ಶಿವಮೊಗ್ಗ: ಅಯೋಧ್ಯೆಯಲ್ಲಿ ಜನವರಿ 22 ರಂದು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿದ್ದು, ದೇಶಾದ್ಯಂತ ಶ್ರೀರಾಮನ ಆರಾಧಿಸುತ್ತ ಜನರು ಪೂಜೆ, ಜಪ ಮಾಡುವದರಲ್ಲಿ ತಲ್ಲೀನರಾಗಿದ್ದಾರೆ.
ಆದರೆ, ಶಿವಮೊಗ್ಗ ಜಿಲ್ಲೆಯ ಈಸೂರು ಗ್ರಾಮದಲ್ಲಿ 20 ವರ್ಷಗಳ ಹಿಂದೆ ಭಕ್ತರೊಬ್ಬರು ಶ್ರೀರಾಮ ಮಂದಿರ ನಿರ್ಮಿಸಿದ್ದರು. ಅರೇ ಇದೇನು ಎಂದು ಆಶ್ಚರ್ಯ ಪಡುತ್ತಿದ್ದೀರಾ?. ಹೌದು.. ಈ ರಾಮಭಕ್ತರು ತಮ್ಮ ಮನೆಯ ಹೆಬ್ಬಾಗಿಲಿನ ಮೇಲೆ 20 ವರ್ಷಗಳ ಹಿಂದೆ ಶ್ರೀರಾಮ ಮಂದಿರ ನಿರ್ಮಿಸಿದ್ದು, ದಿನ ನಿತ್ಯ ಪೂಜೆ ಮಾಡಿಕೊಂಡು ಬರುತ್ತಿರುವುದು ಈಗ ಬೆಳಕಿಗೆ ಬಂದಿದೆ.
ಹಿಂದೆ ಬ್ರಿಟಿಷರ ವಿರುದ್ದ ಹೋರಾಡಿ ಭಾರತದ ಮೊದಲ ಸ್ವಾತಂತ್ರ್ಯ ಗ್ರಾಮ ಎಂದು ಘೋಷಿಸಿದ್ದ ಶಿಕಾರಿಪುರ ತಾಲೂಕಿನ ಈಸೂರಿನ ಮಹಾದೇವಪ್ಪ ಭಕ್ತರೊಬ್ಬರು ಮನೆಯ ಬಾಗಿಲಿನಲ್ಲಿ ಶ್ರೀರಾಮ ಮಂದಿರ ನಿರ್ಮಿಸಿದವರು. 2004 ರಲ್ಲಿ ತಮ್ಮ ಬಾಗಿಲಲ್ಲಿ ಶ್ರೀರಾಮ ಮಂದಿರ ಕೆತ್ತಿಸಿದ್ದರು. ಶ್ರೀರಾಮಮಂದಿರದ ಚಿತ್ರಕ್ಕಾಗಿ ಬೆಂಗಳೂರಿಗೆ ಹೋಗಿ ಅಲ್ಲಿಂದ ಒಂದು ಪೋಟೊ ತಂದು ಅದರಂತೆ ತಮ್ಮ ಮನೆಯಲ್ಲಿ ಇದ್ದ ಮರದಿಂದ ಕೆತ್ತಿಸಿದ್ದರು. ಅಂದಿನಿಂದ ಅವರ ಮನೆಯ ದೇವರ ಕೋಣೆಯಲ್ಲಿ ಹೇಗೆ ದೇವರಿಗೆ ಪೂಜೆ ನಡೆಯುತ್ತದೆಯೋ, ಅದೇ ರೀತಿ ಬಾಗಿಲ ಮೇಲಿರುವ ಶ್ರೀರಾಮ ಮಂದಿರಕ್ಕೂ ಪೂಜೆ ಸಲ್ಲಿಸಿಕೊಂಡು ಬರಲಾಗುತ್ತಿದೆ.
