ಕಾರವಾರ: ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ದುರ್ಘಟನೆಯಲ್ಲಿ ನಾಪತ್ತೆಯಾಗಿದ್ದವರ ಪೈಕಿ ಮತ್ತಿಬ್ಬರ ಶವಗಳು ಪತ್ತೆಯಾಗಿದ್ದು, ಮೃತರ ಸಂಖ್ಯೆ 6ಕ್ಕೆ ಏರಿದೆ.
ಶಿರೂರು ಬಳಿ ಅಂಗಡಿ ನಡೆಸುತ್ತಿದ್ದ ಮೃತ ಲಕ್ಷ್ಮಣ ನಾಯ್ಕ ಅವರ ಪುತ್ರಿ ಅವಂತಿಕಾ (6) ಹಾಗೂ ತಮಿಳುನಾಡು ಮೂಲದ ಗ್ಯಾಸ್ ಟ್ಯಾಂಕರ್ ಚಾಲಕ ಮುರುಗನ್ (45) ಮೃತದೇಹಗಳು ಪತ್ತೆಯಾಗಿವೆ. ಕುಮಟಾ ತಾಲೂಕಿನ ಗಂಗೆಕೊಳ್ಳದ ದುಬ್ಬನಶಶಿ ಕಡಲತೀರದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಇನ್ನು ಟ್ಯಾಂಕರ್ ಚಾಲಕನ ಮೃತದೇಹ ಮಂಜಗುಣಿ ಬಳಿಯ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ. ಎರಡು ಮೃತದೇಹಗಳನ್ನು ಗೋಕರ್ಣ ಆಸ್ಪತ್ರೆಗೆ ಸಾಗಿಸಲಾಗಿದೆ.
ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರ ಮೇಲೆ ಜು.16 ರಂದು ಕುಸಿದ ಬೃಹತ್ ಗುಡ್ಡದಿಂದ ಹೆದ್ದಾರಿ ಪಕ್ಕದಲ್ಲಿ ಹೋಟೆಲ್ ನಡೆಸುತ್ತಿದ್ದ ಒಂದೇ ಕುಟುಂಬದ 6 ಮಂದಿ ಸೇರಿ, ಟ್ಯಾಂಕರ್ ಚಾಲಕರು, ಗ್ರಾಹಕರು ನಾಪತ್ತೆಯಾಗಿದ್ದರು. ಆದರೆ ಎಷ್ಟು ಜನ ನಾಪತ್ತೆಯಾಗಿದ್ದಾರೆ ಎಂಬ ನಿಖರತೆ ಈವರೆಗೆ ಸ್ಪಷ್ಟವಾಗಿಲ್ಲ. ಜು.16ರ ರಾತ್ರಿ ವೇಳೆ ಗೋಕರ್ಣದ ಬಳಿ ಗಂಗಾವಳಿ ನದಿಯಲ್ಲಿ ನಾಲ್ಕು ಮೃತದೇಹಗಳು ಪತ್ತೆಯಾಗಿದ್ದವು. ಇಂದು ಮತ್ತೆ ಎರಡು ಮೃತದೇಹಗಳು ಪತ್ತೆಯಾಗಿವೆ.
ನೀರಿನಲ್ಲಿ ಮುಳುಗಿದ್ದವನ ಶವ ಪತ್ತೆ: ಮತ್ತೊಂದು ಘಟನೆಯಲ್ಲಿ ಕಾರವಾರ ತಾಲೂಕಿನ ಚೆಂಡಿಯಾದ ವ್ಯಕ್ತಿಯೋರ್ವ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದು, ಮೃತದೇಹ ಪತ್ತೆಯಾಗಿದೆ. ಅನಿಲ ಪೆಡ್ನೇಕರ (54) ಮೃತ ವ್ಯಕ್ತಿ. ಚೆಂಡಿಯಾದ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದ ಪೆಡ್ನೇಕರ ಮಂಗಳವಾರ ಸಂಜೆ ಹಸು ಹುಡುಕಲು ಹಳ್ಳದ ಕಡೆಗೆ ಹೋಗಿದ್ದರು. ಬಳಿಕ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದರು. ಬುಧವಾರ ಮೃತದೇಹ ಪತ್ತೆಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.