ಹಾವೇರಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ರಂಗೇರಿದೆ. ಚುನಾವಣೆಯ ನಿರ್ಣಾಯಕವಾಗಲಿರುವ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ನಡೆ ಇಂದು ಬಹಿರಂಗವಾಗಲಿದೆ. ಇಂದು ನಾಮಪತ್ರ ವಾಪಸಾತಿಗೆ ಕೊನೆಯ ದಿನವಾಗಿದ್ದು, ಮಧ್ಯಾಹ್ನ 3 ಗಂಟೆ ಒಳಗೆ ನಾಮಪತ್ರ ವಾಪಸ್ ಪಡೆಯಲು ಅವಕಾಶವಿದೆ. ಖಾದ್ರಿ ಬೆಂಬಲಿಗರು ನಾಮಪತ್ರ ವಾಪಸ್ ಪಡೆಯದಂತೆ ಪಟ್ಟುಹಿಡಿದಿದ್ದಾರೆ. ಇತ್ತ ಕಾಂಗ್ರೆಸ್ ಅಜ್ಜಂಪೀರ್ ಖಾದ್ರಿಯ ಜೊತೆಗೆ ಸಚಿವ ಜಮೀರ್ ಅಹ್ಮದ್ ಅವರನ್ನು ಕಳುಹಿಸಿ ನಾಮಪತ್ರ ವಾಪಸ್ ಪಡೆಯುವಂತೆ ಮನವೊಲಿಸುವ ಟಾಸ್ಕ್ ನೀಡಿದೆ.
ಇದೀಗ ಖಾದ್ರಿ ಬಂಡಾಯ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಇಂದು ಸಚಿವ ಜಮೀರ್ ಅಹ್ಮದ್ ಸಮ್ಮುಖದಲ್ಲಿ ಖಾದ್ರಿ ನಾಮಪತ್ರ ವಾಪಸ್ ಪಡೆಯುತ್ತಾರಾ? ಬೆಂಬಲಿಗರ ಒತ್ತಾಯಕ್ಕೆ ಮಣಿದು ಚುನಾವಣಾ ಕಣದಲ್ಲಿ ಉಳಿಯುತ್ತಾರಾ? ಎಂಬುದು ನಿರ್ಣಯವಾಗಲಿದೆ.
10 ಗಂಟೆಗೆ ಖಾಸಗಿ ಹೋಟೆಲ್ನಲ್ಲಿ ಬೆಂಬಲಿಗರ ಸಭೆ: ಖಾದ್ರಿ ಜೊತೆ ಈಗಾಗಲೇ ಹುಬ್ಬಳ್ಳಿಗೆ ಬಂದಿರುವ ಸಚಿವ ಜಮೀರ್ ಅಹ್ಮದ್, ಹುಬ್ಬಳ್ಳಿಯಿಂದ ತಡಸ ಗ್ರಾಮದ ಬಳಿ ಇರುವ ಖಾಸಗಿ ಹೋಟೆಲ್ಗೆ ಆಗಮಿಸಲಿದ್ದಾರೆ. ಖಾದ್ರಿ ಹಾಗೂ ಜಮೀರ್ ಬೆಳಗ್ಗೆ 10 ಗಂಟೆಗೆ ಖಾಸಗಿ ಹೋಟೆಲ್ನಲ್ಲಿ ಬೆಂಬಲಿಗರ ಸಭೆ ನಡೆಸಲಿದ್ದಾರೆ. ಮೊದಲು ಬೆಂಬಲಿಗರ ಮನವೊಲಿಸಿ ಬಳಿಕ ನಾಮಪತ್ರ ವಾಪಸ್ ಪಡೆಯುವ ನಿರ್ಧಾರದಲ್ಲಿ ಖಾದ್ರಿ ಮತ್ತು ಜಮೀರ್ ಇದ್ದಾರೆ. ನಂತರ ಶಿಗ್ಗಾವಿ ಪಟ್ಟಣದಲ್ಲಿರುವ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಖಾದ್ರಿ ನಾಮಪತ್ರ ವಾಪಸ್ ಪಡೆಯುವ ಸಾಧ್ಯತೆ ಇದೆ.