ಮಹಾದೇವಪ್ಪನವರು ಈಗ ಸ್ವರ್ಗಸ್ಥರಾಗಿದ್ದು, ಅವರ ಮಗ ಪಶುವೈದ್ಯ ಡಾ.ರವಿಕುಮಾರ್ ಅವರು ತಮ್ಮ ತಂದೆಯ ಆದರ್ಶವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಈಗ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ಆಗುತ್ತಿದ್ದು, ಈ ವೇಳೆ ಮಹಾದೇವಪ್ಪ ಕೆತ್ತಿಸಿದ್ದ ಈಸೂರಿನ ರಾಮಮಂದಿರ ಮಹತ್ವ ಪಡೆದಿದ್ದು, ಗ್ರಾಮದ ಜನರು ವೀಕ್ಷಿಸಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಶ್ರೀರಾಮ ಮಂದಿರ ನಿರ್ಮಾಣ ತಂದೆಯ ಕನಸಾಗಿತ್ತು: ಡಾ.ರವಿಕುಮಾರ್ ಈಟಿವಿ ಭಾರತದೊಂದಿಗೆ ಮಾತನಾಡಿ, ಅಯೋಧ್ಯೆ ರಾಮಮಂದಿರದ ನಮ್ಮ ಮನೆಯ ಬಾಗಿಲ ಮೇಲೆ ಕೆತ್ತಿಸಬೇಕು ಎನ್ನುವುದು ನಮ್ಮ ತಂದೆ ಮಹಾದೇವಪ್ಪನವರ ಮಹದಾಸೆ ಆಗಿತ್ತು. ಮನೆಯಲ್ಲಿದ್ದ ಮರದ ತುಂಡುಗಳನ್ನು ಶಿಲ್ಪಿಗಳಿಗೆ ನೀಡಿ ಶ್ರೀರಾಮ ಮಂದಿರವನ್ನು 20 ವರ್ಷದ ಹಿಂದೆಯೇ ನಮ್ಮ ಮನೆಯ ಬಾಗಿಲ ಮೇಲೆ ಕೆತ್ತಿಸಿದ್ದರು. 2004 ರ ಜನವರಿ 15 ರಂದು ನಮ್ಮ ತಂದೆ ಮನೆಯ ಬಾಗಿಲನ್ನು ಮನೆಗೆ ಹಾಕಿಸಿದರು. ರಾಮಮಂದಿರ ನಿರ್ಮಾಣ ಮಾಡುವ ಕನಸನ್ನು ನಮ್ಮ ತಂದೆ ಅಂದು ಕಂಡಿದ್ದರು.
ಈಗ ಅದು 140 ಕೋಟಿ ಜನರ ಆಸೆಯಂತೆ ನಾಡಿದ್ದು ರಾಮಮಂದಿರ ಉದ್ಘಾಟನೆ ಆಗುತ್ತಿದೆ. ನಮ್ಮ ತಂದೆ ಮೊದಲಿನಿಂದಲೂ ಸಹ ರಾಮಭಕ್ತರು, ಅವರು ರಾಮಾಯಾಣ ಪಾರಾಯಣ ಮಾಡುತ್ತಿದ್ದರು. ಇದರಿಂದ ಅವರು ಬೆಂಗಳೂರಿಗೆ ಹೋಗಿ ಅಲ್ಲಿ ರಾಮಮಂದಿರದ ಪೋಟೊ ತೆಗೆದುಕೊಂಡು ಬಂದು ಮೊದಲು ಓರ್ವ ಚಿತ್ರಗಾರನಿಂದ ಅದನ್ನು ಚಿತ್ರಿಸಿ, ನಂತರ ಮರಗೆಲಸ ಮಾಡುವವರಿಂದ ಅದನ್ನು ಕೆತ್ತಿಸಿದ್ದರು. ಈಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಆದರೆ 20 ವರ್ಷದ ಹಿಂದೆಯೇ ನಮ್ಮೂರಿಗೆ, ನಮ್ಮ ಮನೆಯಲ್ಲಿ ರಾಮಮಂದಿರ ನಿರ್ಮಾಣವಾಗಿತ್ತು. ಇಂತಹ ಮನೆಯಲ್ಲಿ ನಾವು ವಾಸ ಮಾಡುತ್ತಿದ್ದೇವೆ ನಮಗೆ ಹೆಮ್ಮೆ ಅನಿಸುತ್ತಿದೆ ಎಂದು ತಿಳಿಸಿದ್ದಾರೆ.
