ಚಿತ್ರದುರ್ಗ: ಎಸ್ಸಿ ಮೀಸಲು ಕ್ಷೇತ್ರ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬೆಳಗ್ಗೆ 7 ರಿಂದ ಮತದಾನ ಆರಂಭವಾಗಿದೆ. ಎಲ್ಲೆಡೆ ಮತದಾನ ಚುರುಕಿನಿಂದ ನಡೆಯುತ್ತಿದೆ. ಆದರೆ, ಚಿತ್ರದುರ್ಗ ತಾಲೂಕಿನ ಸಿದ್ದಾಪುರ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ನಿರ್ಧಾರ ಮಾಡಿದ್ದಾರೆ.
ಬೆಳಿಗ್ಗೆ ಏಳು ಗಂಟೆಯಿಂದ ಮತದಾನ ಆರಂಭವಾದರೂ ಗ್ರಾಮಸ್ಥರು ಈವರೆಗೆ ಮತದಾನ ಮಾಡಲು ಮುಂದಾಗಿಲ್ಲ. ಗ್ರಾಮಸ್ಥರ ನಿರ್ಧಾರವು ಜಿಲ್ಲಾ ಸ್ವೀಪ್ ಸಮಿತಿಗೆ ತಲೆಬಿಸಿಯನ್ನು ತಂದಿಟ್ಟಿದೆ. ಗಣಿಭಾದಿತ ಪ್ರದೇಶ ಪಟ್ಟಿಯಿಂದ ಸಿದ್ದಾಪುರ ಗ್ರಾಮವನ್ನು ಕೈಬಿಟ್ಟಿದ್ದಕ್ಕೆ ಮತದಾನ ಮಾಡಲು ಹಿಂದೇಟು ಹಾಕಿದ್ದು, ನಮ್ಮ ಬೇಡಿಕೆ ಈಡೇರಿಸಿದರೆ ಮಾತ್ರ ಮತದಾನ ಮಾಡುತ್ತೇವೆ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಸಿದ್ದಾಪುರ ಗ್ರಾಮದ ಮತಗಟ್ಟೆ ಸಂಖ್ಯೆ 76ರಲ್ಲಿ ಈವರೆಗೆ ಮತದಾನ ಮಾಡದ ಗ್ರಾಮಸ್ಥರಿಗಾಗಿ ತಮ್ಮ ಹಕ್ಕು ಚಲಾಯಿಸುವಂತೆ ಅಧಿಕಾರಿಗಳು ಮನವಿ ಮಾಡಿದರೂ ಕೂಡ ಮತದಾರರು ಬಾರದೇ ಇರುವುದರಿಂದ ಸಿಬ್ಬಂದಿ ಮತಗಟ್ಟೆಯಲ್ಲಿ ಕಾದು ಕುಳಿತಿದ್ದಾರೆ.
ಈ ವೇಳೆ ಮಾತನಾಡಿದ ಗ್ರಾಮಸ್ಥರೊಬ್ಬರು, ಗಣಿಭಾದಿತ ಪ್ರದೇಶ ಪಟ್ಟಿಯಿಂದ ಸಿದ್ದಾಪುರ ಗ್ರಾಮವನ್ನು ಕೈಬಿಟ್ಟಿದ್ದಕ್ಕೆ ಮತದಾನ ಬಹಿಷ್ಕಾರ ಮಾಡಿದ್ದೇವೆ. ನಮ್ಮ ಬೇಡಿಕೆ ಈಡೇರಿಸುವವರೆಗೂ ಮತದಾನ ಮಾಡುವುದಿಲ್ಲ. ಇಡೀ ಗ್ರಾಮಸ್ಥರು ಮತದಾನ ಮಾಡಲ್ಲ ಎಂದು ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.