ಸಚಿವ ಜಮೀರ್ ಅಹ್ಮದ್ ಸಮ್ಮುಖದಲ್ಲಿ ಖಾದ್ರಿ ನಾಮಪತ್ರ ವಾಪಸ್ ಪಡೆಯಲಿದ್ದಾರೆ. ಖಾದ್ರಿಗೆ ಉನ್ನತ ಸ್ಥಾನ ಮಾನದ ಭರವಸೆಯನ್ನ ಕಾಂಗ್ರೆಸ್ ನಾಯಕರು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಕೆಶಿ, ಜಮೀರ್ ಒತ್ತಾಯಕ್ಕೆ ಕಟ್ಟುಬಿದ್ದು ಖಾದ್ರಿ ನಾಮಪತ್ರ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ. ಖಾದ್ರಿ ನಾಮಪತ್ರ ವಾಪಸ್ ಪಡೆಯುವವರೆಗೂ ಜೊತೆಗಿದ್ದು, ಬೆಂಬಲಿಗರ ಮನವೊಲಿಸುವ ಟಾಸ್ಕ್ ವಹಿಸಿಕೊಂಡಿರುವ ಜಮೀರ್, ಖಾದ್ರಿ ಅವರನ್ನು ಬಿಟ್ಟು ಕದಲುತ್ತಿಲ್ಲ.
ಖಾದ್ರಿ ನಾಮಪತ್ರ ವಾಪಸ್ ಪಡೆದರೆ ಭರತ್ ಬೊಮ್ಮಾಯಿಗೆ ಗೆಲುವು ಕಷ್ಟವಾಗಲಿದೆ. ಖಾದ್ರಿ ಕಣದಲ್ಲಿ ಉಳಿದರೆ ಅಲ್ಪಸಂಖ್ಯಾತ ಮತಗಳು ಇಬ್ಭಾಗಗೊಂಡು ಭರತ್ ಬೊಮ್ಮಾಯಿ ಗೆಲುವು ಸುಲಭವಾಗಲಿದೆ. ಇದಕ್ಕೆಲ್ಲ ಇಂದು ಮಧ್ಯಾಹ್ನ ಪೂರ್ಣವಿರಾಮ ಬೀಳಲಿದೆ. ಮಧ್ಯಾಹ್ನದ ನಂತರ ಸ್ಪರ್ಧಾಕಣದ ಸ್ಪಷ್ಟ ಚಿತ್ರಣ ಸಿಗಲಿದೆ.
ಸ್ವ ಇಚ್ಛೆಯಿಂದ ಖಾದ್ರಿ ನಾಮಪತ್ರ ವಾಪಸ್: ಮಂಗಳವಾರ ಅಜ್ಜಂಪೀರ್ ಖಾದ್ರಿ ಜೊತೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣ ನಿಲ್ದಾಣದಲ್ಲಿ ಬಂದಿಳಿದಿದ ಸಚಿವ ಜಮೀರ್ ಅಹ್ಮದ್ ಖಾನ್, "ಮೂರು ದಿನಗಳಿಂದ ಅಜ್ಜಂಪೀರ್ ಖಾದ್ರಿ ನನ್ನ ಜೊತೆಗೆ ಬೆಂಗಳೂರಲ್ಲಿ ಇದ್ದಾರೆ. ಟಿಕೆಟ್ ಕೊಟ್ಟಿಲ್ಲ ಅಂತ ಎಲ್ಲೋ ಒಂದು ಕಡೆ ಅಸಮಾಧಾನ ಇತ್ತು. ಅಭಿಮಾನಿಗಳು ನಾಮಪತ್ರ ಕೊಡಲೇಬೇಕು ಅಂತ ಮಾಡಿಸಿದ್ದಾರೆ. ಈಗ ಒಪ್ಪಿಕೊಂಡು ನಾಳೆ ನಾಮಪತ್ರ ಹಿಂದೆ ಪಡೆಯುತ್ತಿದ್ದಾರೆ" ಎಂದು ಹೇಳಿದ್ದರು.
