ಕಾರವಾರ: ಅಂಕೋಲಾದ ಶಿರೂರು ಗುಡ್ಡ ಕುಸಿತ ಪ್ರದೇಶದ ಬಳಿ ಗಂಗಾವಳಿ ನದಿಯಿಂದ ಮಣ್ಣು ಬಗೆದಷ್ಟೂ ಅವಶೇಷಗಳು ಸಿಗುತ್ತಿವೆ. ಸೋಮವಾರದ ಕಾರ್ಯಾಚರಣೆಯಲ್ಲಿ ಲಾರಿಯ ಹಿಂಭಾಗದ ನಾಲ್ಕು ಚಕ್ರಗಳು ದೊರೆತಿವೆ. ಶನಿವಾರ ಡಿಎನ್‌ಎ ಪರೀಕ್ಷೆಗೆ ಕಳುಹಿಸಿದ್ದ ಮೂಳೆ ದನದ ಮೂಳೆ ಎಂದು ದೃಢಪಟ್ಟಿದೆ.
ನಾಲ್ಕನೇ ದಿನದ ಡ್ರೆಜ್ಜರ್ ಕಾರ್ಯಾಚರಣೆಯಲ್ಲಿ ನದಿಯಲ್ಲಿ ಟ್ರಕ್‌ನ ಹಿಂಬದಿಯ ಎಕ್ಸೆಲ್ ಸಹಿತ ನಾಲ್ಕು ಚಕ್ರಗಳು ದೊರೆತಿವೆ. ಲಕ್ಷ್ಮಣ ನಾಯ್ಕ ಹೊಟೇಲ್ ಇದ್ದ ಕೆಳಭಾಗದಲ್ಲೇ ಇವು ಕಂಡುಬಂದಿವೆ. ಆದರೆ ಯಾವ ಲಾರಿಗೆ ಸೇರಿದ್ದೆಂಬುದು ಪರಿಶೀಲನೆಯ ಬಳಿಕವೇ ತಿಳಿದು ಬರಬೇಕಿದೆ.
ಭಾನುವಾರದ ಕಾರ್ಯಾಚರಣೆಯಲ್ಲಿ ಮೂಳೆಯೊಂದು ಪತ್ತೆಯಾಗಿತ್ತು. ದೊಡ್ಡದಾಗಿದ್ದ ಈ ಮೂಳೆ ಜಾನುವಾರುಗಳಿದ್ದಿರಬಹುದು ಎಂದು ಅಂದಾಜಿಸಿ ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಇದು ಜಾನುವಾರುವಿನ ಮೂಳೆ ಎನ್ನುವುದು ಖಚಿತವಾಗಿದೆ. ಈ ಕುರಿತ ವರದಿ ಇನ್ನೆರಡು ದಿನದಲ್ಲಿ ಸಿಗಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಈವರೆಗೆ ಲಾರಿಯ ಕ್ಯಾಬಿನ್, ಮುಂಭಾಗದ ಎರಡು ಚಕ್ರ, ಇಂಜಿನ್ ಪತ್ತೆಯಾಗಿದೆ. ಅವುಗಳು ನಾಪತ್ತೆಯಾದ ವಾಹನಗಳದ್ದೇ ಎಂದು ಗುರುತಿಸಲಾಗಿದೆ. ಸೋಮವಾರ ತಮಿಳುನಾಡಿನ ಗ್ಯಾಸ್ ಟ್ಯಾಂಕರ್ ಇಂಜಿನ್ ಭಾಗಗಳು, ಹಿಂಭಾಗದ ಟಯರ್ಗಳು, ಹೈಪವರ್ ಲೈನ್ನ ತುಂಡಾದ ಕಂಬಗಳು ಲಾರಿಯ ವೈಪರ್, ಕಬ್ಬಿಣದ ಕೆಲವು ತುಂಡುಗಳು ಹಾಗು ಕೆಲವು ಬಟ್ಟೆಗಳು ದೊರೆತಿವೆ. ಇನ್ನೊಂದೆಡೆ, ಯಾವುದೇ ದೂರು ದಾಖಲಾಗದೇ ಇದ್ದರೂ ಕಾರ್ಯಾಚರಣೆ ವೇಳೆ ಆ್ಯಕ್ಟಿವಾ ಸ್ಕೂಟಿ ಹಾಗೂ ಹಿಂದೂಜಾ ಗ್ರೂಪ್‌ಗೆ ಸೇರಿದ ಲಾರಿಯೊಂದರ ಇಂಜಿನ್ ಪ್ಲೇಟ್ ಕೂಡ ಪತ್ತೆಯಾಗಿದೆ. ಈ ಕಂಪನಿಯ ಲಾರಿ ಕಣ್ಮರೆಯಾದ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.
ಸೋಮವಾರ ಡ್ರೆಜ್ಜರ್ ಕಾರ್ಯಾಚರಣೆಯನ್ನು ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ವೀಕ್ಷಿಸಿದರು. ಗುಡ್ಡ ಕುಸಿತ ಸಂದರ್ಭದಲ್ಲಿ ಇಂದ್ರಬಾಲನ್ ತಂಡ ಗಂಗಾವಳಿ ನದಿಯಲ್ಲಿ ನಾಲ್ಕು ಸ್ಥಳಗಳನ್ನು ಗುರುತಿಸಿತ್ತು. ಈ ಪೈಕಿ 2ರಲ್ಲಿ ಡ್ರೆಜ್ಜರ್ ಕಾರ್ಯಾಚರಣೆ ನಡೆಸಲಾಗುತ್ತಿದೆ. 1 ಮತ್ತು 2ನೇ ಪಾಯಿಂಟ್‌ನಲ್ಲಿ ಲಾರಿಯ ಅವಶೇಷಗಳು ಸಿಕ್ಕಿವೆ. 4ನೇ ಪಾಯಿಂಟ್‌ನಲ್ಲಿ ಅರ್ಜುನ್ ಚಲಾಯಿಸುತ್ತಿದ್ದ ಭಾರತ್ ಬೆಂಜ್ ಟ್ರಕ್ ಇದೆ. ಸುಮಾರು 4-5 ಅಡಿ ಆಳದಲ್ಲಿ ಟ್ರಕ್ ಇರುವುದು ಸ್ಕ್ಯಾನಿಂಗ್‌ನಲ್ಲಿ ತೋರಿಸಿದೆ.
"ಮಂಗಳವಾರ ನಾಲ್ಕನೇ ಪಾಯಿಂಟ್ ಸ್ಥಳ ಗುರುತಿಸಿ ಡ್ರೆಜ್ಜರ್ ಕಾರ್ಯಾಚರಣೆ ನಡೆಸುತ್ತೇವೆ. ಸ್ಕ್ಯಾನಿಂಗ್ ಗುರುತಿಸಿದ ಸ್ಥಳದಲ್ಲಿ ಅವಶೇಷ ಸಿಕ್ಕಿರುವುದು ಒಳ್ಳೆಯ ಬೆಳವಣಿಗೆ. ಟ್ರಯಲ್ ಸಾಧನವಾಗಿರುವ ಟೈಬೋರ್ಡ್ ಸ್ಕ್ಯಾನರ್ ಒಳ್ಳೆಯ ಫಲಿತಾಂಶ ನೀಡಿದೆ" ಎಂದು ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ತಿಳಿಸಿದರು.
ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ದುರಂತ: ಕಾರ್ಯಾಚರಣೆಯಲ್ಲಿ ಲಾರಿ ಇಂಜಿನ್, ಸ್ಕೂಟಿ, ಮೂಳೆ ಪತ್ತೆ - Shiruru Hill Collapse Operation