ಶಿವಮೊಗ್ಗ: ಮಲೆನಾಡಿನ ದಟ್ಟ ಕಾನನದಲ್ಲಿ ಅಪರೂಪಕ್ಕೆ ಕಾಣಸಿಗುವ ಕೆಂಪಳಿಲನ್ನು ಹೊಸನಗರ ತಾಲೂಕಿನ ಮೇಲಿನ ಬೆಸಿಗೆ ಗ್ರಾಮದ ಗೋಪಿನಾಥ್ ಹಾಗೂ ಅವರ ಮಕ್ಕಳು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಗೋಪಿನಾಥ್ ಅವರ ಶೆಡ್ಗೆ ಕೆಂಪಳಿಲೊಂದು ಗಾಯಗೊಂಡು ಬಂದಿತ್ತು. ಇದನ್ನು ಗಮನಿಸಿದ ಗೋಪಿನಾಥ್ ಅವರ ಪುತ್ರರಾದ ಪನ್ನಗ ಕುಂಬಾಶಿ(16) ಹಾಗೂ ಪಾರ್ಥ ಕುಂಬಾಶಿ(12) ಅವರು ರಕ್ಷಿಸಿದ್ದಾರೆ.
ಅದಕ್ಕೆ ಬೇಕಾದ ನೀರು, ಹಣ್ಣುಗಳನ್ನು ಕೊಟ್ಟು ಒಂದು ಪುಟ್ಟಿಯಲ್ಲಿ ಹಾಕಿಟ್ಟು ರಕ್ಷಿಸಿಟ್ಟಿದ್ದಾರೆ. ಅಳಿಲಿಗೆ ಗಾಯ ಆಗಿದ್ದನ್ನು ಗಮನಿಸಿ, ತಮ್ಮ ತಂದೆಗೆ ತಿಳಿಸಿದ್ದಾರೆ. ಕೆಂಪಳಿಲನ್ನು ಗಮನಿಸಿದ ಗೋಪಿನಾಥ್ ಅವರು ಇದಕ್ಕೆ ಚಿಕಿತ್ಸೆಯ ಅವಶ್ಯಕತೆ ಇರುವುದನ್ನು ಗಮನಿಸಿ, ತಕ್ಷಣ ಅರಣ್ಯ ಇಲಾಖೆಯವರನ್ನು ಸಂಪರ್ಕಿಸಿದ್ದಾರೆ. ಅರಣ್ಯ ಇಲಾಖೆಯವರು ಶಿವಮೊಗ್ಗದ ಸಿಂಹಧಾಮಕ್ಕೆ ಹೋಗಿ, ಅಲ್ಲಿ ಮೃಗಾಲಯ ಇರುವುದರಿಂದ ಕೆಂಪಳಿಲಿಗೆ ಚಿಕಿತ್ಸೆ ನೀಡಬಹುದೆಂದು ಎಂದು ಸಲಹೆ ನೀಡಿದ್ದಾರೆ.
ನಂತರ ಗೋಪಿನಾಥ್ ಹುಲಿ- ಸಿಂಹಧಾಮದ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅಪರೂಪದ ಈ ಪ್ರಾಣಿಯನ್ನು ತೆಗೆದುಕೊಂಡು ಹೋಗಲು ಅವರೇ ಮೇಲಿನ ಬೆಸಿಗೆ ಗ್ರಾಮಕ್ಕೆ ಹೋಗಿದ್ದಾರೆ. ಗೋಪಿನಾಥ್ ಅವರು ತಮ್ಮ ಗ್ರಾಮಸ್ಥರ ಸಮ್ಮುಖದಲ್ಲಿ ಹುಲಿ- ಸಿಂಹಧಾಮದ ಉಪ ಅರಣ್ಯಾಧಿಕಾರಿ ಯಶೋಧರ್ ಅವರಿಗೆ ಅಳಿಲನ್ನು ಹಸ್ತಾಂತರ ಮಾಡಿದ್ದಾರೆ. ಹಸ್ತಾಂತರ ಮಾಡುವ ಜೊತೆಯಲ್ಲಿ ಅದರ ಪೋಷಣೆಗಾಗಿ 500 ರೂ. ಹಣವನ್ನು ನೀಡಿದ್ದಾರೆ. ಸದ್ಯ ಕೆಂಪಳಿಲನ್ನು ಹುಲಿ- ಸಿಂಹಧಾಮದ ಅಧಿಕಾರಿಗಳು ಆರೈಕೆ ಮಾಡುತ್ತಿದ್ದಾರೆ.
ಈ ವೇಳೆ ಮಾತನಾಡಿದ ಗೋಪಿನಾಥ್, "ಅಪರೂಪದ ಈ ಪ್ರಾಣಿಯನ್ನು ಜನರು ಈ ಭಾಗದಲ್ಲಿ ಬೇಟೆಯಾಡಿ ತಿನ್ನಲು ಬಳಸುತ್ತಿದ್ದಾರೆ. ಈ ಪ್ರಾಣಿಯ ಸಂತತಿ ಉಳಿಯಬೇಕೆಂದು ನಾವು ಗಾಯಗೊಂಡಿದ್ದನ್ನು ರಕ್ಷಿಸಿ ಅರಣ್ಯಾಧಿಕಾರಿಗಳಿಗೆ ನೀಡಿದ್ದೇವೆ" ಎಂದು ತಿಳಿಸಿದ್ದಾರೆ.