"ಖಾದ್ರಿ ನಾಲ್ಕು ಬಾರಿ ಸೋತಿದ್ದಾರೆ. ಕಳೆದ ಬಾರಿ ಪಠಾಣ್ಗೆ ಕೊಟ್ಟಿದ್ದೆವು. ಸಿಂಪತಿ ಇದೆ ಅಂತ ಕೊಡಿ ಅಂದ್ರು ಕೊಡೋಕೆ ಆಗಿಲ್ಲ. ಕಾಂಗ್ರೆಸ್ ಪಕ್ಷ ಗೆಲ್ಲಿಸಲು ಪಣ ತೊಟ್ಟಿದ್ದೇನೆ ಅಂತ ಅವರೇ ಸ್ವಇಚ್ಛೆಯಿಂದ ನಾಮಪತ್ರ ಹಿಂದೆ ಪಡೆಯುತ್ತಿದ್ದಾರೆ. ಟಿಕೆಟ್ ಕೇಳೋದು ತಪ್ಪೇನಿಲ್ಲ, ಸಿಕ್ಕಿಲ್ಲ ಅಷ್ಟೇ. ಟಿಕೆಟ್ ವಿಚಾರ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಈ ಬಾರಿ ನೂರಕ್ಕೆ ನೂರು ಶಿಗ್ಗಾಂವಿಯಲ್ಲಿ ನಾವೇ ಗೆಲ್ಲುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
"ರಾಜಕೀಯಕ್ಕೆ ಬಂದು ಜಾತಿ ನೋಡಿದ್ರೆ ಹೇಗೆ? ನಾವು ಜಾತಿ ನೋಡಿದ್ರೆ ನಿರ್ನಾಮ ಆಗ್ತೀವಿ. ಚುನಾವಣೆ ಆಗುವಾಗ ನಾವು ಸಾಧನೆ ಹೇಳುತ್ತೇವೆ. ಬಿಜೆಪಿಯವರದು ಬರೀ ಹಿಂದೂ ಮುಸ್ಲಿಂ ಅಷ್ಟೇ. ಸಾಧನೆ ಸೊನ್ನೆ. ರಾಜಕೀಯ ಬೇಳೆ ಬೇಯಿಸೋಕೆ ಇವರು ಮಾತನಾಡುತ್ತಿದ್ದಾರೆ. ನಾವು ಯಾವ ರೈತರಿಗೂ ಅಕ್ರಮ ನೋಟಿಸ್ ಕೊಟ್ಟಿದ್ದರೆ ನಿಲ್ಲಿಸುತ್ತೇವೆ. ನೋಟಿಸ್ ಕೊಟ್ಟವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಇದು ಬಿಜೆಪಿಯ ಹುನ್ನಾರ. ಬಿಜೆಪಿಯವರ ಕಾಲದಲ್ಲಿ ನೋಟಿಸ್ ಕೊಟ್ಟಿದ್ದಾರೆ. ನಾನು ದಾಖಲೆ ಕೊಡುತ್ತೇನೆ. ಇದಕ್ಕೆ ಮಾನ್ಯ ಯತ್ನಾಳ್ ಏನು ಹೇಳುತ್ತಾರೆ. ಮುಜಾರಾಯಿ ವಕ್ಫ್ ಎರಡು ಒಂದೇ. ಮುಜರಾಯಿ ಇಲಾಖೆ ಆಸ್ತಿ ಕೂಡಾ ಒತ್ತುವರಿ ಆಗಿದೆ. ಅದನ್ನು ಉಳಿಸೋಣ ನಡೀರಿ" ಎಂದು ಯತ್ನಾಳ್ಗೆ ಕರೆ ಕೊಟ್ಟಿದ್ದರು.
ನಾಳೆ ನಾಮಪತ್ರ ವಾಪಸ್: ಇದೇ ವೇಳೆ ಮಾತನಾಡಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ, "ಇಂದು ಸಚಿವ ಜಮೀರ್ ಅಹ್ಮದ್ ಖಾನ್ ಜೊತೆಗೆ ತೆರಳಿ ನಾಮಪತ್ರ ವಾಪಸ್ ಪಡೆಯುತ್ತೇನೆ. ನಾಯಕರು ನನ್ನ ಜೊತೆಗೆ ಮಾತನಾಡಿದ್ದಾರೆ. ಟಿಕೆಟ್ ಸಿಗದೇ ಇರುವ ಕಾರಣ ಅಸಮಾಧಾನ ಆಗಿದ್ದು ನಿಜ" ಎಂದು ಹೇಳಿದ್ದರು.
"ನಮ್ಮ ಅಭಿಮಾನಿಗಳು ನಾಮಪತ್ರ ಸಲ್ಲಿಕೆ ಮಾಡು ಎಂದು ಒತ್ತಾಯ ಮಾಡಿದ್ದರು. ಅದಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ದೆ. ಆದರೆ ಸಿಎಂ, ಡಿಸಿಎಂ ನಮ್ಮ ಆಪ್ತರ ಜೊತೆಗೆ ಮಾತನಾಡಿದ್ದಾರೆ. ನಾನು ಸ್ಪರ್ಧೆ ಮಾಡಿದ್ರೆ ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರ ಸಲುವಾಗಿ ನಾನು ನಾಮಪತ್ರ ವಾಪಸ್ ಪಡೆಯುತ್ತಿದ್ದೇನೆ" ಎಂದು ತಿಳಿಸಿದ್ದರು.
"ಇನ್ನು ಮುಂದೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವೆ. ಬಿಜೆಪಿಯನ್ನು ಸೋಲಿಸಲು ಎಲ್ಲ ಪ್ರಯತ್ನ ಮಾಡುವೆ. ಈ ಬಾರಿ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲಲಿದೆ" ಎಂದು ಖಾದ್ರಿ ವಿಶ್ವಾಸ ವ್ಯಕ್ತಪಡಿಸಿದ್ದರು.
ಇವುಗಳನ್ನೂ ಓದಿ: