ಬೆಂಗಳೂರು : ಚುನಾವಣಾ ಪ್ರಚಾರದ ವೇಳೆ ಕಾರಿಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದ ಪ್ರಕಾಶ್ (63) ಕುಟುಂಬಸ್ಥರನ್ನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಜೊತೆಗೆ ಮಹಾದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್, ಬಿಜೆಪಿ ಕಾರ್ಯಕರ್ತರು ಸಹ ಪ್ರಕಾಶ್ ಅವರ ಮೃತದೇಹದ ಅಂತಿಮ ದರ್ಶನ ಪಡೆದರು.
ಈ ವೇಳೆ ಮಾತನಾಡಿದ ಶೋಭಾ ಕರಂದ್ಲಾಜೆ, 'ಪ್ರಕಾಶ್ ಅವರು ನಿರಂತರವಾಗಿ ಬಿಜೆಪಿ ಪಕ್ಷಕ್ಕಾಗಿ ದುಡಿದವರು, ನಿನ್ನೆಯೂ ಸಹ ನಮ್ಮದೇ ಪ್ರಚಾರ ಕಾರ್ಯಕ್ಕೆ ಹಾಜರಾಗುತ್ತಿದ್ದಾಗ ಅವಘಡ ಸಂಭವಿಸಿದೆ. ಇದರಿಂದ ನಮ್ಮ ಯಾರಲ್ಲಿಯೂ ಇಂದು ಹಬ್ಬದ ಸಂಭ್ರಮವಿಲ್ಲ. ಪ್ರಕಾಶ್ ಅವರ ಕುಟುಂಬದೊಂದಿಗೆ ನಾವು ಸದಾ ಇರುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ' ಎಂದು ತಿಳಿಸಿದರು.
ಘಟನೆ ಹಿನ್ನೆಲೆ : ಸೋಮವಾರ ಕೆ.ಆರ್.ಪುರಂ ಬಳಿ ನಡೆಯುತ್ತಿದ್ದ ಬಿಜೆಪಿಯ ಪ್ರಚಾರದ ರ್‍ಯಾಲಿಯಲ್ಲಿ ಸಾಕಷ್ಟು ಕಾರ್ಯಕರ್ತರು, ಬೆಂಬಲಿಗರು ಭಾಗಿಯಾಗಿದ್ದರು. ಈ ವೇಳೆ ನಿಂತಿದ್ದ ಕಾರೊಂದರ ಬಾಗಿಲು ತೆರೆಯುವ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಪ್ರಕಾಶ್ ಅವರ ದ್ವಿಚಕ್ರ ವಾಹನ ಡಿಕ್ಕಿಯಾಗಿತ್ತು. ಆ ರಭಸಕ್ಕೆ ನೆಲಕ್ಕೆ ಬಿದ್ದ ಅವರ ಮೇಲೆ ಹಿಂಬದಿಯಿಂದ ಬಂದ ಖಾಸಗಿ ಬಸ್ ಹರಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಪ್ರಕಾಶ್ ಅವರನ್ನು ತಕ್ಷಣ ಕೆ.ಆರ್.ಪುರಂ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಗಿತ್ತು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.