ದಾವಣಗೆರೆ : ಲೋಕಸಭಾ ಚುನಾವಣೆ ಈ ಬಾರಿ ಶಾಮನೂರು ಶಿವಶಂಕರಪ್ಪ ಹಾಗೂ ಜಿ. ಎಂ ಸಿದ್ದೇಶ್ವರ್ ಪ್ರತಿಷ್ಠಿತ ಕುಟುಂಬಗಳ ನಡುವೆ ನಡೆದಿದೆ. ರೋಚಕ ಚುನಾವಣೆಗೆ ಇಂದು ಮತದಾನ ಕೂಡ ನಡೆದಿದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಕುಟುಂಬ ಹಾಗೂ ಜಿ. ಎಂ ಸಿದ್ದೇಶ್ವರ್ ಅವರು ಕುಟುಂಬದ ಸಮೇತ ಬಂದು ಮತದಾನ ಮಾಡಿದ್ರು. ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ತಮ್ಮ ಪತಿ ಸಚಿವ ಎಸ್. ಎಸ್ ಮಲ್ಲಿಕಾರ್ಜುನ್ ಹಾಗೂ ಪುತ್ರಿ ಶ್ರೇಷ್ಠ ಶಾಮನೂರು, ಪುತ್ರ ಸಮರ್ಥ್ ಶಾಮನೂರು ಅವರೊಂದಿಗೆ ಆಗಮಿಸಿ, ಐಎಮ್ಎ ಹಾಲ್ ಮತಗಟ್ಟೆಯಲ್ಲಿ ಮತ ಚಲಾವಣೆ ಮಾಡಿದರು.
ಮತದಾನ ಮಾಡಿದ ನಂತರ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿ, "ಆಲ್ರೆಡಿ ಡಿಕ್ಲೇರ್ ಆಗಿದೆ. ಪ್ರಭಾ ಎರಡು ಲಕ್ಷ ಮತಗಳಿಂದ ಗೆಲುವು ಸಾಧಿಸಲಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆ ಆಗುತ್ತೆ ಎಂದು ಬರೆದುಕೊಡುವೆ. ಒಂದು ನೂರು ರೂಪಾಯಿ ಇಬ್ಬರು ಬಾಜಿ ಕಟ್ಟೋಣ, ಗೆಲುವು ನಮ್ಮದೇ. ಜನರದ್ದೇ ನಮಗೆ ಕಾನ್ಫಿಡೆನ್ಸ್. ರಾಜ್ಯದ್ದು ತೆಗೆದುಕೊಂಡು ನಾನೇನ್ ಮಾಡಲಿ. ದಾವಣಗೆರೆ ಲೋಕಸಭಾಕ್ಷೇತ್ರ ನಮಗೆ ಮುಖ್ಯ. ಯಾರು ಎಲೆಕ್ಷನ್ನಲ್ಲಿ ದುಡ್ಡು ಹಂಚುತ್ತಾರೆ ಹೇಳಿ. ಚುನಾವಣೆಯಲ್ಲಿ ಅವರೇನ್ ಮಾಡಿದ್ದಾರೆ. ನಿಮ್ಮ ಅಳಿಯಾ ಕತ್ತೆ ಕಾಯುತ್ತಿದ್ದಾನಾ? ಎಂದು ನಿಮ್ಮ ಮಾವ ಹೇಳಿದ ಎಂದು ಹೇಳಿ'' ಎಂದು ಶಾಮನೂರು ಶಿವಶಂಕರಪ್ಪ ಅಳಿಯ ಜಿ. ಎಂ ಸಿದ್ದೇಶ್ವರ್ಗೆ ಟಾಂಗ್ ಕೊಟ್ರು.
ಸಿದ್ದರಾಮಯ್ಯನವರ ಗ್ಯಾರಂಟಿಗಳು ಕೆಲಸ ಮಾಡಲಿವೆ : ಮತದಾನದ ಬಳಿಕ ಮಾತನಾಡಿದ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, "ಎಂಟು ವಿಧಾಸಭಾ ಕ್ಷೇತ್ರಗಳಲ್ಲಿ ನಮಗೆ ಮತ ಹಾಕಿ ಜನ ಜಯಶೀಲರಾಗಿ ಮಾಡ್ತಾರೆಂಬ ವಿಶ್ವಾಸ ಇದೆ. ಈ ಬಾರಿ ಸಿಎಂ ಸಿದ್ದರಾಮಯ್ಯನವರ ಗ್ಯಾರಂಟಿಗಳು ಕೆಲಸ ಮಾಡಲಿವೆ. ಜನ ಬದಲಾವಣೆ ಬಯಸಿದ್ದಾರೆ. ಗ್ಯಾರಂಟಿಗಳಿಂದ ಮಹಿಳೆಯರು ನಮಗೆ ಆಶೀರ್ವಾದ ಮಾಡಲಿದ್ದಾರೆ. ನಮ್ಮದು ದುಡಿದ ಗಂಟು ಖರ್ಚು ಮಾಡ್ತಿದ್ದೀವಿ. ಭ್ರಷ್ಟಾಚಾರ ಅವರಲ್ಲಿದೆ ಎಂದು ಜಿ. ಎಂ ಸಿದ್ದೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು. ಇವರಿಂದ ಕಾರ್ಯಕರ್ತರು ದೂರ ಸರಿದಿದ್ದಾರೆ. ಏಕೆ ದೂರ ಸರಿದ್ರು. ಇವರ ದುರಂಹಕಾರದಿಂದ ಈ ರೀತಿ ಆಗ್ತಿದೆ. ಅವರ ಕಾರ್ಯಕರ್ತರು ಕೂಡ ನಮಗೆ ಒಳ್ಳೆ ಸಮಯದಲ್ಲಿ ನಮ್ಮ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಅಚ್ಚರಿಯ ಹೇಳಿಕೆ ನೀಡಿದರು.