ನಿತ್ಯ ಪೂಜೆ: ಭಾರತೀಯ ಸನಾತನ ಧರ್ಮದಲ್ಲಿ ಶ್ರೀರಾಮನಿಗೆ ಮೊದಲ ಆದ್ಯತೆ ನೀಡಲಾಗಿದೆ. ನಮ್ಮ ಮನೆಯವರಿಗೆ ಕಳೆದ 20 ವರ್ಷದ ಹಿಂದೆ ಈ ರಾಮಮಂದಿರ ವಿಷಯ ತಲೆಗೆ ಹೊಳೆದಿದ್ದು ನಮಗೆ ತುಂಬ ಖುಷಿಯಾದ ವಿಷಯ. ನಮ್ಮ ಮನೆಯ ಮರದ ರಾಮಮಂದಿರ ನೋಡಿದರೆ, ನಮಗೆ ದೈವಿ ಸ್ವರೂಪವನ್ನು ನೋಡಿದಂತೆ ಆಗುತ್ತದೆ. ಪ್ರತಿ ದಿನ ಪೂಜೆ ಮಾಡುತ್ತೆವೆ ಎನ್ನುತ್ತಾರೆ ಡಾ.ರವಿ ಕುಮಾರ್ ಪತ್ನಿ ಲೀನಾ.
ಬಾಗಿಲ ಮೇಲೆ ಶ್ರೀರಾಮ ಮಂದಿರ ನೋಡಿ ಖುಷಿ: ಗ್ರಾಮಸ್ಥ ಹುಚ್ಚರಾಯಪ್ಪನವರು ಮಾತನಾಡಿ, ದೇಶಾದ್ಯಂತ ಶ್ರೀರಾಮಮಂದಿರ ಉದ್ಘಾಟನೆಯ ಸಂಭ್ರಮ ಮನೆಮಾಡಿದೆ. ಆದರೆ ನಮ್ಮ ಗ್ರಾಮದ ಡಾ. ರವಿ ಕುಮಾರ್ ಅವರ ತಂದೆ ಮಹಾದೇವಪ್ಪ 20 ವರ್ಷದ ಹಿಂದೆಯೇ ತಮ್ಮ ಮನೆ ಬಾಗಿಲಲ್ಲಿ ಶ್ರೀರಾಮ ಹಾಗೂ ರಾಮಮಂದಿರವನ್ನು ಕೆತ್ತಿಸಿದ್ದರು. ಇದು ನಮ್ಮೂರಿನ ಹೆಮ್ಮೆಯಾಗಿದೆ. ಡಾ.ರವಿ ಕುಮಾರ್ ಅವರ ಮನೆಯ ಬಾಗಿಲಲ್ಲೆ ರಾಮಮಂದಿರ ಇರುವುದನ್ನು ನೋಡಿ ಖುಷಿ ಪಡುತ್ತೇವೆ.ಅಯೋಧ್ಯೆಗೆ ಹೋಗಲು ಆಗದ ನಮಗೆ ನಾವು ಇಲ್ಲೆ ರಾಮಮಂದಿರ ನೋಡುತ್ತೆವೆ ಎಂದು ಸಂತಸ ವ್ಯಕ್ತಪಡಿಸಿದರು.
ಇದನ್ನೂಓದಿ:12 ವರ್ಷದ ಬಳಿಕ ಬಣ್ಣ ಹಚ್ಚಿ ರಾಮಾಯಣ ಕಥಾ ಪ್ರಸಂಗ ಪ್ರದರ್ಶಿಸಲು ಮುಂದಾದ ಹಗಲು ವೇಷಗಾರರು