ಕಾರವಾರ: ಅಂಕೋಲಾದ ಶಿರೂರಿನಲ್ಲಿ ಇತ್ತೀಚಿಗೆ ಸಂಭವಿಸಿದ್ದ ಗುಡ್ಡ ಕುಸಿತ ಘಟನೆಯಲ್ಲಿ ನಾಪತ್ತೆಯಾಗಿದ್ದ ಸಣ್ಣಿ ಹನುಮಂತ ಗೌಡ (57) ಎಂಬ ಮಹಿಳೆಯ ಶವ 8 ದಿನಗಳ ಬಳಿಕ ದೊರೆತಿದೆ. ಇವರು ಗಂಗಾವಳಿ ನದಿಯ ಗಂಗೆಕೊಳ್ಳ ಸಮೀಪದಿಂದ ಕಾಣೆಯಾಗಿದ್ದರು.
ನಾಪತ್ತೆಯಾದ 11 ಮಂದಿಯ ಪೈಕಿ 8 ಮೃತದೇಹಗಳು ಸಿಕ್ಕಿವೆ. ಕೇರಳದ ಲಾರಿ ಚಾಲಕ ಸೇರಿದಂತೆ ಇನ್ನೂ ಮೂವರಿಗೆ ಸೇನಾಪಡೆ, ಎನ್‌ಡಿಆರ್‌ಎಫ್, ಎಸ್ಡಿಆರ್ಎಫ್, ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ಮುಂದುವರಿಸಿದ್ದಾರೆ.
ಗಂಗಾವಳಿ ನದಿಯಲ್ಲಿ ತೀವ್ರ ಹುಡುಕಾಟ: ಗುಡ್ಡ ಕುಸಿತದಿಂದ ನಾಪತ್ತೆಯಾದವರಿಗಾಗಿ ಗಂಗಾವಳಿ ನದಿಯಲ್ಲಿ ಸೇನೆ ಹಾಗೂ ನೌಕಾಪಡೆಯ ಮುಳುಗು ತಜ್ಞರಿಂದ ತೀವ್ರ ಹುಡುಕಾಟ ಮುಂದುವರಿಸಲಾಗಿದೆ. ಹೆದ್ದಾರಿ ಮೇಲೆ ನಾಪತ್ತೆಯಾದವರಿಗೆ ಹಾಗೂ ಲಾರಿಗಾಗಿ ಹುಡುಕಾಟ ನಡೆಸಿದ್ದು, ಯಾವುದೇ ಸುಳಿವು ಪತ್ತೆಯಾಗದ ಕಾರಣ ಬಹುತೇಕ ಕಾರ್ಯಾಚರಣೆ ಮುಕ್ತಾಯಗೊಳಿಸಲಾಗಿದೆ. ಆದರೆ, ಭೂಕುಸಿತ ಘಟನೆಯ ದಿನದ ಇಸ್ರೋ ಉಪಗ್ರಹ ಚಿತ್ರಗಳ ಪ್ರಕಾರ ಲಾರಿ ನೀರಿಗೆ ಬಿದ್ದಿರುವ ಸಾಧ್ಯತೆ ಇದೆ. ಈ ಕಾರಣದಿಂದ ಸೇನಾ ತಂಡವು ಫೆರೆಕ್ಸ್ ಲೊಕೇಟರ್ - GPR (ಗ್ರೌಂಡ್ ಪೆನೆಟ್ರೇಟಿಂಗ್ ರಡಾರ್) ಎಂಬ ತಂತ್ರಜ್ಞಾನವನ್ನು ಬಳಸಿ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಇದು ನೀರು ಮತ್ತು ಮಣ್ಣಿನ ಅಡಿಯಲ್ಲಿರುವ ಲೋಹಗಳನ್ನು ಪತ್ತೆ ಹಚ್ಚುವ ಒಂದು ನಿರ್ದಿಷ್ಟ ಸಾಧನವಾಗಿದೆ. ಗಂಗಾವಳಿ ನದಿಯೊಳಗೆ ಲೋಹದ ಕೆಲವು ಕುರುಹುಗಳಿರುವುದನ್ನು ಕಾರ್ಯಾಚರಣೆಯ ವೇಳೆ ಪತ್ತೆಹಚ್ಚಲಾಗಿದೆ. ಈ ಕಾರಣದಿಂದ ನೌಕಾಪಡೆಯ ಮುಳುಗು ತಜ್ಞರು ಗಂಗಾವಳಿ ನದಿಯಲ್ಲಿ ಮುಳುಗಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
6 ಬೋಟ್ಗಳಲ್ಲಿ 20ಕ್ಕೂ ಅಧಿಕ ಮಂದಿ ನೌಕಾಪಡೆ, ಸೇನಾಪಡೆಯ 30, NDRF, SDRF ಸಿಬ್ಬಂದಿ ಹುಡುಕಾಟದಲ್ಲಿ ನಿರತರಾಗಿದ್ದು ಉಳಿದ ಸಿಬ್ಬಂದಿ ನದಿ ದಂಡೆಯಲ್ಲಿರುವ ಮಣ್ಣಿನಲ್ಲಿ ತೀವ್ರ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಇನ್ನು ರಂಜಿತ್ ಇಸ್ರೇಲ್ ರಕ್ಷಣಾ ಕಾರ್ಯಾಚರಣೆಗೆ ಅವಕಾಶವಿಲ್ಲ. ಸ್ವಯಂಸೇವಕರ ಸಹಭಾಗಿತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯಲ್ಲ ಎಂದು ಎಸ್ಪಿ ತಿಳಿಸಿದ್ದಾರೆ. ಸೇನೆ, ನೌಕಾಪಡೆ ಮತ್ತು ಎನ್‌ಡಿಆರ್‌ಎಫ್ ಮಾತ್ರ ಶೋಧ ನಡೆಸಲಿವೆ. ದುರಂತ ನಡೆದ ಸ್ಥಳಕ್ಕೆ ಪತ್ರಕರ್ತರಿಗೂ ಅವಕಾಶವಿಲ್ಲ. ಅರ್ಜುನ್ ಸೋದರ ಸಂಬಂಧಿಗೆ ಮಾತ್ರ ಕಾರ್ಯಾಚರಣೆ ಸ್ಥಳಕ್ಕೆ ತೆರಳಲು ಅವಕಾಶ ನೀಡಲಾಗಿದೆ.