ಸಂಸದ ಜಿ. ಎಂ ಸಿದ್ದೇಶ್ವರ್ ಕುಟುಂಬ ಸಮೇತ ಹಕ್ಕು ಚಲಾವಣೆ : ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಹಾಗೂ ಪತಿ ಸಂಸದ ಜಿ. ಎಂ ಸಿದ್ದೇಶ್ವರ್ ಅವರು ಕುಟುಂಬ ಸಮೇತ ದಾವಣಗೆರೆ ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಇನ್ನು ಮತದಾನ ಮಾಡಲು ವಿದೇಶದಿಂದ ಬಂದ ಗಾಯತ್ರಿ ಸಿದ್ದೇಶ್ವರ್ ಮೊಮ್ಮೊಗ ಹಾಗೂ ಮೊಮ್ಮಗಳು ಇಬ್ಬರು ಮತಚಲಾವಣೆ ಮಾಡಿದ್ರು. ಮತಗಟ್ಟೆ 236ರಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮತದಾನ ಮಾಡಿದ್ರು.
ಮತದಾನ ಮಾಡಿದ ಬಳಿಕ ಮಾತನಾಡಿದ ಜಿ. ಎಂ ಸಿದ್ದೇಶ್ವರ್ ಅವರು, "ನಾನು ಕೂಡ ಮತ ಚಲಾವಣೆ ಮಾಡಿದ್ದೇನೆ. ಮೊದಲ ಬಾರಿಗೆ ನನ್ನ ಮೊಮ್ಮಕ್ಕಳು ಮತ ಹಾಕಿದರು. ಇಡೀ ಕುಟುಂಬ ಮತಚಲಾವಣೆ ಮಾಡಿದ್ದಾರೆ. ಎಲ್ಲಾ ಕಡೆ ಮತದಾನ ಆಗಿದೆ. ಹೆಚ್ಚು ಮತಗಳಿಂದ ಗೆಲುವು ನಮ್ಮದಾಗುತ್ತದೆ. ಸಂಜೆ ಲೀಡ್ ನೋಡಿಕೊಂಡು ಎಷ್ಟು ಅಂತರದಿಂದ ಗೆಲ್ಲುತ್ತೇವೆ ಎಂದು ಹೇಳ್ತೇವೆ'' ಎಂದರು.
ಪಕ್ಷೇತರ ಅಭ್ಯರ್ಥಿ ಜಿ. ಬಿ ವಿನಯ್ ಕುಮಾರ್ ಹಕ್ಕು ಚಲಾವಣೆ : ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಜಿ. ಬಿ ವಿನಯ್ ಕುಮಾರ್, ದಾವಣಗೆರೆ ತಾಲೂಕಿನ ಕರೂರು ಅಂಗನವಾಡಿ ಕೆಂದ್ರ ಮತಗಟ್ಟೆಯಲ್ಲಿ ಮತದಾನ ಮಾಡಿದ್ರು. ಅಭಿಮಾನಿಗಳೊಂದಿಗೆ ಮತಕೇಂದ್ರಕ್ಕೆ ಬಂದು ಮತದಾನ ಮಾಡಿದ ಬಳಿಕ ಪ್ರತಿಕ್ರಿಯಿಸಿದ ಅವರು, "ನಾನು ಇಂದು ಮತದಾನ ಮಾಡುವ ಮೂಲಕ ನನ್ನ ಪರಮಾಧಿಕಾರ ಚಲಾಯಿಸಿದ್ದೇನೆ. ಕ್ಷೇತ್ರದ ಎಲ್ಲಾ ಮತದಾನ ಕೇಂದ್ರಗಳಲ್ಲಿ ಬಿರುಸಿನ ಮತದಾನ ನಡೆದಿದೆ. ಜನ ಅತೀ ಹೆಚ್ಚು ಸಂಖ್ಯೆಯಲ್ಲಿ ಹೊರಬಂದು ಮತ ಚಲಾಯಿಸಬೇಕು. ನಿಮ್ಮ ಸ್ವಾಭಿಮಾನ, ಆತ್ಮಸಾಕ್ಷಿಗನುಗುಣವಾಗಿ ಒಳ್ಳೆಯ ಅಭ್ಯರ್ಥಿಗೆ ಮತ ಹಾಕಿ, ಮತ ಚಲಾಯಿಸಿ ಎಂದರು.
ಇದನ್ನೂ ಓದಿ : ಹುಬ್ಬಳ್ಳಿ: ಒಂದೇ ಕುಟುಂಬದ 96 ಜನರಿಂದ ಮತದಾನ, ಪ್ರಜಾಪ್ರಭುತ್ವ ಹಬ್ಬವನ್ನು ಸಂಭ್ರಮಿಸಿದ ಅವಿಭಕ್ತ ಕುಟುಂಬ - Totada Family Voted