೆಸ್ ಪಕ್ಷಕ್ಕೂ ಇರಲಿಲ್ಲ. ಹೀಗಾಗಿ ಸ್ವತಃ ಸಿದ್ದರಾಮಯ್ಯ ನನ್ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು. ರೆಡ್ಡಿಯ ಕೆಆರ್ಪಿಪಿ ಎಲ್ಲಾದರೂ ಹತ್ತು ಕ್ಷೇತ್ರದಲ್ಲಿ ಗೆದ್ದುಬಿಟ್ಟರೆ ಸರ್ಕಾರ ರಚನೆಯ ಸಂದರ್ಭದಲ್ಲಿ ಅಗತ್ಯಕ್ಕಿರಲಿ ಎಂಬ ಕಾರಣಕ್ಕೆ ಸ್ವತಃ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ನನ್ನ ಮಧ್ಯೆ ಒಳ ಒಪ್ಪಂದವಾಗಿತ್ತು ಎಂದು ರೆಡ್ಡಿ ಬಹಿರಂಗಪಡಿಸಿದರು.
ಇದನ್ನು ಅರಿಯದ ಇಕ್ಬಾಲ್ ಅನ್ಸಾರಿ, ಸ್ಥಳೀಯ ಕಾಂಗ್ರೆಸ್ ನಾಯಕರು ರೆಡ್ಡಿಯೊಂದಿಗೆ ಬುಕ್ ಆಗಿದ್ದಾರೆ ಎಂದು ಭಾವಿಸಿ ಚುನಾವಣೆ ಮುಗಿದ ಬಳಿಕ ತಮ್ಮ ಮನೆ ಬಾಗಿಲು ಹಾಕಿದರು. ಎರಡು ದಿನಗಳ ಬಳಿಕ ಒಪನ್ ಮಾಡಿದ್ದರು ಎಂದು ರೆಡ್ಡಿ ಹೇಳಿದರು.
ಸಿದ್ದರಾಮಯ್ಯ ಮತ್ತು ನನ್ನ ನಡುವೆ ನಡೆದ ಒಳ ಒಪ್ಪಂದದಿಂದ ಸಿದ್ದರಾಮಯ್ಯ ಅಪ್ಪಿತಪ್ಪಿಯೂ ಗಂಗಾವತಿಗೆ ಪ್ರಚಾರಕ್ಕೆ ಬರಲಿಲ್ಲ. ಅಷ್ಟೇ ಅಲ್ಲ, ನನ್ನ ಪತ್ನಿ ಪ್ರತಿನಿಧಿಸಿದ್ದ ಬಳ್ಳಾರಿ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗಿರಲಿಲ್ಲ. ಈ ಬಗ್ಗೆ ಬೇಕಿದ್ದರೆ ಒಮ್ಮೆ ಪರಿಶೀಲಿಸಬಹುದು ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.
ಈ ಹಿಂದೆ ಬೆಂಗಳೂರಿನಿಂದ ಬಳ್ಳಾರಿವರೆಗೆ ನಡೆಸಿದ ಪಾದಯಾತ್ರೆ, ರಾಜಕೀಯ ಸೇರಿದಂತೆ ಎಲ್ಲವನ್ನೂ ಮರೆತು ಬಿಡುವಂತೆ ಸಿದ್ದರಾಮಯ್ಯ ಕೇಳಿದ್ದರು. ಇದೇ ಕಾರಣಕ್ಕೆ ಸಿದ್ದರಾಮಯ್ಯ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನನ್ನ ಬಗ್ಗೆ ಟೀಕೆ ಮಾಡಿಲ್ಲ. ಗಂಗಾವತಿಯಲ್ಲಿಯೂ ಮಾಡಿಲ್ಲ. ಆದರೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಗೆ ಕಣ್ಣೊರೆಸಬೇಕೆಂಬ ಕಾರಣಕ್ಕೆ ಲೋಕಸಭಾ ಚುನಾವಣೆ ಪ್ರಯುಕ್ತ ನಡೆದ ಸಮಾವೇಶದಲ್ಲಿ ಕಾಟಾಚಾರಕ್ಕಾಗಿ ಸಿದ್ದರಾಮಯ್ಯ, ನನ್ನ ಮೇಲೆ ಟೀಕೆ ಮಾಡಿದ್ದಾರೆ ಎಂದು ರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯರಿಗೆ ಅನ್ಯಾಯ ಮಾಡುವವರ ಜೊತೆ ಬಿಜೆಪಿ ಇರಲ್ಲ: ಅಮಿತ್ ಶಾ - Amit Shah