ಶಿವಮೊಗ್ಗ: ಜಿಲ್ಲೆಯ ಬಿಜೆಪಿಯ ಹಿರಿಯ ಮುಖಂಡ, ವಿಧಾನ ಪರಿಷತ್ನ ಮಾಜಿ ಸದಸ್ಯ ಎಂ. ಬಿ. ಭಾನುಪ್ರಕಾಶ್ (69) ಇಂದು ನಿಧನರಾಗಿದ್ದಾರೆ. ಬಿಜೆಪಿ ವತಿಯಿಂದ ನಡೆದ ಪೆಟ್ರೋಲ್-ಡೀಸೆಲ್ ದರ ಏರಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಭಾಗಿಯಾಗಿದ್ದರು. ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಭಾನುಪ್ರಕಾಶ್ ಪ್ರತಿಭಟನೆಯ ನಂತರ ರಾಮನ ಭಜನೆ ನಡೆಸಿದರು. ಬಳಿಕ ಕಾರು ಹತ್ತುವಾಗ ಸಣ್ಣದಾಗಿ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ನಗರದ ಮ್ಯಾಕ್ಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಇಲ್ಲಿನ ವೈದ್ಯರು ತಕ್ಷಣ ಚಿಕಿತ್ಸೆಯನ್ನು ನೀಡಿದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ಭಾನುಪ್ರಕಾಶ್ ಸಾವನ್ನಪ್ಪಿದ್ದಾರೆ.
ಭಾನುಪ್ರಕಾಶ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದರು. ಬಿಜೆಪಿಯಿಂದ ರಾಜಕೀಯ ಪ್ರವೇಶ ಮಾಡಿದ ಅವರು, 1999 ರಲ್ಲಿ ಗಾಜನೂರು ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ರಾಜಕೀಯಕ್ಕೆ ಸೇರಿದ್ದರು. ನಂತರ 2013 ರಲ್ಲಿ ಬಿಜೆಪಿ ವಿಧಾನಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಪರಿಷತ್ ಅವಧಿ ಮುಗಿದ ನಂತರ ಇವರನ್ನು ಪಕ್ಷವು ಬಿಜೆಪಿ ರಾಜ್ಯ ಪ್ರಕೋಷ್ಠದ ಅಧ್ಯಕ್ಷರನ್ನಾಗಿ ನೇಮಿಸಿತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ ವೈ ರಾಘವೇಂದ್ರ ಪರ ಅಬ್ಬರದ ಪ್ರಚಾರ ನಡೆಸಿದ್ದರು. ಇವರು ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ, ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ, ಲೋಕಸಭೆಗೆ ಸ್ಪರ್ಧಿಸಿದ್ದರು. ಬಿಜೆಪಿಯ ಅನೇಕ ಚುನಾವಣೆಯ ಉಸ್ತುವಾರಿಯನ್ನು ನಿರ್ವಹಿಸಿದ್ದರು. ಭಾನುಪ್ರಕಾಶ್ ಅವರ ಅಂತಿಮ ಸಂಸ್ಕಾರ ಇಂದು ಸಂಜೆ ಅವರ ಹುಟ್ಟೂರು ಮತ್ತೂರಿನಲ್ಲಿ ನಡೆಯಲಿದೆ.
ಭಾನು ಪ್ರಕಾಶ್ ಬಗ್ಗೆ ಗಣ್ಯರ ಮಾತು: ಭಾನುಪ್ರಕಾಶ್ ಅವರಿಗೆ ಕೊನೆಯದಾಗಿ ಚಿಕಿತ್ಸೆ ನೀಡಿದ ಮ್ಯಾಕ್ಸ್ ಆಸ್ಪತ್ರೆ ಹೃದಯ ತಜ್ಞರಾದ ಡಾ.ಮಂಜುನಾಥ್ ಅವರು ಮಾತನಾಡಿ, ಭಾನುಪ್ರಕಾಶ್ ಅವರು ತೀವ್ರ ಹೃದಯಾಘಾತದಿಂದ ನಮ್ಮ ಆಸ್ಪತ್ರೆಗೆ ಬಂದಿದ್ದರು. ಅವರು ಆಸ್ಪತ್ರೆಗೆ ಬಂದಾಗ ಕಾರ್ಡಿಯಾಕ್ ಅರೆಸ್ಟ್ ತರದಲ್ಲಿ ಬಂದಿದ್ದರು. ಅವರು ಬಂದಾಗ ಪಲ್ಸ್ ರೇಟ್, ಹೃದಯ ಬಡಿತ, ಬಿಪಿ ಏನೂ ಸಹ ಇರಲಿಲ್ಲ. ಎಕೂ ಮಾಡಿ ನೋಡಿದಾಗ ಅದರಲ್ಲಿ ಏನೂ ಬರಲಿಲ್ಲ. ನಂತರ ನಾವು ಡಿಸಿ ಶಾಕ್ ಹಾಗೂ ಸಿಪಿಸಿ ಅನ್ನು ನೀಡಿದ್ದೆವು, ಆದರೂ ಅವರು ಯಾವುದಕ್ಕೂ ಸಹ ಸ್ಪಂದಿಸಲಿಲ್ಲ. ನಾವು ಇಂಜೆಕ್ಷನ್ ನೀಡಿ, ಔಷಧ ನೀಡಿದರೂ ಅವರು ಯಾವುದಕ್ಕೂ ಸಹ ಸ್ಪಂದಿಸಲಿಲ್ಲ. ಏಕಾಏಕಿ ಹೃದಯಸ್ತಂಭನ (Cardiac arrest) ಆದಾಗ ರಿಕವರಿ ಆಗೂದೇ ಕಷ್ಟ. ಮೆದುಳಿಗೆ ಮೂರ್ನಾಲ್ಕು ನಿಮಿಷ ರಕ್ತ ಸಂಚರಿಸದೇ ಅದು ಕೆಲಸ ಮಾಡಲ್ಲ. ನಮ್ಮ ಆಸ್ಪತ್ರೆಗೆ ಬರುವ ಮೊದಲೇ 10-15 ನಿಮಿಷಕ್ಕೂ ಹೆಚ್ಚು ಸಮಯ ಹೃದಯದ ಬಡಿತ ನಿಂತು ಹೋಗಿತ್ತು ಎಂದೆನ್ನುಸುತ್ತಿದೆ. ಇದರಿಂದ ನಾವು ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದರು.