ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಆರಾಧ್ಯ ದೈವ ಮಹಾದಾಸೋಹಿ ಶರಣಬಸವೇಶ್ವರರ 202ನೇ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಮಹಾರಥೋತ್ಸವ ಅದ್ಧೂರಿಯಾಗಿ ಜರುಗಿತು. ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶರಣಬಸಪ್ಪ ಅಪ್ಪಾ ಹಾಗೂ ಚಿರಂಜೀವಿ ಡೊಡಪ್ಪ ಅಪ್ಪ ಅವರು ಭಕ್ತರಿಗೆ ಪರಸು ಬಟ್ಟಲು ದರ್ಶನ ಮಾಡಿ, ಶಂಖನಾದ ಮೊಳಗಿಸುತ್ತಿದ್ದಂತೆ ಅಲಂಕೃತ ಮಹಾರಥ ಎಳೆಯಲಾಯಿತು. ರಥಬೀದಿಯಲ್ಲಿ ರಥ ವೈಭವದಿಂದ ಸಾಗುತ್ತಿದ್ದಂತೆ ಭಕ್ತರು ಉತ್ತತ್ತಿ, ಬಾಳೆಹಣ್ಣು ರಥಕ್ಕೆಸೆದು ಭಕ್ತಿ ಸಮರ್ಪಿಸಿದರು.
ಶರಣರ ರಥೋತ್ಸವ ಕಣ್ತುಂಬಿಕೊಳ್ಳಲು ಪಕ್ಕದ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ರಾಜ್ಯಗಳಿಂದ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ರಥೋತ್ಸವ ನಿಮಿತ್ತ ಶರಣರ ಭಕ್ತರು ದೇವಸ್ಥಾನದ ಸುತ್ತಮುತ್ತಲಿನ ರಸ್ತೆಗಳ ಪಕ್ಕದಲ್ಲಿ ಅನ್ನಸಂತರ್ಪಣೆ, ಕುಡಿಯುವ ನೀರು, ಮಜ್ಜಿಗೆ, ಪಾನಕ ವ್ಯವಸ್ಥೆ ಮಾಡಿದರು.
ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಲಕ್ಷಾಂತರ ಭಕ್ತಗಣ ರಥೋತ್ಸವ ಕಣ್ತುಂಬಿಕೊಂಡು, ಶರಣರ ಕೃಪೆಗೆ ಪಾತ್ರರಾದರು. ಶರಣ ಮಹಾ ರಥೋತ್ಸವದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಇದನ್ನೂ ಓದಿ: ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಂಜನಗೂಡು ಪಂಚ ಮಹಾರಥೋತ್ಸವ ವೈಭವ: ವಿಡಿಯೋ - Pancha Maha Rathotsava